ನಿರಂಕುಶ ನಡವಳಿಕೆ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವುದನ್ನು ಸಹಿಸಿಕೊಳ್ಳಲಾಗದಷ್ಟು ಅಸಹನೆಯನ್ನು ಬೆಳೆಸಿಕೊಂಡಿರುವ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರದ ವರ್ತನೆ ಪ್ರಜಾಸತ್ತಾತ್ಮಕವಲ್ಲ. ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಬಲಿಷ್ಠವಾದ ಲೋಕಪಾಲ ವ್ಯವಸ್ಥೆ ಬೇಕು ಎಂದು ಆಗ್ರಹಿಸುವ ಶಾಂತಿಯುತ ಬೇಡಿಕೆಯನ್ನೂ ಪೊಲೀಸ್ ವ್ಯವಸ್ಥೆಯ ಮೂಲಕ ದಮನ ಮಾಡಲು ನಡೆಸಿರುವ ಯತ್ನ ಖಂಡನೀಯ. ಇದು ಪ್ರತಿಭಟನೆ ನಡೆಸುವ ಹಕ್ಕನ್ನು ಕಿತ್ತುಕೊಳ್ಳುವ ನಿರಂಕುಶ ನಡವಳಿಕೆ. ಸಜ್ಜನರು, ಪ್ರಾಮಾಣಿಕರು ಎಂಬ ಪ್ರತೀತಿ ಇರುವ ಪ್ರಧಾನಿ ಮನಮೋಹನ್‌ಸಿಂಗ್ ಅವರ ಸರ್ಕಾರದಲ್ಲಿ ಇಂಥ ದಮನಕಾರಿ ಪ್ರವೃತ್ತಿ ಇದೆ ಎಂಬುದು ಊಹೆಗೂ ನಿಲುಕದ ಸಂಗತಿ. ದೇಶ 65ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿಯಾಗಿ ಅವರು ಮಾಡಿದ ಭಾಷಣದಲ್ಲಿ ಅಣ್ಣಾಹಜಾರೆ ಅವರ ಅನಿರ್ದಿಷ್ಟ ನಿರಶನದ ಬಗ್ಗೆ ಇದ್ದ ಅಸಮಾಧಾನದ ಪ್ರಸ್ತಾಪ ಇಷ್ಟು ಬೇಗ ಪೊಲೀಸ್ ಕಾರ್ಯಾಚರಣೆಯಾಗಿ ಪರಿಣಮಿಸುತ್ತಿದೆ ಎಂದು ಜನ ಊಹಿಸಿರಲಿಲ್ಲ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಂವಿಧಾನದತ್ತವಾಗಿರುವ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಯಾವ ನಿರ್ದಿಷ್ಟ ಕಾರಣವೂ ಇಲ್ಲದೆ ಮೊಟಕುಗೊಳಿಸಿದ ಕೃತ್ಯ ಸರ್ವಾಧಿಕಾರ ಧೋರಣೆ. ಇದನ್ನು ಯಾವುದೇ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ತನ್ನ ಅತಿರೇಕದ ವರ್ತನೆಗಾಗಿ ಕೇಂದ್ರ ಸರ್ಕಾರ ದೇಶದ ಜನತೆಗೆ ವಿವರಣೆ ನೀಡಬೇಕಿದೆ. ಅಣ್ಣಾ ಹಜಾರೆ ಮತ್ತು ಅವರ ನಾಗರಿಕ ಸಮಾಜದ ತಂಡ ಸಾರ್ವಜನಿಕ ರಂಗದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಸರ್ಕಾರಕ್ಕೆ ಬಲವಾದ ಲೋಕಪಾಲ ವ್ಯವಸ್ಥೆ ಬೇಕು ಎಂದು ಆಗ್ರಹಪಡಿಸುತ್ತಿದೆ. ಸರ್ಕಾರ ಈಗ ಸಿದ್ಧಪಡಿಸಿ ಸಂಸತ್ತಿನ ಮುಂದೆ ಮಂಡಿಸಿದ `ಕರಡು ಮಸೂದೆ ದುರ್ಬಲವಾಗಿದೆ, ಅದರಿಂದ ಭ್ರಷ್ಟಾಚಾರಿಗಳು ಶಿಕ್ಷೆಗೊಳಗಾಗುವುದಕ್ಕಿಂತ ರಕ್ಷಣೆ ಪಡೆಯುವ ಅವಕಾಶವಿದೆ~ ಎಂಬುದನ್ನು ನಾಗರಿಕ ಸಮಾಜ ಮಾತ್ರವಲ್ಲದೆ ವಿವಿಧ ರಾಜಕೀಯ ಪಕ್ಷಗಳು ಹೇಳತೊಡಗಿವೆ. ಕಾಯ್ದೆ ರೂಪಿಸುವ ಸಂಸತ್ತಿನ ಪರಮಾಧಿಕಾರವನ್ನು ಅಣ್ಣಾ ಹಜಾರೆ ಅವರಾಗಲೀ, ನಾಗರಿಕ ಸಮಾಜವಾಗಲೀ ಯಾವತ್ತೂ ಪ್ರಶ್ನಿಸಿಲ್ಲ. ಆದರೆ, ಹಗರಣಗಳ ಸರಣಿಯನ್ನೇ ಒಡಲಲ್ಲಿರಿಸಿಕೊಂಡಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದನ್ನೇ ಅಡಗಿಸುವ ದಮನಕಾರಿ ನೀತಿಯನ್ನು ಪ್ರದರ್ಶಿಸುತ್ತಿದೆ. ಅಣ್ಣಾ ಹಜಾರೆ ಪರ್ಯಾಯ ಶಕ್ತಿಕೇಂದ್ರವಾಗಲು ಹವಣಿಸುತ್ತಿದ್ದಾರೆ ಎಂಬ ಅಪಪ್ರಚಾರ ನಡೆಸುವುದಕ್ಕೂ ಮುಂದಾಗಿದೆ. ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತುವವರ ಚಾರಿತ್ರ್ಯಹನನ ಕಾಂಗ್ರೆಸ್ಸಿನ ಇನ್ನೊಂದು ಕುತ್ಸಿತ ತಂತ್ರ. ಇವೆಲ್ಲ ಭ್ರಷ್ಟರನ್ನು ರಕ್ಷಿಸುವ ಹುನ್ನಾರ. `ಸೀಸರನ ಹೆಂಡತಿ ಸಂಶಯಾತೀತಳಾಗಿರಬೇಕು~ ಎಂದು ವಿರೋಧಪಕ್ಷದಲ್ಲಿದ್ದಾಗ ಸಂಸತ್‌ನಲ್ಲಿ ಗುಡುಗು ಹಾಕಿದವರು ಮನಮೋಹನ್‌ಸಿಂಗ್. ಈಗ ಯಾಕೆ ಅವರು ಲೋಕಪಾಲರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿಗಳ ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ? ಅವರು ಪ್ರತಿನಿಧಿಸುತ್ತಿರುವ ಪಕ್ಷ ಹೇರುತ್ತಿರುವ ಒತ್ತಡದ ಕಾರಣದಿಂದಾಗಿ ಅಸಹಾಯಕರಾಗಿದ್ದಾರೆ ಎನ್ನುವುದು ಸಮರ್ಥನೆ ಆಗುವುದಿಲ್ಲ. ಅದು ಅವರ ದೌರ್ಬಲ್ಯವಾಗುತ್ತದೆ. 2ಜಿ ತರಂಗಾಂತರ ಹಗರಣದಲ್ಲಿಯೂ ಈ ದೌರ್ಬಲ್ಯವೇ ಅವರನ್ನು ಆರೋಪಕ್ಕೆ ಈಡುಮಾಡಿರುವುದು. ಪ್ರಧಾನಿಯೊಬ್ಬರು ಸ್ವಂತ ನಿರ್ಧಾರ ಕೈಗೊಳ್ಳಲಾಗದಷ್ಟು ದುರ್ಬಲರಾಗುವುದು ದೇಶದ ಹಿತಕ್ಕೆ ಮಾರಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.