ಬೇಕಾಬಿಟ್ಟಿ ಹೇಳಿಕೆ ಸಲ್ಲದು ಭಯೋತ್ಪಾದನೆ ಕುರಿತಂತೆ ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ಬೇಜವಾಬ್ದಾರಿಯುತವಾದುದು. `ಬಿಜೆಪಿ ಅಥವಾ ಆರ್‌ಎಸ್‌ಎಸ್ ತಮ್ಮ ತರಬೇತಿ ಶಿಬಿರಗಳಲ್ಲಿ ಹಿಂದೂ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ' ಎಂಬಂತಹ ಅವರ ಮಾತುಗಳು ಅವರು ಹೊಂದಿರುವಂತಹ ಕೇಂದ್ರ ಗೃಹ ಸಚಿವ ಸ್ಥಾನದ ಘನತೆಗೆ ಒಪ್ಪುವಂತಹದ್ದಲ್ಲ. `ಕೇಸರಿ ಭಯೋತ್ಪಾದನೆ'ಯ ವಿಚಾರ ಈ ಹಿಂದೆ ಅನೇಕ ಬಾರಿ ಪ್ರಸ್ತಾಪವಾಗಿದ್ದರೂ, ದೇಶದ ಗೃಹಮಂತ್ರಿಯೊಬ್ಬರು ಇಂತಹ ಆರೋಪಗಳನ್ನು ಬೇಕಾಬಿಟ್ಟಿ ಮಾಡಲಾಗದು. ಅವರು ಮಾಡುತ್ತಿರುವ ಆರೋಪ ನಿಜವಾಗಿದ್ದರೆ, ಅಂತಹ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರ ಇದ್ದೇ ಇದೆ. ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಾರ್ವಜನಿಕ ಸಂಘ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ದೇಶದ ಕಾನೂನಿನಲ್ಲಿ ಅವಕಾಶ ಇದೆ. ಆದರೆ ಭಯೋತ್ಪಾದನೆಯನ್ನು ಧರ್ಮಗಳ ಜೊತೆ ಸಮೀಕರಿಸಿ ನೀಡುವಂತಹ ಹೇಳಿಕೆಗಳು ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನೇ ದುರ್ಬಲಗೊಳಿಸುತ್ತವೆ. ಈ ವಿವಾದಾತ್ಮಕ ಹೇಳಿಕೆ ಜೊತೆ ಅಂತರ ಕಾಯ್ದುಕೊಳ್ಳುತ್ತಲೇ `ಆಕಸ್ಮಿಕವಾಗಿ ಈ ಮಾತುಗಳು ಹೊರಬಿದ್ದಿರಬಹುದು' ಎಂದು ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಂಡಿದೆ. ಹಾಗೆಯೇ ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ಹಾಗೂ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಅವರು ಶಿಂಧೆ ಹೇಳಿಕೆಗೆ ಆಧಾರವಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇಂತಹ ಗೊಂದಲಕಾರಿ ನಿಲುವುಗಳು ಭಯೋತ್ಪಾದನೆ ವಿರುದ್ಧದ ಹೋರಾಟದಂತಹ ಗಂಭೀರವಾದ ವಿಷಯದಲ್ಲಿ ಸಲ್ಲದು. ಹಿಂದೂ ಬಲ ಪಂಥೀಯ ಉಗ್ರರ ಕೈವಾಡಗಳಿವೆ ಎಂಬಂತ ಆರೋಪಗಳಿರುವ ಸಮ್‌ಝೋತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸೀದಿ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣಗಳು ನ್ಯಾಯಾಲಯಗಳಲ್ಲಿ ಇನ್ನೂ ವಿಚಾರಣೆಗಳ ವಿವಿಧ ಹಂತಗಳಲ್ಲಿವೆ ಎಂಬುದನ್ನು ನಾವು ನೆನಪಿಡಬೇಕು. ಇಂತಹ ಪ್ರಕರಣಗಳಲ್ಲಿ ಶಿಕ್ಷೆಯಾಗದೇ ತೀರ್ಮಾನಗಳನ್ನು ಕೊಡುವಂತಹದ್ದು, ಹಣೆಪಟ್ಟಿ ಹಂಚುವಂತಹದ್ದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ. ಅಮೆರಿಕದಲ್ಲಿ ವಿಶ್ವ ವ್ಯಾಪಾರ ಕೇಂದ್ರದ ಅವಳಿಗೋಪುರಗಳ ಮೇಲೆ ನಡೆದ ಸೆಪ್ಟೆಂಬರ್11ರ (9/11) ದಾಳಿಯ ನಂತರ `ಮುಸ್ಲಿಂ ಭಯೋತ್ಪಾದನೆ' ಎಂಬಂತಹ ವಿಚಾರ ವಿಶ್ವದಲ್ಲಿ ಚಾಲ್ತಿ ಪಡೆದುಕೊಂಡಿದ್ದು ದುರದೃಷ್ಟಕರ. ಆದರೆ ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಬಣ್ಣ ಇಲ್ಲ ಎಂಬ ಪರಿಕಲ್ಪನೆ ಬಲಗೊಳ್ಳಬೇಕಾಗಿರುವುದು ಅಗತ್ಯ. ರಾಜಕೀಯ ಲಾಭಗಳಿಗಾಗಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಧಾರ್ಮಿಕ ಆಯಾಮ ನೀಡುವುದು ಅಗ್ಗದ ಮತಬ್ಯಾಂಕ್ ರಾಜಕೀಯವಲ್ಲದೆ ಮತ್ತೇನಲ್ಲ. ಚುನಾವಣೆಗಳು ಸನಿಹದಲ್ಲಿರುವ ಈ ಸಂದರ್ಭದಲ್ಲಿ ಈ ಮತಬ್ಯಾಂಕ್ ರಾಜಕೀಯದ ಭಾಗವಾಗಿಯೇ ಶಿಂಧೆಯವರ ಹೇಳಿಕೆ ಹೊರಬಿದ್ದಿದೆ ಎಂಬುದು ಸ್ಪಷ್ಟ. ಆದರೆ ಇಂತಹ ಹೇಳಿಕೆಗಳು ರಾಷ್ಟ್ರದೊಳಗಿನ ವಿಭಜಕ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತವೆ ಎಂಬುದು ಗೃಹಸಚಿವ ಸ್ಥಾನದಲ್ಲಿರುವ ಶಿಂಧೆಯವರಿಗೆ ಗೊತ್ತಿರಬೇಕಿತ್ತು. ಈ ಬಗೆಯ ಹೇಳಿಕೆಗಳ ವಿವಾದಗಳ ಪ್ರಚಾರಕ್ಕಿಂತ ಭಯೋತ್ಪಾದನೆಯನ್ನು ಮಟ್ಟ ಹಾಕುವ ಕೆಲಸಗಳು ಮುಖ್ಯ. ಬೇಜವಾಬ್ದಾರಿ ನೆಲೆಯಲ್ಲಿ ನೀಡಿರುವ ಹೇಳಿಕೆಯನ್ನು ಹಿಂತೆಗೆದುಕೊಂಡು ಮುಂದೆ ಹೀಗಾಗದಂತೆ ಎಚ್ಚರ ವಹಿಸುವ ಮೂಲಕ ತಮ್ಮ ಘನತೆಯನ್ನು ಗೃಹಸಚಿವರು ಕಾಪಾಡಿಕೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.