ಅರಾಜಕೀಯ ನಾಟಕ ಆಡಳಿತಾರೂಢ ಬಿಜೆಪಿ ಮತ್ತು ಅದರಿಂದಲೇ ಕವಲೊಡೆದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) `ದಾಯಾದಿ ಕಲಹ'ಕ್ಕೆ ರಾಜ್ಯದಲ್ಲಿ ಜನಹಿತ ಬಲಿಯಾಗತೊಡಗಿದೆ. ಸರ್ಕಾರವನ್ನು ಉರುಳಿಸುವ ಹುನ್ನಾರದಲ್ಲಿ ಕೆಜೆಪಿ ತೊಡಗಿದೆ. ಆ ಪ್ರಯತ್ನದಲ್ಲೂ ದೃಢ ನಿಲುವು ಇದ್ದಂತಿಲ್ಲ. ಅದರಿಂದ ಪಾರಾಗಲು ಆಡಳಿತ ಪಕ್ಷವು ಹೊಸ ಹೊಸ ತಂತ್ರ ಹೆಣೆಯುವುದರಲ್ಲಿ ನಿರತವಾಗಿದೆ. ಈ ಕಿತ್ತಾಟದಲ್ಲಿ ಜನರ ಸಮಸ್ಯೆಗಳ ನಿವಾರಣೆ ಯಾರಿಗೂ ಬೇಕಾಗಿಲ್ಲ. ಬಿಜೆಪಿ ಮುಖಂಡರ ಬಾಯಲ್ಲಿ ದಿನಬೆಳಗಾದರೆ ಬಜೆಟ್ ಮಂಡನೆಯ ಜಪ. ಕೆಜೆಪಿ ಜೊತೆ ಗುರುತಿಸಿಕೊಂಡಿರುವ ಬಿಜೆಪಿ ಬಂಡಾಯ ಶಾಸಕರದು `ಅದಕ್ಕೆ ಅವಕಾಶ ನೀಡುವುದಿಲ್ಲ' ಎಂಬರ್ಥದಲ್ಲಿ ರಾಜೀನಾಮೆ ನಾಟಕ. ಕೊನೆ ಕಾಣದ ಈ ಪ್ರಹಸನ ಜನರಲ್ಲಿ ರೇಜಿಗೆ ಮೂಡಿಸಿದೆ. ಮುಂಗಡ ಪತ್ರ ಮಂಡಿಸಿದ ಮಾತ್ರಕ್ಕೆ ಸಮಾಜದಲ್ಲಿ ರಾತ್ರೋರಾತ್ರಿ `ಕ್ರಾಂತಿ'ಯಾದ ನಿದರ್ಶನ ಇದೆಯೇ? ಇದೆ ಎಂದು ಭ್ರಾಂತಿಗೆ ಒಳಗಾದಂತೆ ಉಭಯ ಪಕ್ಷಗಳ ಮುಖಂಡರು ಹುಯಿಲು ಎಬ್ಬಿಸಿರುವುದು ಅವರ ಅಪ್ರಬುದ್ಧತೆಯನ್ನು ತೋರುತ್ತದೆ. ಈಗಿನ ಸರ್ಕಾರದ ಅವಧಿ ಇರುವುದೇ ಮೂರು ತಿಂಗಳು. ಮುಂದಿನ ತಿಂಗಳಲ್ಲಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಬಜೆಟ್ ಮಂಡಿಸಲು ಸರ್ಕಾರಕ್ಕೆ ತಾಂತ್ರಿಕವಾಗಿ ಯಾವುದೇ ಅಡಚಣೆ ಇಲ್ಲ. ಆದರೆ, ಬಜೆಟ್‌ನಲ್ಲಿ ಘೋಷಿಸಿದ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕಾಲಾವಕಾಶ ದೊರೆಯುವುದಿಲ್ಲ. ಮುಂದೆ ಬರುವ ಸರ್ಕಾರಕ್ಕೆ ಅದನ್ನು ಜಾರಿಗೊಳಿಸಬೇಕಾದ ಬದ್ಧತೆಯೂ ಇಲ್ಲ. ಜಾರಿಗೆ ತರಲಾಗದ್ದನ್ನು ಪ್ರಕಟಿಸುವುದರಿಂದ ಪ್ರಯೋಜನ ಏನು? ಆರ್ಥಿಕ ವರ್ಷ ಮಾರ್ಚ್‌ಗೆ ಕೊನೆಗೊಳ್ಳಲಿದೆ. ಆ ನಂತರದ ಸೀಮಿತ ಅವಧಿಯ ಧನ ವಿನಿಯೋಗಕ್ಕೆ ಲೇಖಾನುದಾನ ಪಡೆಯುವ ತಾಂತ್ರಿಕ ಅಗತ್ಯವನ್ನು ಮನವರಿಕೆ ಮಾಡಿಕೊಡುವ ಬದಲು, ಇಡೀ ವರ್ಷದ ಬಜೆಟ್ ಮಂಡಿಸುವ ರೀತಿಯಲ್ಲಿ ಬೀಗುತ್ತಿರುವುದು ಸಲ್ಲದ ನಡವಳಿಕೆ, ವ್ಯರ್ಥ ಕಸರತ್ತು. ಘೋಷಣೆಗಳಿಂದ ಮತದಾರರನ್ನು ಒಲಿಸಿಕೊಳ್ಳಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದಕ್ಕಿಂತ ಮೂರ್ಖತನ ಮತ್ತೊಂದು ಇರಲಾರದು. `ಸರ್ಕಾರ ಬಹುಮತ ಕಳೆದುಕೊಂಡಿರುವುದರಿಂದ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಬಜೆಟ್ ಮಂಡಿಸಬಾರದು, ವಿಧಾನಸಭೆ ವಿಸರ್ಜಿಸಬೇಕು' ಎಂದು ಕೆಜೆಪಿ ಒತ್ತಾಯಿಸುತ್ತಲೇ ಇದೆ. ಬಹುಮತ ಸಾಬೀತಿಗೆ ಸದನವೇ ಸೂಕ್ತ ವೇದಿಕೆ. ಬಹುಮತ ಇದೆಯೋ ಇಲ್ಲವೋ ಎಂಬುದು ನಿರ್ಧಾರ ಆಗಬೇಕಾಗಿರುವುದು ಅಲ್ಲಿ. ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಮನವರಿಕೆಯಾದರೆ ರಾಜ್ಯಪಾಲರು ವಿಶ್ವಾಸಮತ ಯಾಚಿಸುವಂತೆ ಸೂಚಿಸಬಹುದು. ಈ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವುದು ಸರಿಯಲ್ಲ. ರಾಜೀನಾಮೆಗೆ ಗಡುವು ನೀಡುವುದು, ಮುಹೂರ್ತ ನಿಗದಿ ಮಾಡುವುದು ಪ್ರಚಾರದ ತಂತ್ರಗಳಷ್ಟೇ. ಸದಸ್ಯತ್ವ ತ್ಯಜಿಸಲು ನಿರ್ಧರಿಸಿರುವ ಶಾಸಕರು ಒಂದು ಸಾಲಿನ ರಾಜೀನಾಮೆ ಪತ್ರವನ್ನು ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದರೆ ಅದು ಅಂಗೀಕಾರ ಆಗುತ್ತದೆ. ಅದನ್ನು ಬಿಟ್ಟು ಹಾದಿ ರಂಪ ಬೀದಿ ರಂಪ ಮಾಡುತ್ತಿರುವುದು ಕೆಜೆಪಿಗೆ ಶೋಭೆ ತರುವುದಿಲ್ಲ. ಕೆಜೆಪಿ ಜೊತೆಗೂ ಇರಬೇಕು, ಸರ್ಕಾರದಿಂದ ಪ್ರಯೋಜನವನ್ನೂ ಪಡೆಯಬೇಕು ಎಂಬ ಕೆಲವು ಶಾಸಕರ ಇಬ್ಬಗೆ ನೀತಿ ಹಾಗೂ ಸರ್ಕಾರ ಬೀಳಿಸಿದ ಕಳಂಕ ತಮಗೆ ಅಂಟಬಾರದು ಎಂಬ ನಾಜೂಕಿನ ನಡೆ ರಾಜ್ಯದ ರಾಜಕೀಯ ಗೊಂದಲವನ್ನು ಮತ್ತಷ್ಟು ಗೋಜಲಾಗಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.