ಭ್ರಷ್ಟಾಚಾರದ ಸವಾಲು ಜನಪ್ರತಿನಿಧಿಗಳು ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ಸೇರುತ್ತಿರುವ ಈ ದಿನಗಳಲ್ಲಿ ಅದನ್ನು, ದೇಶ ಎದುರಿಸುತ್ತಿರುವ ದೊಡ್ಡ ಸವಾಲು ಎಂದು ಒಪ್ಪಿಕೊಳ್ಳದೆ ಪ್ರಧಾನಿ ಅವರಿಗೆ ಅನ್ಯಮಾರ್ಗವಿಲ್ಲ ಎಂಬುದು ಸ್ಪಷ್ಟ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಮಾಡಿದ ಪ್ರಧಾನಿ ಅವರ ಭಾಷಣ ಇದನ್ನೇ ಪ್ರಧಾನವಾಗಿ ಪ್ರಸ್ತಾಪಿಸಿದೆ. ತಮ್ಮ ಸರ್ಕಾರ ಎದುರಿಸುತ್ತಿರುವ ಬಹುಕೋಟಿಯ ಹಗರಣಗಳ ಸರಣಿಯ ಹಿನ್ನೆಲೆಯಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಬಲಿಷ್ಠವಾದ ಲೋಕಪಾಲವನ್ನು ಅಸ್ತಿತ್ವಕ್ಕೆ ತರುವ ಭರವಸೆಯನ್ನು ಅವರು ಪುನರುಚ್ಚರಿಸಿದ್ದಾರೆ. `ಲೋಕಪಾಲದ ಸ್ವರೂಪವನ್ನು ನಿರ್ಧರಿಸುವುದು ಸಂಸತ್ತು. ಇದನ್ನು ಅನಿರ್ದಿಷ್ಟ ನಿರಶನದ ಮಾರ್ಗದಿಂದ ಸಾಧಿಸಲಾಗದು~ ಎಂಬುದು ಬಲಿಷ್ಠ ಲೋಕಪಾಲಕ್ಕಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೈಗೊಳ್ಳಲು ಉದ್ದೇಶಿಸಿದ ಶಾಂತಿಯುತ ಪ್ರತಿಭಟನೆಗೆ ಪ್ರಧಾನಿ ನೀಡಿದ ಪರೋಕ್ಷ ಪ್ರತಿಕ್ರಿಯೆ. ಜನರ ಕಲ್ಯಾಣಕ್ಕಾಗಿ ಸರ್ಕಾರ ವೆಚ್ಚ ಮಾಡುವ ಹಣ ನೌಕರಶಾಹಿಯ ಜೇಬು ತುಂಬುತ್ತಿರುವುದನ್ನು ಒಪ್ಪಿಕೊಂಡಿರುವ ಪ್ರಧಾನಿ ಅವರು, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವುದಲ್ಲದೆ ಅದರ ಸಿಂಹಪಾಲನ್ನು ಕಬಳಿಸುವ ಜನಪ್ರತಿನಿಧಿಗಳ ಪಾತ್ರವನ್ನು ಜಾಣತನದಿಂದ ನಿರ್ಲಕ್ಷಿಸಿರುವುದು ಆಶ್ಚರ್ಯಕರ. `ಲೋಕಪಾಲ ವ್ಯಾಪ್ತಿಯಲ್ಲಿ ನ್ಯಾಯಾಂಗವನ್ನು ತರುವುದು ಅದರ ಸ್ವಾತಂತ್ರಕ್ಕೆ ಧಕ್ಕೆ ತಂದಂತೆ ಆಗುತ್ತದೆ~ ಎಂದಿರುವ ಅವರು ಈಗಾಗಲೇ ಮಂಡನೆಯಾಗಿರುವ ನ್ಯಾಯಾಂಗ ಉತ್ತರದಾಯಿತ್ವ ವಿಧೇಯಕವನ್ನು ಸಂಸತ್ತಿನಲ್ಲಿ ಶೀಘ್ರವೇ ಅಂಗೀಕರಿಸುವ ಭರವಸೆ ವ್ಯಕ್ತಪಡಿಸಿರುವುದು ಗಮನಾರ್ಹ ಅಂಶ. ಪ್ರಧಾನಿ ಅವರ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಸಾಮಾನ್ಯವಾಗಿ ಪ್ರಸ್ತಾಪವಾಗುವ ವಿದೇಶಾಂಗ ನೀತಿ ಕುರಿತ ಯಾವೊಂದು ಸಂಗತಿಯೂ ಈ ಸಲ ಪ್ರಸ್ತಾಪವಾಗಲಿಲ್ಲ. ನಕ್ಸಲೀಯರ ಸಮಸ್ಯೆ, ಅನಿಯಂತ್ರಿತ ಹಣದುಬ್ಬರದಿಂದ ಸಾಮಾನ್ಯಜನತೆಯನ್ನು ಬಾಧಿಸುತ್ತಿರುವ ಅವಶ್ಯಕ ವಸ್ತುಗಳ ಬೆಲೆ ಏರಿಕೆ, ಕೈಗಾರಿಕೆಗಳ ಅವಶ್ಯಕತೆಯನ್ನು ಪೂರೈಸಲು ನಡೆಸುತ್ತಿರುವ ಕೃಷಿ ಭೂಮಿಯ ಸ್ವಾಧೀನದಿಂದ ಉದ್ಭವಿಸುವ ಸಮಸ್ಯೆಗಳು ಪ್ರಸ್ತಾಪವಾದರೂ ಇವುಗಳಿಗೆ ನಿಶ್ಚಿತ ಪರಿಹಾರ ಸೂತ್ರಗಳ ಸುಳಿವೇನೂ ವ್ಯಕ್ತವಾಗಲಿಲ್ಲ. ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಆರಂಭಿಸಿದ ಹಣಕಾಸು ತಜ್ಞರಾದ ಪ್ರಧಾನಿ ತಮ್ಮ ಈಗಿನ ಪರಮಾಧಿಕಾರದ ಸಂದರ್ಭದಲ್ಲಿಯೂ ಹಣದುಬ್ಬರ ನಿಯಂತ್ರಣಕ್ಕೆ ಪರಿಹಾರ ಕಂಡು ಹಿಡಿಯಲಾಗದಿದ್ದರೆ ದೇಶದ ಜನತೆ ಯಾರಿಂದ ಪರಿಹಾರ ನಿರೀಕ್ಷಿಸುವುದು? ಆಹಾರ ಭದ್ರತೆಯ ಪ್ರಶ್ನೆ ಕಾಯ್ದೆ ಸ್ವರೂಪ ಪಡೆಯುವ ಸೂಚನೆ ಕ್ಷೀಣವಾಗಿ ಕೇಳಿಬಂದ ಪ್ರಸ್ತಾಪ. ಸತತವಾಗಿ ಎಂಟನೆಯ ವರ್ಷ ಕೆಂಪುಕೋಟೆಯಿಂದ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡುವ ಅಪರೂಪದ ಅವಕಾಶ ಪಡೆದ ಪ್ರಧಾನಿ ಮನಮೋಹನ್‌ಸಿಂಗ್ ತಮ್ಮ ಅಧಿಕಾರದ ಅವಧಿಯಲ್ಲಿನ ಸಾಧನೆಗಳಿಗೆ ಸಮಾಧಾನಪಡಲಿಲ್ಲ. ಬದಲಿಗೆ ಬಡತನ, ನಿರಕ್ಷರತೆಯಂಥ ಮೂಲ ಸಮಸ್ಯೆಗಳ ನಿವಾರಣೆಗೆ ಇನ್ನಷ್ಟು ಶ್ರಮಪಡುವ ಅನಿವಾರ್ಯತೆಯನ್ನು ಸೂಚಿಸಿದ್ದಾರೆ. ವಿಶೇಷ ಕಾರ್ಯಕ್ರಮಗಳ ಪ್ರಕಟಣೆ ಇಲ್ಲದೆ, ಸದ್ಯದ ಸ್ಥಿತಿಯ ವಿಶ್ಲೇಷಣೆಯ ಸಾಂಪ್ರದಾಯಿಕ ಚೌಕಟ್ಟಿಗೆ ಸೀಮಿತಗೊಂಡ ಪ್ರಧಾನಿ ಸಂದೇಶ ಔಪಚಾರಿಕತೆಯ ಶಿಷ್ಟಾಚಾರವನ್ನಷ್ಟೆ ಪಾಲಿಸಿದೆ. ದೇಶ ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ರಾಜಕೀಯ ಪಕ್ಷಗಳಲ್ಲಿ ಒಗ್ಗಟ್ಟು ಮೂಡಬೇಕೆಂಬ ಸಂದೇಶ ಎಲ್ಲ ಕಾಲಕ್ಕೂ ಸಲ್ಲುವ ಆಶಯವಷ್ಟೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.