ಬೆಲೆ ಏರಿಕೆಯ ಹೊರೆ ಅಕ್ಕಿ ಬೆಲೆ ಕಳೆದ ಕೆಲ ದಿನಗಳಿಂದ ಏರುಮುಖದಲ್ಲಿದೆ. ಬತ್ತ ಹೆಚ್ಚಾಗಿ ಬೆಳೆಯುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿಯೇ ಅಕ್ಕಿ, ಬತ್ತ ದಿಢೀರನೇ ದುಬಾರಿಯಾಗಿದೆ. ಬೆಲೆ ಕೇಳಿದರೇ ಸಾಕು! ಬೆಚ್ಚಿ ಬೀಳುವ ಪರಿಸ್ಥಿತಿಯಿದೆ. ಹೆಚ್ಚು ಬೇಡಿಕೆಯಿರುವ ಸೋನಾ ಮಸೂರಿ ಅಕ್ಕಿಯ ಚಿಲ್ಲರೆ ಬೆಲೆ, ಮಾರುಕಟ್ಟೆಯಲ್ಲಿ 2-3 ದಿನಗಳ ಅವಧಿಯಲ್ಲೇ ಕಿಲೋಗೆ 5 ರಿಂದ 10 ರೂಪಾಯಿಯಷ್ಟು ದುಬಾರಿಯಾಗಿದೆ. ಒಂದು ಕಿಲೊ ಒಳ್ಳೆಯ ಅಕ್ಕಿ 50 ರೂಪಾಯಿಯ ಗಡಿಯನ್ನೂ ದಾಟಿದೆ ಎನ್ನುವುದು ಕಳವಳದ ಸಂಗತಿ. ಸಾಮಾನ್ಯವಾಗಿ ಈಗ ಹೊಸ ಬತ್ತ ಮಾರುಕಟ್ಟೆಗೆ ಬರುವ ಕಾಲ. ಇಂಥ ಸಂದರ್ಭದಲ್ಲಿ ಹಳೆ ಅಕ್ಕಿಗೆ, ಹೊಸ ಅಕ್ಕಿಗಿಂತ ಬೆಲೆ ಸ್ವಲ್ಪ ಹೆಚ್ಚಿರುವುದು ಸಹಜ. ಆದರೆ ಹೊಸ ಅಕ್ಕಿ ದರ ಕೂಡ ಗ್ರಾಹಕರ ಕೈಸುಡುತ್ತಿದೆ. ಇದರಿಂದ ಬಡವರು ಮಾತ್ರವಲ್ಲದೆ ಮಧ್ಯಮ ವರ್ಗದವರೂ ಕಂಗಾಲಾಗಿದ್ದಾರೆ. ಬತ್ತಕ್ಕೆ ಹೆಸರಾದ ತಮಿಳುನಾಡು ಮತ್ತು ಆಂಧ್ರದಲ್ಲಿ ಈ ಸಲ ಚಂಡಮಾರುತದ ಹಾವಳಿ ಮತ್ತು ಮಳೆಯ ಅಭಾವದಿಂದ ಬೆಳೆ ಕೈಕೊಟ್ಟಿದೆ. ನಿರೀಕ್ಷೆಯಷ್ಟು ಉತ್ಪಾದನೆಯಾಗಿಲ್ಲ. ಹೀಗಾಗಿ ಅಲ್ಲಿನ ವರ್ತಕರು ಕರ್ನಾಟಕದ ಮಾರುಕಟ್ಟೆಗೆ ಬಂದು ಖರೀದಿ ಮಾಡುತ್ತಿದ್ದಾರೆ. ಬತ್ತ ಮತ್ತು ಅಕ್ಕಿಯ ಅಂತರರಾಜ್ಯ ಸಾಗಣೆ ಮೇಲೆ ಯಾವುದೇ ನಿರ್ಬಂಧ ಇಲ್ಲದಿರುವುದು ಅವರಿಗೆ ವರವಾಗಿದೆ. ಅಲ್ಲದೆ ತುಂಗಭದ್ರಾ ಪ್ರದೇಶದಲ್ಲಿ ಮುಂಗಾರು ಕೊರತೆಯಿಂದ ರೈತರಿಗೆ ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬಿಟ್ಟಿರಲಿಲ್ಲ. ಇದರಿಂದ ನಾಟಿ ವಿಳಂಬವಾಗಿ ಇಳುವರಿ ಕಡಿಮೆಯಾಗಿದೆ. ಬೆಲೆ ಏರಿಕೆಗೆ ಅದು ಕೂಡ ಮತ್ತೊಂದು ಪ್ರಬಲ ಕಾರಣ. ದರ ಏರಿಕೆಯಿಂದ ಬೆಳೆಗಾರರಿಗೆ ಲಾಭವಾಗುತ್ತದೆ ಎಂದೇನಿಲ್ಲ. ಏಕೆಂದರೆ ಮಧ್ಯವರ್ತಿಗಳೇ ಎಲ್ಲವನ್ನೂ ನಿಯಂತ್ರಿಸುವ ಮಾರುಕಟ್ಟೆ ವ್ಯವಸ್ಥೆ ನಮ್ಮದು. ನೈಸರ್ಗಿಕ ವೈಪರೀತ್ಯ, ಇಳುವರಿ ಕುಸಿತ, ಹೊರ ರಾಜ್ಯಗಳಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಅಕ್ಕಿ ದುಬಾರಿಯಾಗುತ್ತಿದೆ ಎನ್ನುವುದೇನೋ ನಿಜ. ಆದರೆ ಪ್ರಮುಖ ಆಹಾರ ಧಾನ್ಯವೊಂದರ ದರ ಗಗನಕ್ಕೆ ಏರುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಗಾಯದ ಮೇಲೆ ಬರೆ ಎಳೆಯುವಂತೆ ಜೀವನಾವಶ್ಯಕ ವಸ್ತುಗಳು, ಸೇವೆಗಳ ದರವನ್ನು ಹೆಚ್ಚಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಪೈಪೋಟಿಗೆ ಇಳಿದಿವೆ. ಮುಕ್ತ ಮಾರಾಟದ ಎಲ್‌ಪಿಜಿ, ಡೀಸೆಲ್, ರೈಲು ಪ್ರಯಾಣ ದರ ಏರಿಕೆಯಾಗಿದೆ. ಸದ್ಯದಲ್ಲೇ ಹಾಲು ದುಬಾರಿಯಾಗುವ ಸೂಚನೆಗಳಿವೆ. ಪಶು ಆಹಾರದ ಬೆಲೆ ಏರಿದೆ. ಸಗಟು ಡೀಸೆಲ್ ದುಬಾರಿಯಾಗಿದ್ದರೂ ಕೆಲವೇ ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗಿದೆ ಎಂಬ ಏಕೈಕ ಕಾರಣಕ್ಕಾಗಿ ರಾಜ್ಯ ಸರ್ಕಾರ ಸದ್ಯಕ್ಕೆ ಬಸ್ ಪ್ರಯಾಣ ದರವನ್ನು ಹೆಚ್ಚಿಸದೇ ಸುಮ್ಮನಿದೆ. ಆದರೆ ಮುಂದೆ ದರ ಹೆಚ್ಚಳದ ತೂಗುಕತ್ತಿಯಂತೂ ಇದ್ದೇ ಇದೆ. ಹಾಲು, ಅಕ್ಕಿ ದರ ಏರಿದಂತೆ ಹೋಟೆಲ್ ತಿಂಡಿಗಳೂ ದುಬಾರಿಯಾಗುತ್ತವೆ. ಇವೆಲ್ಲ ಬಡವರು, ಮಧ್ಯಮ ವರ್ಗದವರ ಬದುಕನ್ನು ಮತ್ತಷ್ಟು ದುರ್ಬರಗೊಳಿಸುತ್ತವೆ. ಇನ್ನಾದರೂ ಸರ್ಕಾರ ಮೌನ ಮುರಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.