ಮಳೆಯ ಸಮಸ್ಯೆ; ಪಾಲಿಕೆ ನಿರ್ಲಕ್ಷ್ಯ ಇತ್ತೀಚಿನ ವರ್ಷಗಳಲ್ಲಿ ಮಳೆಯೇ ಬೆಂಗಳೂರಿನ ದೊಡ್ಡ ಸಮಸ್ಯೆ ಎನ್ನುವಂತಾಗಿದೆ. ನಗರ ಯದ್ವಾತದ್ವಾ ಬೆಳೆದು ಮಳೆ ನೀರು ಸಲೀಸಾಗಿ ಹರಿದು ಹೋಗಲು ಇದ್ದ ಕಾಲುವೆ ವ್ಯವಸ್ಥೆ ಹಾಳಾಗಿದ್ದೇ ಇದಕ್ಕೆ ಕಾರಣ. ಪ್ರತಿಸಲ ಮಳೆ ಬಿದ್ದಾಗಲೂ ಲಕ್ಷಾಂತರ ಜನರಿಗೆ ತೊಂದರೆಯಾಗುತ್ತದೆ. ಮಳೆಯ ಅನಾಹುತಗಳನ್ನು ತಪ್ಪಿಸುವಂತೆ ಜನರು ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಇಡೀ ರಾತ್ರಿ ಸುರಿದ ಮಳೆಗೆ ನಗರದ ಐವತ್ತಾರು ಪ್ರದೇಶಗಳ ಜನರಿಗೆ ತೊಂದರೆಯಾಗಿದೆ. ತಗ್ಗು ಪ್ರದೇಶಗಳಲ್ಲಿನ ಹತ್ತಾರು ಮನೆಗಳು ಕುಸಿದಿವೆ. ಸುಮಾರು ಇಪ್ಪತ್ತು ಕೋಟಿ ರೂಪಾಯಿಗೂ ಹೆಚ್ಚು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಪ್ರತಿಸಲ ಮಳೆ ಬಿದ್ದಾಗಲೂ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಎಷ್ಟೇ ಮಳೆ ಸುರಿದರೂ ನೀರು ಸಲೀಸಾಗಿ ಹರಿದು ಹೋಗುತ್ತಿತ್ತು. ನಗರದ ಬಹುತೇಕ ಪ್ರದೇಶಗಳ ರಾಜಕಾಲುವೆಗಳು ಒತ್ತುವರಿಯಾದ ನಂತರ ಹೀಗಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆಗೆ ರಾಜಕೀಯ ಅಡ್ಡಿಯಾಗಿದೆ. ಇದಕ್ಕೆ ಪೂರಕವಾಗಿ ನಗರದ ಬಹುತೇಕ ಕಡೆ ಮೆಟ್ರೋ ರೈಲು ಕಾಮಗಾರಿ, ಅಂಡರ್‌ಪಾಸ್, ರಸ್ತೆ ವಿಸ್ತರಣೆ ಮತ್ತಿತರ ಕಾಮಗಾರಿಗಳು ನಡೆಯುತ್ತಿವೆ. ಮಳೆ ನೀರು ಸಲೀಸಾಗಿ ಹರಿದು ಹೋಗುವ ಮಾರ್ಗಗಳೆಲ್ಲ ಬಂದ್ ಆಗಿವೆ. ಮಳೆಗಾಲಕ್ಕೆ ಮೊದಲೇ ಚರಂಡಿಗಳ ಹೂಳು ತೆಗೆದು ನೀರು ಸಲೀಸಾಗಿ ಹರಿದು ಹೋಗುವ ವ್ಯವಸ್ಥೆ ಮಾಡುವುದು ಪಾಲಿಕೆ ಜವಾಬ್ದಾರಿ. ಈ ಕೆಲಸಕ್ಕೆ ಕೋಟ್ಯಂತರ ರೂಪಾಯಿ ಹಣ ಖರ್ಚಾದರೂ ಪರಿಣಾಮ ಸೊನ್ನೆ. `ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ~ ಧೋರಣೆಯನ್ನು ಪಾಲಿಕೆ ಅನುಸರಿಸುತ್ತಿರುವುದರಿಂದ ಜನರ ಕಷ್ಟ ನಷ್ಟಗಳಿಗೆ ಕೊನೆಯೇ ಇಲ್ಲ. ಮಳೆಯ ನೀರು ಹರಿದು ಹೋಗಲು ಇರುವ ಅಡಚಣೆಗಳೇನು ಎನ್ನುವುದು ಪಾಲಿಕೆಗೆ ಗೊತ್ತಿದೆ. ರಾಜಕಾಲುವೆ ಸೇರಿದಂತೆ ಎಲ್ಲ ಬಗೆಯ ಒತ್ತುವರಿಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು. ಈ ವಿಷಯದಲ್ಲಿ ಪಾಲಿಕೆ ಕಠಿಣ ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರ ಅದಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ಒತ್ತುವರಿ ಮಾಡಿಕೊಂಡವರು ಎಷ್ಟೇ ದೊಡ್ಡವರಾದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು. ಮಳೆ ಬಂದಾಗಲೆಲ್ಲ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇವಸ್ಥಾನಕ್ಕೆ ಚರಂಡಿ ನೀರು ನುಗ್ಗುತ್ತಿದೆ. ಹಿಂದಿನ ಮುಖ್ಯಮಂತ್ರಿ ಕಳೆದ ವರ್ಷ ಅಲ್ಲಿಗೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬರಲಿಲ್ಲ. ದೇವಸ್ಥಾನ ಮಾತ್ರವಲ್ಲ, ಅನೇಕ ತಗ್ಗು ಪ್ರದೇಶಗಳದ್ದೂ ಇದೇ ಸಮಸ್ಯೆ. ಮಳೆ ಬಿದ್ದ ದಿನಗಳಲ್ಲಿ ಮಹಾಪೌರರು ಹಾಗೂ ಚುನಾಯಿತ ಪ್ರತಿನಿಧಿಗಳು ಚುರುಕಾಗಿ ಕಾರ್ಯ ನಿರ್ವಹಿಸಿದರೆ ಸಾಲದು. ಮಳೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಯೋಜನೆ ರೂಪಿಸಿ ಜಾರಿಗೊಳಿಸಬೇಕು. ಇದು ಪಾಲಿಕೆಯ ಜವಾಬ್ದಾರಿಯೇ ಆದರೂ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾದೀತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.