ಪರಿಣತ ವೈದ್ಯರ ಸಮಸ್ಯೆ ಗ್ರಾಮೀಣ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಅಭಾವ ಇದೆ. ಸರ್ಕಾರಿ ಸೇವೆಗೆ ಸೇರಿದ ವೈದ್ಯರು ನಗರ ಪ್ರದೇಶಗಳನ್ನು ಬಿಟ್ಟು ಹೊರಗೆ ಹೋಗುವುದಕ್ಕೆ ಇಷ್ಟಪಡುವುದಿಲ್ಲ. ವೈದ್ಯಕೀಯ ಶಿಕ್ಷಣ ಮುಗಿಸಿದ ಬಳಿಕ ಇಂತಿಷ್ಟು ವರ್ಷ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕೆಲಸ ಮಾಡಬೇಕೆಂಬ ನಿಯಮಗಳಿದ್ದರೂ ಅವುಗಳನ್ನೆಲ್ಲ ಗಾಳಿಗೆ ತೂರಿ ನಗರ ಪ್ರದೇಶಗಳಲ್ಲಿಯೇ ಪ್ರಭಾವಿ ವೈದ್ಯರು ನೆಲೆಯೂರಿದ್ದಾರೆ. ಬಹುತೇಕ ಮಂದಿ ಗ್ರಾಮೀಣ ಪ್ರದೇಶಗಳ ಸೇವೆಯಿಂದ ತಪ್ಪಿಸಿಕೊಳ್ಳಲು ಮತ್ತು ಆಯಕಟ್ಟಿನ ಜಾಗ ಸಿಗದಿದ್ದಾಗ ವಿವಿಧ ಸರ್ಕಾರಿ ಇಲಾಖೆಗಳಿಗೆ ಮತ್ತು ಪ್ರಮುಖ ಜಾಗಗಳಿಗೆ ಎರವಲು ಸೇವೆಯ ಆಧಾರದ ಮೇಲೆ ನಿಯೋಜಿತರಾಗುತ್ತಾರೆ. ಇಂತಹವರನ್ನೆಲ್ಲ ಈಗ ಮಾತೃಇಲಾಖೆಗೆ ಕರೆಸಿಕೊಳ್ಳುವ ಸರ್ಕಾರದ ನಿರ್ಧಾರವೇನೋ ಮೆಚ್ಚುವಂತಹದ್ದು. ಹಿಂದೆಯೂ ಇಂತಹ ಪ್ರಯತ್ನಗಳು ನಡೆದಿವೆ. ಅವುಗಳೆಲ್ಲ ಫಲಕಾರಿಯಾಗಲಿಲ್ಲ. ಈ ಸಲವಾದರೂ ಸರ್ಕಾರದ ಉದ್ದೇಶ ಈಡೇರಬೇಕಿದೆ. ವಾಸ್ತವವಾಗಿ, ಅನುಭವಿ ಮತ್ತು ಪರಿಣತ ವೈದ್ಯರನ್ನು ಸರ್ಕಾರವೇ ಆಸ್ಪತ್ರೆಗಳ ಆಡಳಿತ ನಿರ್ವಹಣೆ ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ನೇಮಿಸುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಣತ ವೈದ್ಯರ ಕೊರತೆ ಉಂಟಾಗಲು ಇದೂ ಒಂದು ಕಾರಣ. ಉತ್ತರ ಕರ್ನಾಟಕದಲ್ಲಿಯೇ ಹೆಚ್ಚು ಪರಿಣತ ವೈದ್ಯರ ಕೊರತೆ ಇದೆ. ಪರಿಣತ ವೈದ್ಯರಿಗೆ ಆಕರ್ಷಕ ವೇತನ ಮತ್ತು ಇತರೆ ಸೌಲಭ್ಯವಿಲ್ಲದಿರುವುದೂ ಕಾರಣವಾಗಿರುವ ಸಂಗತಿಯನ್ನೂ ತಳ್ಳಿಹಾಕಲಾಗದು. ಖಾಸಗಿ ಆಸ್ಪತ್ರೆಗಳಲ್ಲಿನ ದುಡಿಮೆ, ಸಂಪಾದನೆಯನ್ನು ಗಮನಿಸಿದರೆ ಪರಿಣತ ವೈದ್ಯರು ಸರ್ಕಾರಿ ಸೇವೆಯಲ್ಲಿ ಮುಂದುವರಿಯುವುದು ಅಕರ್ಷಕವಲ್ಲ ಎನ್ನುವ ಮಾತುಗಳಿವೆ. ಸರ್ಕಾರಕ್ಕೆ ಇದೆಲ್ಲ ತಿಳಿಯದ ಸಂಗತಿಯೇನಲ್ಲ. ಇಂತಹ ಸಮಸ್ಯೆಯತ್ತಲೂ ಸರ್ಕಾರ ಗಮನಹರಿಸಬೇಕಿದೆ. ಈ ಮಧ್ಯೆ 600 ಮಂದಿ ಪರಿಣತ ವೈದ್ಯರ ನೇಮಕದ ಪ್ರಕ್ರಿಯೆ ಕೈಗೊಂಡಿರುವುದು ಸ್ವಾಗತಾರ್ಹ. ಈಗ ಹೊಸದಾಗಿ ನೇಮಕ ಮಾಡಿಕೊಳ್ಳುವ ಪರಿಣತ ವೈದ್ಯರಲ್ಲಿ ಶೇ 50ರಷ್ಟು ಮಂದಿಯನ್ನು ಉತ್ತರ ಕರ್ನಾಟಕ ಜಿಲ್ಲೆಗಳ ಆಸ್ಪತ್ರೆಗಳಿಗೆ ನೇಮಿಸುವ ಸರ್ಕಾರದ ಉದ್ದೇಶವೇನೋ ಸರಿ. ಆದರೆ ಕೇವಲ ವೈದ್ಯರನ್ನು ನೇಮಕ ಮಾಡಿದರಷ್ಟೇ ಸಾಲದು. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವನ್ನು ಹೆಚ್ಚಿಸಬೇಕು. ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕಟ್ಟಡ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಇದೆ. ರೋಗಿಗಳ ತಪಾಸಣೆ, ಅವರ ರೋಗ ಪತ್ತೆ ಮತ್ತು ಚಿಕಿತ್ಸಾ ಸೌಲಭ್ಯಗಳಿಲ್ಲ ಎಂಬ ದೂರುಗಳು ಕೇಳಿ ಬರುತ್ತಲೇ ಇವೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವವರು ಹೆಚ್ಚಾಗಿ ಬಡವರು. ಹಾಗಾಗಿ ಈ ಆಸ್ಪತ್ರೆಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಸರ್ಕಾರಿ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವಲ್ಲಿ ಸರ್ಕಾರ ಮುತುವರ್ಜಿ ವಹಿಸಬೇಕು. ಜೊತೆಗೆ ವೈದ್ಯರಲ್ಲಿ ಸೇವಾ ಮನೋಭಾವ ಮತ್ತು ಪ್ರಾಮಾಣಿಕತೆ ಹೆಚ್ಚಿದಾಗ ಇಂತಹ ವ್ಯಾಧಿಗೆ ಸೂಕ್ತ ಚಿಕಿತ್ಸೆ ದೊರೆಯಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.