ಪರಿವರ್ತನೆಯೇ ಪರಿಹಾರ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ನಾಯ್ಕನೂರ ಗ್ರಾಮದಲ್ಲಿನ ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬ ತಾನು ಹೇಳಿದಂತೆ ಮನೆಯ ಕೆಲಸ ಮಾಡಿಲ್ಲ. ಮನೆಯಲ್ಲಿನ ಸಗಣಿ ಎತ್ತಲು, ಕಸಗುಡಿಸಲು ನಿರಾಕರಿಸಿದ ಎನ್ನುವ ಕಾರಣಕ್ಕಾಗಿ ಭೂ ಮಾಲೀಕನೊಬ್ಬನ ಕೆಂಗಣ್ಣಿಗೆ ಆ ಹಳ್ಳಿಯ ಇಡೀ ಪರಿಶಿಷ್ಟ ಜಾತಿಯ ಜನರು ಗುರಿಯಾಗಿರುವುದು ವಿಪರ್ಯಾಸ. ತಾವು ಹೇಳಿದ ಕೆಲಸ ಮಾಡಲು ನಿರಾಕರಿಸಿದರೆಂದು ಪರಿಶಿಷ್ಟ ಜಾತಿಯ 22 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ದೇಶ 65ನೇ ಸ್ವಾತಂತ್ರ್ಯವನ್ನು ಆಚರಿಸಿದರೂ, ಈ ಗ್ರಾಮದ ಪರಿಶಿಷ್ಟರಿಗೆ ಮಾತ್ರ ಇತರರಂತೆ ಬದುಕುವ ಸ್ವಾತಂತ್ರ್ಯ ಇನ್ನೂ ಮರೀಚಿಕೆ ಆಗಿರುವುದು ದುರಂತ. ದುಡಿಯುವ ಕೈಗಳಿಗೆ ಕೂಲಿ ಇಲ್ಲ. ದಿನಸಿ ಮತ್ತು ಚಹಾ ಅಂಗಡಿಗಳು ಅವರ ಪಾಲಿಗೆ ಬಂದ್. ಹೊರಗೆ ಬಹಿರ್ದೆಸೆಗೆ ಹೋಗಲೂ ಅಡ್ಡಿ. ಇದು ನಿಜಕ್ಕೂ ನಮ್ಮ ಗ್ರಾಮೀಣ ಭಾರತದ ಸಾಮಾಜಿಕ ಅಸಮಾನತೆಯ ವಾಸ್ತವ ಮುಖವನ್ನು ತೆರೆದಿಟ್ಟಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಪೊಲೀಸ್ ಅಧಿಕಾರಿಗಳು ಮಾಮೂಲಿನಂತೆ ಹಳ್ಳಿಗೆ ಭೇಟಿ ನೀಡಿ ಪರಿಶಿಷ್ಟರ ಮೇಲಿನ ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸಾಮಾಜಿಕ ಬಹಿಷ್ಕಾರದಿಂದ ತತ್ತರಿಸಿ ಹೋಗಿರುವ ಜನರ ಸಮಸ್ಯೆಗಳನ್ನು ಅಧಿಕಾರಿಗಳು ಕೇಳಿರುವುದನ್ನು ಬಿಟ್ಟರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿರುವುದು ಪರಿಸ್ಥಿತಿಯ ವ್ಯಂಗ್ಯ. ಸಾಮಾಜಿಕ ಬಹಿಷ್ಕಾರ ರದ್ದು ಮಾಡುವಂತೆ ಸವರ್ಣೀಯರ ಮನವೊಲಿಸುವ ಇಲ್ಲವೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವ ಮೂಲಕ ಆ ಹಳ್ಳಿಯಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸುವ ಕೆಲಸ ಆಗಬೇಕಿದೆ. ಪರಿಶಿಷ್ಟ ಜನರ ಮೇಲೆ ದೌರ್ಜನ್ಯ ನಡೆದರೆ ಆ ಘಟನೆಗಳಿಗೆ ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟ್ ಅವರನ್ನೇ ಹೊಣೆ ಮಾಡುವುದಾಗಿ ಹಲವು ವರ್ಷಗಳ ಹಿಂದೆಯೇ ಆದೇಶಗಳಾಗಿವೆ. ಅದರ ನಿಜವಾದ ಉದ್ದೇಶ ಪರಿಶಿಷ್ಟ ಜನರಿಗೆ ಜಿಲ್ಲಾಡಳಿತ ಆಸರೆಯಾಗಿ ನಿಲ್ಲಬೇಕೆನ್ನುವುದು. ಇಷ್ಟಾಗಿಯೂ ದೌರ್ಜನ್ಯ ಪ್ರಕರಣಗಳು ಅಲ್ಲಲ್ಲಿ ಮುಂದುವರಿದೇ ಇವೆ. ಪರಿಶಿಷ್ಟರ ರಕ್ಷಣೆಗೆ ಹಲವಾರು ಕಾಯ್ದೆ, ನಿಯಮಗಳಿದ್ದರೂ ಅವುಗಳೆಲ್ಲ ಕೇವಲ ಕಾಗದ ಮೇಲಷ್ಟೇ ಎನ್ನುವಂತಾಗಿರುವುದು ಸದ್ಯದ ಸ್ಥಿತಿ. ಪರಿಶಿಷ್ಟರ ವಿಚಾರದಲ್ಲಿ ಸರ್ಕಾರ ಪ್ರಾಮಾಣಿಕವಾಗಿಲ್ಲ ಎನ್ನುವುದು ಇಂಥ ಪ್ರಕರಣಗಳಲ್ಲಿ ಸಾಬೀತಾಗುತ್ತಿದೆ. ಸಾಮಾಜಿಕ ಪರಿವರ್ತನೆ ಮತ್ತು ಸಾಮರಸ್ಯವನ್ನು ತರುವ ಕೆಲಸವನ್ನು ಕೇವಲ ಸರ್ಕಾರಿ ಅಧಿಕಾರಿಗಳ ತಲೆಗೆ ಕಟ್ಟಿ ಸುಮ್ಮನಿದ್ದರೆ ಪರಿಸ್ಥಿತಿ ಬದಲಾಗುವುದಿಲ್ಲ. ಹಿಂದೂ ಸಮಾಜದ ಒಗ್ಗಟ್ಟು ಮತ್ತು ಸಮಾನತೆಯ ಬಗೆಗೆ ಮಾತನಾಡುವ ಮಠಾಧೀಶರು, ಹಿಂದೂ ಧರ್ಮದ ಪ್ರತಿಪಾದಕರು ಇಂತಹ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಸವರ್ಣೀಯರಲ್ಲಿರುವ ಅಸ್ಪೃಶ್ಯತೆ ಮತ್ತು ಅಸಹನೆಯನ್ನು ತ್ಯಜಿಸುವಂತೆ ಅವರ ಮನಸ್ಸನ್ನು ಪರಿವರ್ತಿಸುವ ಕೆಲಸವೂ ಆಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.