ರಾಜಕೀಯ ನೇಮಕ ಏಕೆ? ಜಗದೀಶ ಶೆಟ್ಟರ್ ನೇತೃತ್ವದ ರಾಜ್ಯ ಸರ್ಕಾರದ ಅವಧಿ ಇನ್ನೇನು ಮುಗಿಯಲಿದೆ. ದಿನ ಎಣಿಸುತ್ತಿರುವ ಈ ಸರ್ಕಾರ, ಕೊನೆಗಾಲದಲ್ಲಿ ಸುಮಾರು 30 ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ದಿಢೀರನೆ ನೇಮಿಸಿರುವುದು ಸರಿಯಲ್ಲ. ಪಕ್ಷದ ಕಾರ್ಯಕರ್ತರನ್ನು ಖುಷಿಪಡಿಸುವ ಏಕೈಕ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಒಂದು ಬಗೆಯಲ್ಲಿ ಕೀಳು ಮಟ್ಟದ ರಾಜಕಾರಣ. ಇದರಿಂದ ರಾಜ್ಯದ ಬೊಕ್ಕಸ ಬರಿದಾಗುವುದು ಬಿಟ್ಟರೆ, ಜನತೆಗೆ ಕಿಂಚಿತ್ತು ಪ್ರಯೋಜನವೂ ಆಗಲಾರದು. ನಾಗರಿಕರ ತೆರಿಗೆ ಹಣ ಹೇಗೆ ಪೋಲು ಮಾಡಬಹುದು ಎಂಬುದಕ್ಕೆ ಇಂತಹ ಕ್ರಮಗಳು ನಿದರ್ಶನವಾಗಿ ನಿಲ್ಲುತ್ತವೆ. ಸಂಪನ್ಮೂಲಗಳನ್ನು ಆದ್ಯತೆಯ ಕೆಲಸಗಳಿಗೆ ವಿನಿಯೋಗಿಸಬೇಕಾದ ಸರ್ಕಾರ, ಆಳುವ ಪಕ್ಷದ ಹಿತ ಕಾಯುವ ಕೆಲಸಗಳಿಗೆ ದುರ್ವಿನಿಯೋಗ ಮಾಡುವುದನ್ನು ಜನರು ಕೂಡ ಮೆಚ್ಚುವುದಿಲ್ಲ. ಆಳುವ ಯಾವುದೇ ಪಕ್ಷ ಮತ್ತು ಸರ್ಕಾರ ಸೂಕ್ಷ್ಮತೆ ಕಳೆದುಕೊಂಡಾಗ ವಿವೇಚನಾರಹಿತವಾದ ಇಂತಹ ತೀರ್ಮಾನಗಳು ಹೊರಬೀಳುತ್ತವೆ. ಈ ಸರ್ಕಾರಕ್ಕೆ ಉಳಿದಿರುವ ಅವಧಿ ಬರಿ ಮೂರು ತಿಂಗಳು. ಹೊಸದಾಗಿ ನೇಮಕಗೊಂಡವರು ಈ ಅಲ್ಪ ಅವಧಿಯಲ್ಲಿ ಏನು ಸಾಧಿಸಲು ಸಾಧ್ಯ? ಓಡಾಟಕ್ಕೆ ಕೆಲವೊಂದು ಮಂದಿಗೆ ಗೂಟದ ಕಾರು ದೊರೆತ ಸಂತೋಷ ಬಿಟ್ಟರೆ, ಜನಪರವಾದ ಬೇರೆ ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಕೆಲಸ ಮಾಡುವುದಿರಲಿ; ತಾವು ಅಧ್ಯಕ್ಷರಾಗಿರುವ ನಿಗಮ-ಮಂಡಳಿಗಳ ಉದ್ದೇಶ ಹಾಗೂ ಕಾರ್ಯ ಚಟುವಟಿಕೆಗಳ ಸ್ವರೂಪವನ್ನು ತಿಳಿದುಕೊಳ್ಳಲು ಅನೇಕರಿಗೆ ಸಾಧ್ಯವಾಗುವುದಿಲ್ಲ! ಇಂತಹ ನೇಮಕಗಳಿಂದ ನಿಗಮ-ಮಂಡಳಿಗಳಿಗೂ ಯಾವುದೇ ರೀತಿಯಲ್ಲಿ ಪ್ರಯೋಜನ ಆಗುವುದಿಲ್ಲ. ಇರುವ ವ್ಯವಸ್ಥೆ ಇನ್ನಷ್ಟು ಹಾಳಾಗುವ ಸಾಧ್ಯತೆಯೇ ಹೆಚ್ಚು. ಜಾತಿ, ಪ್ರದೇಶದ ಲೆಕ್ಕಾಚಾರ ಅಥವಾ ಯಾವುದೋ ನಾಯಕನ ಬಂಟ ಎಂಬ ಕಾರಣಕ್ಕೆ ನೇಮಕವಾಗುವ ಅಧ್ಯಕ್ಷರಿಂದ ಆಡಳಿತದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಲಾಗದು. ಅದಕ್ಕೆ ಬೇಕಾದ ಪರಿಣತಿ ಹಾಗೂ ಅನುಭವವನ್ನು ಅವರು ಹೊಂದಿರುವುದಿಲ್ಲ. ಚುನಾವಣೆ ವೇಳೆ, ಕೈಲಾದಷ್ಟು ಕಾಸು ಮಾಡೋಣ ಎಂಬ ದುರಾಸೆಗೆ ಬಿದ್ದರೆ ಮುಗಿದೇಹೋಯಿತು. ಅದಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ಈ ಕ್ರಮ ಜನತೆಯ ಕ್ಷಮೆಗೆ ಅರ್ಹವಲ್ಲ. ಆಡಳಿತಾರೂಢ ಬಿಜೆಪಿ, ಅಂತಃಕಲಹದಿಂದ ನಲುಗಿದೆ. ಹಲವು ತಿಂಗಳುಗಳಿಂದ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಅಧಿಕಾರಕ್ಕೆ ತಂದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಚುನಾವಣೆ ಬಾಗಿಲು ಬಡಿಯುತ್ತಿರುವಾಗ, ಪಕ್ಷ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಬದಲು ಅದಕ್ಕೆ ಇನ್ನಷ್ಟು ಚ್ಯುತಿ ಬರುವಂತಹ ಕ್ರಮಗಳಿಗೆ ಮುಂದಾಗಿರುವುದು ದುರದೃಷ್ಟಕರ. ಇಂತಹ ತೀರ್ಮಾನಗಳಿಂದ ಮತದಾರರ ಮನಸ್ಸು ಗೆಲ್ಲಬಹುದು ಎಂದೇನಾದರೂ ಭಾವಿಸಿದ್ದರೆ ಅದು ಭ್ರಮೆ ಅಷ್ಟೇ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.