ಬದಲಾವಣೆಯ ಗಾಳಿ ರಾಹುಲ್ ಗಾಂಧಿ ಅವರು 127 ವರ್ಷ ಹಳೆಯದಾದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಅವರ ತಾಯಿ ಸೋನಿಯಾಗಾಂಧಿಯವರ ನಂತರದ ಎರಡನೇ ಸ್ಥಾನ ಅವರದಾಗಿದೆ. ಬಹು ನಿರೀಕ್ಷಿತವಾದಂತಹ ಈ ಪ್ರಕಟಣೆ ಕಡೆಗೂ ಹೊರಬಿದ್ದಿದೆ. ಪಕ್ಷದ ನಾಯಕತ್ವವನ್ನು ರಾಹುಲ್ ಗಾಂಧಿಯವರು ವಹಿಸಿಕೊಳ್ಳುವರೆಂಬ ವಿಚಾರ ಬಹುದಿನಗಳಿಂದಲೂ ಚಾಲ್ತಿಯಲ್ಲಿತ್ತು. ಆದರೆ ಹೊಸ ಛಾಪು ಮೂಡಿಸುವ ರಾಜಕೀಯ ಕೌಶಲಗಳ ಕೊರತೆ ಹಾಗೂ ತಮ್ಮನ್ನು ತಾವು ಪ್ರತಿಪಾದಿಸಿಕೊಳ್ಳಲು ಅವರಿಗಿರುವ ಹಿಂಜರಿಕೆ ಅವರನ್ನು ಹಿನ್ನೆಲೆಯಲ್ಲಿಯೇ ಉಳಿಸಿದ್ದವು. ಅಂತೂ `ದೊಡ್ಡ ಹೊಣೆ'ಯನ್ನು ಹೊರಲು ಕಡೆಗೂ ರಾಹುಲ್ ಸಿದ್ಧರಾಗಿದ್ದಾರೆ. ಈ ಹಿಂದೆ ಅನೇಕ ವರ್ಷಗಳ ಕಾಲ ಅವರು ಯುವ ಕಾಂಗ್ರೆಸ್ ಹಾಗೂ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ನೇತೃತ್ವವನ್ನು ವಹಿಸಿದ್ದರು. `ರಾಷ್ಟ್ರದ ಯುವಜನರನ್ನು ಪ್ರತಿನಿಧಿಸುವ ತಮ್ಮ ಬದ್ಧತೆಯನ್ನು ರಾಹುಲ್ ಗಾಂಧಿ ನೇಮಕ ಪ್ರತಿನಿಧಿಸುತ್ತದೆ' ಎಂಬುದು ಕಾಂಗ್ರೆಸ್ ಹೇಳಿಕೆ. `ಭಾರತವನ್ನು ಪರಿವರ್ತಿಸುವ ಗುರಿ' ತನ್ನದು ಎಂದು ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ ರಾಹುಲ್ ಕೂಡ ಘೋಷಿಸಿದ್ದಾರೆ. `ಕಳೆದ ಎಂಟು ವರ್ಷಗಳಲ್ಲಿ ಪಕ್ಷದ ಜೊತೆ ಕೆಲಸ ಮಾಡಿದ್ದೇನೆ. ಇದೊಂದು ದೊಡ್ಡ ಸಂಘಟನೆ. ಒಟ್ಟಾಗಿ ನಾವು ರಾಷ್ಟ್ರವನ್ನು ಪರಿವರ್ತಿಸಬಹುದು' ಎಂದಿದ್ದಾರೆ ರಾಹುಲ್. 2004ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷದ ಸಂಘಟನೆಯಲ್ಲಿ ರಾಹುಲ್ ಹೆಚ್ಚು ಸಕ್ರಿಯರಾಗಿದ್ದರು. ನಂತರ 2007ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಕಷ್ಟು ಸೀಟುಗಳನ್ನು ಗಳಿಸಿದಾಗ ರಾಹುಲ್‌ರ ಪ್ರಭಾವವನ್ನು ಶ್ಲಾಘಿಸಲಾಗಿತ್ತು. ಆದರೆ ನಂತರ ಬಿಹಾರ, ಉತ್ತರಪ್ರದೇಶ ಹಾಗೂ ಗುಜರಾತ್ ಚುನಾವಣೆಗಳಲ್ಲಿ ರಾಹುಲ್ ಮಾಂತ್ರಿಕತೆಯೇನೂ ಪ್ರಭಾವ ಬೀರಲಿಲ್ಲ. ಈಗ, ಒಂಬತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ 2014ರಲ್ಲಿ ಲೋಕಸಭಾ ಚುನಾವಣೆಗಳು ಹತ್ತಿರ ಬಂದಿರುವ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಪಟ್ಟಾಭಿಷೇಕವಾಗಿದೆ.ಲೋಕಸಭಾ ಚುನಾವಣೆಗಳಿಗೆ ಉಳಿದಿರುವುದು ಇನ್ನು ಹದಿನೈದೇ ತಿಂಗಳುಗಳು. ಫೆಬ್ರುವರಿಯಲ್ಲೇ ಮೂರು ಈಶಾನ್ಯ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿವೆ. ರಾಜಸ್ತಾನ ಹಾಗೂ ದೆಹಲಿಯಂತಹ ಕಾಂಗ್ರೆಸ್ ಆಡಳಿತಸೂತ್ರವಿರುವ ರಾಜ್ಯಗಳ್ಲ್ಲಲೂ ಇದೇ ವರ್ಷವೇ ಚುನಾವಣೆಗಳು ನಡೆಯಲಿವೆ. ಜೊತೆಗೆ ಕರ್ನಾಟಕ ಹಾಗೂ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ತನ್ನ ಪ್ರಮುಖ ಪ್ರತಿಸ್ಪರ್ಧಿ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳುವ ಹವಣಿಕೆಯಲ್ಲೂ ಕಾಂಗ್ರೆಸ್ ಇದೆ. ಇಂತಹ ಸಂದರ್ಭದಲ್ಲಿ, ನಗರ ಮಧ್ಯಮವರ್ಗ ಅದರಲ್ಲೂ ಯುವಜನರ ಆಶೋತ್ತರಗಳಿಗೆ ದೂರವಾಗಿರುವುದನ್ನು ತಡೆಯಬೇಕೆಂದು ಸೋನಿಯಾ ಕರೆ ನೀಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿ ವಿದ್ಯಾರ್ಥಿನಿ ಅತ್ಯಾಚಾರ ವಿರುದ್ಧದ ಯುವಜನರ ಪ್ರತಿಭಟನೆಗೆ ಕಾಂಗ್ರೆಸ್ ಸ್ಪಂದನ ಅಡ್ಡಾದಿಡ್ಡಿಯದಾಗಿತ್ತು. ಯುವಜನರು ಬೀದಿಗಿಳಿದಿದ್ದಾಗ ರಾಹುಲ್‌ಗಾಂಧಿಯವರು ನೀಡಿದ್ದು ಬರೀ ಲಿಖಿತ ಹೇಳಿಕೆ. ರಾಷ್ಟ್ರದಲ್ಲಿ ನಡೆದಂತಹ ಅನೇಕ ವಾಗ್ವಾದಗಳ ಸಂದರ್ಭದಲ್ಲೂ ರಾಹುಲ್ ಮೌನವೇ ಎದ್ದುಕಂಡಿದೆ. ಹೀಗಿದ್ದೂ ಜೈಪುರದ ಅಧಿವೇಶನದಲ್ಲಿ ಹೆಚ್ಚಿನ ಯುವ ಪ್ರತಿನಿಧಿಗಳ ಹಾಜರಿ, ಪಕ್ಷದ ಮೇಲೆ ಹೆಚ್ಚುತ್ತಿರುವ ರಾಹುಲ್ ಪ್ರಭಾವದ ಸೂಚಕ ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್ ಗಾಂಧಿಗಿನ್ನೂ 42 ವರ್ಷ. ಇದೇನೂ ತೀರಾ ಚಿಕ್ಕ ವಯಸ್ಸಲ್ಲ. ಆದರೆ ಭಾರತದ ರಾಜಕೀಯ ನೇತಾರರ ಸರಾಸರಿ ವಯಸ್ಸು 65ಎಂಬುದನ್ನು ಪರಿಗಣಿಸಬೇಕು. ಹೀಗಾಗಿ, ಯುವಜನರೇ ಹೆಚ್ಚಿರುವ ಬದಲಾಗುತ್ತಿರುವ ಸದ್ಯದ ಭಾರತದ ಅಗತ್ಯಗಳಿಗೆ ಸ್ಪಂದಿಸುವಲ್ಲಿ ನೆಹರೂ ಕುಟುಂಬದ ಈ ಕುಡಿ ಯಶಸ್ವಿಯಾಗುವರೆ ಎಂಬುದನ್ನು ಬರಲಿರುವ ದಿನಗಳು ಹೇಳಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.