ರೈಲು ಸುರಕ್ಷತೆಗೆ ಗಮನ ಹೆಚ್ಚಲಿ ಜುಲೈ ಒಂದೇ ತಿಂಗಳಲ್ಲಿ ಮೂರು ಸರಣಿ ರೈಲು ದುರಂತ ಸಂಭವಿಸಿರುವುದು ಆಘಾತಕಾರಿ. ಈ ಅಪಘಾತಗಳಿಂದಾಗಿ ರೈಲು ಪ್ರಯಾಣ ಸುರಕ್ಷಿತ ಎಂಬ ಜನರ ನಂಬಿಕೆಗೆ ಈಗ ಆಘಾತ ಉಂಟಾಗಿದೆ. ಉತ್ತರ ಪ್ರದೇಶದ ಮಾಲ್ವಾ ಬಳಿ, ಅಸ್ಸಾಂನಲ್ಲಿ ಗುವಾಹಟಿ- ಪುರಿ ಎಕ್ಸ್‌ಪ್ರೆಸ್ ರೈಲು ಅಪಘಾತದ ಬೆನ್ನಲ್ಲೇ ಬೆಂಗಳೂರಿಗೆ ಹೊರಟಿದ್ದ ಗುವಾಹಟಿ ಎಕ್ಸ್‌ಪ್ರೆಸ್ ರೈಲು ದುರಂತಕ್ಕೀಡಾಗಿದೆ. ಈ ಅಪಘಾತಗಳನ್ನು ಗಮನಿಸಿದರೆ ರೈಲ್ವೆ ಸಚಿವಾಲಯ ರೈಲು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಹೊಣೆಗೇಡಿತನ. ಪ್ರತಿ ವರ್ಷವೂ ರೈಲು ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ವರ್ಷ ವಿಶ್ವದ ಹಲವು ಕಡೆಗಳಲ್ಲಿ ಸಂಭವಿಸಿದ 50 ಭಾರಿ ರೈಲು ದುರಂತಗಳಲ್ಲಿ 14 ಭಾರತದಲ್ಲಿಯೇ ನಡೆದಿವೆ. ಈ ರೈಲು ಅಪಘಾತಗಳಿಗೆ ತಾಂತ್ರಿಕ ದೋಷ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ. ಮುಖಾಮುಖಿ ಮತ್ತು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಯುವುದಕ್ಕೆ ಸಿಬ್ಬಂದಿಯು ಜಾಗ್ರತೆಯಿಂದ ಕರ್ತವ್ಯವನ್ನು ನಿರ್ವಹಿಸದಿರುವುದು ಮತ್ತು ರೈಲು ಸಂಚಾರದ ಬಗೆಗೆ ಇರುವ ಸಂಪರ್ಕದ ಕೊರತೆಯೂ ಕಾರಣ. ವಿಶ್ವದ ಅನೇಕ ದೇಶಗಳಲ್ಲಿ `ಗ್ಲೋಬಲ್ ಸಿಸ್ಟಮ್ಸ ಫಾರ್ ಮೊಬೈಲ್- ರೈಲ್ವೇಸ್~ (ಜಿಎಸ್‌ಎಂ-ಆರ್) ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ತಂತ್ರಜ್ಞಾನದಿಂದ ಹಳಿಯ ಪರಿಸ್ಥಿತಿ, ಸಿಗ್ನಲ್‌ಗಳ ಕಾರ್ಯಕ್ಷಮತೆ, ರೈಲುಗಳ ವೇಗ ನಿಯಂತ್ರಣ ಮುಂತಾದ ಮಾಹಿತಿ ಕ್ಷಣ ಕ್ಷಣದಲ್ಲಿ ರೈಲು ನಿಯಂತ್ರಣ ಕೊಠಡಿ ಮತ್ತು ರೈಲು ಚಾಲಕರಿಗೆ ಲಭ್ಯವಿರುತ್ತದೆ. ಪದೇ ಪದೇ ರೈಲು ಅಪಘಾತಗಳಾಗುತ್ತಿರುವ ಭಾರತದಲ್ಲಿ ಇಂತಹ ಅತ್ಯಾಧುನಿಕ ಡಿಜಿಟಲ್ ವೈರ್‌ಲೆಸ್ ತಾಂತ್ರಿಕ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಈಗ ಭಾರತೀಯ ರೈಲ್ವೆಗೆ ಇದೆ. ಆದರೆ ಜನಪ್ರಿಯತೆಯನ್ನೇ ಆಧಾರವನ್ನಾಗಿಟ್ಟುಕೊಂಡು ಪ್ರಯಾಣ ದರವನ್ನು ಏರಿಸದೆ ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಕಾರಣ ರೈಲ್ವೆಯಲ್ಲಿ ಸುರಕ್ಷತೆ ಮತ್ತು ಆಧುನೀಕರಣಕ್ಕೆ ಗಮನ ಕಡಿಮೆ ಆಗಿರುವ ಸಾಧ್ಯತೆ ಕಾಣುತ್ತಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿ ಇಲಾಖೆಗೆ ಪ್ರಧಾನವಾಗಬೇಕು. ರೈಲು ಪ್ರಯಾಣ ಈಗಲೂ ಅತ್ಯಂತ ಕಡಿಮೆ ವೆಚ್ಚದ ಮತ್ತು ರಸ್ತೆ ಪ್ರಯಾಣಕ್ಕಿಂತ ಸುರಕ್ಷಿತ ಎನ್ನುವ ಪ್ರಯಾಣಿಕರ ವಿಶ್ವಾಸವನ್ನು ರೈಲ್ವೆ ಸಚಿವಾಲಯ ಉಳಿಸಿಕೊಳ್ಳಬೇಕಿದೆ. ಪ್ರತಿ ವರ್ಷವೂ ಹೊಸ ಹೊಸ ಮಾರ್ಗಗಳನ್ನು ಮತ್ತು ಹೊಸ ರೈಲುಗಳನ್ನು ಸಂಚಾರಕ್ಕೆ ಬಿಡುವತ್ತ ತೋರುವ ಆಸಕ್ತಿ ರೈಲ್ವೆ ಮೂಲಸೌಕರ್ಯವನ್ನು ಹೆಚ್ಚಿಸುವ ಕಡೆಗೂ ಇರಬೇಕು. ಅಪಘಾತಗಳು ನಡೆದಾಗ ಸಚಿವರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದು, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಒಂದಿಷ್ಟು ನೆರವು ನೀಡುವುದು ಮತ್ತು ಇಲಾಖಾ ಮಟ್ಟದಲ್ಲಿ ತನಿಖೆಗೆ ಆಜ್ಞಾಪಿಸುವ ಸಾಂಪ್ರದಾಯಿಕ ಶಾಸ್ತ್ರಗಳನ್ನು ಮಾಡಿ ಅಲ್ಲಿಗೆ ತಮ್ಮ ಕರ್ತವ್ಯ ಮುಗಿಯೆತೆನ್ನುವ ಮನೋಭಾವ ಬದಲಾಗಬೇಕು. ರೈಲ್ವೆಯ ದಕ್ಷತೆಯನ್ನು ಹೆಚ್ಚಿಸುವತ್ತ ಸರ್ಕಾರ ಗಮನ ನೀಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.