ಭ್ರಷ್ಟರ ವಿರುದ್ಧ ಕ್ರಮ ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ ತನಿಖೆಯ ಸಂಸ್ಥೆಯಾದ ಲೋಕಾಯುಕ್ತದ ಬಲವರ್ಧನೆಗೆ ಆದ್ಯತೆ ನೀಡುತ್ತಿರುವುದು ಯೋಗ್ಯವಾದ ಕ್ರಮ. ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅವರ ಅಧಿಕಾರದ ಅವಧಿ ಮುಗಿಯುವ ಮೊದಲೇ ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ನೇಮಕ ಮಾಡಿದೆ. ಜೊತೆಗೆ ನ್ಯಾಯಮೂರ್ತಿ ಆರ್. ಗುರುರಾಜನ್ ಅವರನ್ನು ಉಪಲೋಕಾಯುಕ್ತರಾಗಿಯೂ ನೇಮಿಸಿದೆ. ಇತ್ಯರ್ಥವಾಗಬೇಕಾದ ಸಾವಿರಾರು ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಇಬ್ಬರು ಉಪ ಲೋಕಾಯುಕ್ತರನ್ನು ಒದಗಿಸಿದ ರಾಜ್ಯ ಸರ್ಕಾರದ ಕ್ರಮ, ಭ್ರಷ್ಟಾಚಾರ ನಿಯಂತ್ರಣ ಪ್ರಯತ್ನದಲ್ಲಿ ಮಹತ್ವದ್ದು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ತನಿಖೆ ಮಾಡುವಂಥ ಅಪರಾಧ ನಡೆದಿದೆ ಎಂದು ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಕುರಿತಾಗಿ ಸಲ್ಲಿಸಿದ ವರದಿಯನ್ನು ಆಧರಿಸಿ ಮುಖ್ಯಮಂತ್ರಿ ಅವರು ರಾಜೀನಾಮೆ ನೀಡುವಂತಾದ ಬೆಳವಣಿಗೆ ಲೋಕಾಯುಕ್ತ ತನಿಖೆಯ ನಿಷ್ಠುರ ನ್ಯಾಯನಿಷ್ಠೆಗೆ ನಿದರ್ಶನ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ, ಈ ಮೂಲಕ ಲೋಕಾಯುಕ್ತ ಸಂಸ್ಥೆಯ ಮಹತ್ವವನ್ನು ಎತ್ತಿ ಹಿಡಿದಿದೆ. ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಬೇಕೆಂಬ ಬೇಡಿಕೆ ಪೂರ್ಣ ಪ್ರಮಾಣದಲ್ಲಿ ಈಡೇರದಿದ್ದರೂ ಲಭ್ಯವಿದ್ದ ಅಧಿಕಾರವಷ್ಟನ್ನೆ ಬಳಸಿ ನಡೆಸಿದ ತನಿಖೆಯನ್ನು, ರಾಜ್ಯದ ಅಧಿಕಾರಾರೂಢ ಪಕ್ಷ, ಮುಖ್ಯಮಂತ್ರಿಯ ತಲೆದಂಡ ಪಡೆಯುವ ಮೂಲಕ ಒಪ್ಪಿಕೊಂಡಿರುವುದು ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆಯೇ ಆಗಿದೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಅನಿಯಂತ್ರಿತವಾಗಿ ಬೇರು ಬಿಟ್ಟಿರುವ ಕಾರಣ ಅಸಹಾಯಕರಾದ ಜನತೆಗೆ ಲೋಕಾಯುಕ್ತ ವ್ಯವಸ್ಥೆಯೇ ಭರವಸೆಯ ಆಶಾಕಿರಣ. ಆದರೆ, ಲೋಕಾಯುಕ್ತ ದಾಳಿಯಲ್ಲಿ ನೂರಾರು ಅಧಿಕಾರಿಗಳ ಅಕ್ರಮ ಗಳಿಕೆ ಬಯಲಾಗುತ್ತಿದ್ದರೂ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿಲ್ಲ. ಇದಕ್ಕೆ ಕಾರಣ, ಲೋಕಾಯುಕ್ತರು ಹಿಡಿದ ಭ್ರಷ್ಟರಿಗೆ ನ್ಯಾಯಾಲಯಗಳಲ್ಲಿ ಶಿಕ್ಷೆ ಕೊಡಿಸುವಲ್ಲಿ ಆಗುತ್ತಿರುವ ವಿಳಂಬ. ಲೋಕಾಯುಕ್ತರ ವರದಿ ಆಧರಿಸಿ ಮುಂದಿನ ಕಾನೂನು ಕ್ರಮವನ್ನು ರಾಜ್ಯ ಸರ್ಕಾರ ಮುಂದುವರಿಸಿದರೆ ಭ್ರಷ್ಟರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಭ್ರಷ್ಟಾಚಾರದಲ್ಲಿ ತೊಡಗಿ ಸಿಕ್ಕಿಬಿದ್ದವರನ್ನು ಹುದ್ದೆಯಿಂದ ವರ್ಗಾಯಿಸುವುದರಿಂದ ಇಲ್ಲವೇ ಸ್ಥಾನ ಚ್ಯುತಿ ಮಾಡುವುದರಿಂದ ಶಿಕ್ಷೆ ನೀಡಿದಂತಲ್ಲ. ಲೋಕಾಯುಕ್ತ ತನಿಖೆಯ ವರದಿ ಆಧರಿಸಿ ಕಾನೂನು ಕ್ರಮ ಕೈಗೊಂಡಾಗಲೇ ಅದಕ್ಕೆ ತಾರ್ಕಿಕ ಮುಕ್ತಾಯ. ರಾಜಕೀಯ ವ್ಯಕ್ತಿಗಳಿಗೆ ಇಂಥ ವ್ಯವಸ್ಥೆ ಅಪಥ್ಯವೆಂಬುದು ಅವರ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿದ್ದವರು ವಹಿಸಿಕೊಳ್ಳುವ ಲೋಕಾಯುಕ್ತರ ಹುದ್ದೆಗೆ ಸಾಂವಿಧಾನಿಕ ಮಹತ್ವವನ್ನು ನೀಡಲಾಗಿದ್ದರೂ ಅದನ್ನು ರಾಜಕೀಯ ಕಾರಣಕ್ಕಾಗಿ ಅವಹೇಳನ ಮಾಡುವ ಪ್ರವೃತ್ತಿಯೂ ಕಂಡುಬರುತ್ತದೆ. ಲೋಕಾಯುಕ್ತರ ವಿರುದ್ಧ ನಿಂದನೆ ನ್ಯಾಯಾಂಗ ನಿಂದನೆಯಂತೆ ಕಾನೂನು ಕ್ರಮಕ್ಕೆ ಗುರಿಯಾಗುವಂತೆ ಕಾಯ್ದೆ ತಿದ್ದುಪಡಿ ಮಾಡುವುದಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಲೋಕಾಯುಕ್ತ ಹುದ್ದೆ ಜನತೆಯಲ್ಲಿ ಭ್ರಷ್ಟಾಚಾರದ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವ ವೇದಿಕೆಯಾಗಿ ಭರವಸೆ ಮೂಡಿಸಿದೆ. ನೂತನ ಲೋಕಾಯುಕ್ತ ಶಿವರಾಜ ವಿ. ಪಾಟೀಲರ ನಿಷ್ಠುರ ನ್ಯಾಯಪರತೆ ಜನತೆಯ ನಿರೀಕ್ಷೆಯನ್ನು ಹೆಚ್ಚಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.