ಇಟಲಿಯ ವಿಶ್ವಾಸದ್ರೋಹ ಭಾರತದ ಇಬ್ಬರು ಮೀನುಗಾರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ಆರೋಪ ಹೊತ್ತಿರುವ ಇಟಲಿ ನೌಕಾಪಡೆಯ ಇಬ್ಬರು ಸಿಬ್ಬಂದಿಯನ್ನು ವಿಚಾರಣೆ ಎದುರಿಸಲು ಭಾರತಕ್ಕೆ ವಾಪಸ್ ಕಳಿಸುವುದಿಲ್ಲ ಎಂದು ಇಟಲಿ ಸರ್ಕಾರ ತಿರಸ್ಕರಿಸಿರುವುದು ಆಘಾತಕಾರಿ. ಕಳೆದ ವರ್ಷ ಕೇರಳ ಸಮುದ್ರ ತೀರದ ಬಳಿ ಮೀನುಗಾರರ ತಂಡವೊಂದರ ಮೇಲೆ ಕಡಲ್ಗಳ್ಳರೆಂದು ಭಾವಿಸಿ ಇಟಲಿಯ ನೌಕಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮವಾಗಿ ಇಬ್ಬರು ಮೀನುಗಾರರು ಸತ್ತಿದ್ದರು. ಹೀಗಾಗಿ ಹತ್ಯೆಯ ಆರೋಪಕ್ಕೊಳಗಾಗಿದ್ದ ನೌಕಾ ಸಿಬ್ಬಂದಿ ಕೇರಳದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ಆದರೆ ಫೆಬ್ರುವರಿ 22ರಂದು ನಡೆದ ಇಟಲಿಯ ಚುನಾವಣೆಗಳಲ್ಲಿ ಮತ ಹಾಕುವುದಕ್ಕಾಗಿ ಒಂದು ತಿಂಗಳ ಮಟ್ಟಿಗೆ ಸ್ವದೇಶಕ್ಕೆ ಹಿಂದಿರುಗಲು ಈ ಇಬ್ಬರು ನೌಕಾ ಸಿಬ್ಬಂದಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಈ ಸಂಬಂಧದಲ್ಲಿ ಜಾಮೀನು ಗಡುವು ಮುಗಿಯುವ ಮುಂಚೆಯೇ, ಆರೋಪಿಗಳು ಭಾರತಕ್ಕೆ ವಾಪಸಾಗುವರು ಎಂಬಂತಹ ಆಶ್ವಾಸನೆಯನ್ನು ಇಟಲಿ ಸರ್ಕಾರವೂ ನೀಡಿತ್ತು. ಇದಕ್ಕೂ ಮುಂಚೆ ತಮ್ಮ ಕುಟುಂಬದವರೊಂದಿಗೆ ಕ್ರಿಸ್‌ಮಸ್ ಆಚರಿಸಲು ಜಾಮೀನಿನಲ್ಲಿ ತೆರಳಿದ್ದ ಆರೋಪಿಗಳು ವಾಯಿದೆಯೊಳಗೇ ವಾಪಸಾಗಿ ನ್ಯಾಯಾಂಗದ ವಿಶ್ವಾಸವನ್ನು ಗೆದ್ದುಕೊಂಡಿದ್ದರು. ಮೊದಲ ಬಾರಿಗೆ ಹೋಲಿಸಿದರೆ ಈ ಬಾರಿ ಅವರು ಉದಾರ ಜಾಮೀನು ಷರತ್ತುಗಳ ಅನ್ವಯವೇ ತಮ್ಮ ದೇಶಕ್ಕೆ ತೆರಳಿದ್ದರು. ಇದನ್ನು ಒಟ್ಟಾಗಿ ಗ್ರಹಿಸಿದಲ್ಲಿ, ಭಾರತ ಸರ್ಕಾರವನ್ನು ವಂಚಿಸುವ ದೊಡ್ಡ ಕಾರ್ಯತಂತ್ರವೇ ಎದ್ದುಕಾಣುತ್ತದೆ. ವಿಶ್ವಾಸದ್ರೋಹ ಎಸಗಿದ ಕಳಂಕ ಇಟಲಿಯದಾಗಿದೆ. ಮೊದಲಿನಿಂದಲೂ, ಈ ಪ್ರಕರಣ ನವದೆಹಲಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದೇ ಇಟಲಿ ವಾದಿಸುತ್ತಾ ಬಂದಿದೆ. ಆದರೆ ಗುಂಡು ಹಾರಿಸಿದ ಸ್ಥಳ `ಅಂತರರಾಷ್ಟ್ರೀಯ ಜಲಮಾರ್ಗ'ಎಂಬುದನ್ನು ಕೇರಳ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗಳು ತಿರಸ್ಕರಿಸಿವೆ. ಆದರೆ ಈ ಇಟಾಲಿಯನ್ನರ ವಿಚಾರಣೆಯನ್ನು ರಾಜ್ಯದ ಬದಲು ಕೇಂದ್ರ ಸರ್ಕಾರ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಹೀಗಿದ್ದೂ, ಆರೋಪಿಗಳ ವಿಚಾರಣೆಗೆ ದೆಹಲಿಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಬಹುದಾದ ಬಗ್ಗೆ ಹೆಚ್ಚಿನ ಕ್ರಮವನ್ನೇನೂ ಕೇಂದ್ರ ಕೈಗೊಳ್ಳಲಿಲ್ಲ ಎಂಬುದನ್ನು ಗಮನಿಸಬೇಕು. ಆರಂಭದಿಂದಲೂ ಈ ಆರೋಪಿಗಳು ಭಾರತ ಬಿಟ್ಟು ತೆರಳಲು ಅನುಮತಿ ನೀಡುವ ವಿಚಾರದ ಬಗ್ಗೆ ಅವರನ್ನು ಬಂಧಿಸಿದ್ದ ಕೇರಳ ಪೊಲೀಸರು ವಿರೋಧ ವ್ಯಕ್ತ ಪಡಿಸುತ್ತಲೇ ಬಂದಿದ್ದರು ಎಂಬುದನ್ನೂ ಸ್ಮರಿಸಬೇಕು. ವಿಚಾರಣೆ ಎದುರಿಸಲು ಆರೋಪಿಗಳು ಮತ್ತೆ ವಾಪಸ್ ಬರಲಾರರೆಂಬ ಅವರ ಭೀತಿ ಈಗ ನಿಜವಾಗಿದೆ. ಇಟಲಿಯ ವರ್ತನೆ `ಅಂಗೀಕಾರಾರ್ಹವಲ್ಲ' ಎಂದೇನೊ ಈಗ ಪ್ರಧಾನಿ ಹೇಳಿದ್ದಾರೆ. `ರೋಮ್‌ನ ನಿರ್ಧಾರವನ್ನು ಅಧ್ಯಯನ ಮಾಡಲಾಗುತ್ತಿದೆ'ಎಂದು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಆದರೆ ವಿಶ್ವಾಸದ್ರೋಹ ಎಸಗಿ ಭಾರತಕ್ಕೆ ಅಗೌರವವನ್ನು ತೋರಿರುವಂತಹ ಇಟಲಿಯ ಈ ನಡವಳಿಕೆ ಯುಪಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡುವ ಸಂಗತಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.