ಮುಚ್ಚಿಡುವುದೇನಿದೆ? ಸುಳ್ಳು ಹೇಳುವುದಕ್ಕೆ `ರೈಲು ಬಿಡುವುದು~ ಎಂದೂ ಹೇಳುತ್ತಾರೆ. ಬೆಂಗಳೂರು ಮಹಾನಗರದ `ನಮ್ಮ ಮೆಟ್ರೋ~ ಕಳೆದ ಎಂಟು ತಿಂಗಳುಗಳಿಂದ ಈ `ರೈಲು ಬಿಡುವ~ ಕೆಲಸ ಮಾಡುತ್ತಿದೆ. ಮೂಲ ಮೆಟ್ರೋ ಯೋಜನೆ ಪ್ರಕಾರ ಬೈಯ್ಯಪ್ಪನಹಳ್ಳಿ-ಮಹಾತ್ಮಗಾಂಧಿ ರಸ್ತೆ ನಡುವಿನ `ರೀಚ್-1~ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ತೆರೆದುಕೊಳ್ಳಬೇಕಿತ್ತು. ಅದರ ನಂತರ `ಬೆಂಗಳೂರು ಮೆಟ್ರೋ ರೈಲು ನಿಗಮ~ ಹಲವಾರು ಗಡುವುಗಳನ್ನು ನೀಡಿದರೂ ಮಹಾ ನಗರದ ಜನತೆಗೆ ಇನ್ನೂ ಮೆಟ್ರೋ ರೈಲು ಹತ್ತುವ ಭಾಗ್ಯ ಕೂಡಿಬಂದಿಲ್ಲ. ಕಳೆದ ಐದುವರ್ಷಗಳಲ್ಲಿ ಈ ಯೋಜನೆಯ ನಿರ್ಮಾಣ ವೆಚ್ಚ ದುಪ್ಪಟ್ಟಾಗಿದೆ. ಇದರ ಅನುಷ್ಠಾನ ಇದೇ ಗತಿಯಲ್ಲಿ ಮುಂದುವರಿದರೆ ಈ ವೆಚ್ಚ ಹಲವು ಪಟ್ಟು ಹೆಚ್ಚಾಗಲಿರುವುದು ಮಾತ್ರವಲ್ಲ 2014ಕ್ಕೆ ಎರಡು ಹಂತಗಳ ಮೆಟ್ರೋ ಯೋಜನೆ ಪೂರ್ಣಗೊಳ್ಳುವುದು ಕೂಡಾ ಅಸಾಧ್ಯ. ಈ ವಿಳಂಬಕ್ಕೆ ಕಾರಣ ಏನೆಂಬುದನ್ನು ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ. ಸಾರ್ವಜನಿಕರಲ್ಲಿ ಮೂಡಿರುವ ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ಪತ್ರಕರ್ತರಿಗೆ ನಿಗಮ ಯೋಜನಾ ಸ್ಥಳಕ್ಕೆ ಪ್ರವೇಶ ನಿರಾಕರಿಸಿದೆ. ತನ್ನ ಹುಳುಕುಗಳನ್ನು ಮುಚ್ಚಿಡಬೇಕಾದ ಪ್ರಸಂಗ ಎದುರಾದಾಗಲೆಲ್ಲಾ `ಅಧಿಕೃತ ರಹಸ್ಯ~ ಎಂಬ ಮುಸುಕಿನಡಿ ರಕ್ಷಣೆ ಪಡೆಯುವ ಕೆಲಸವನ್ನು ಸರ್ಕಾರಿ ಅಧಿಕಾರಿಗಳು ಆಗಾಗ ಮಾಡುತ್ತಿರುತ್ತಾರೆ. ಈಗ ಅದೇ ಕೆಲಸವನ್ನು ನಿಗಮ ಮಾಡುತ್ತಿದೆ. ಮೆಟ್ರೋ ಯೋಜನೆ ಯಾವುದೇ ಖಾಸಗಿ ವ್ಯಕ್ತಿಯ ಸ್ವಂತ ಆಸ್ತಿಯಲ್ಲ, ಇದು ಜನರ ತೆರಿಗೆ ಹಣದಿಂದ ನಿರ್ಮಾಣಗೊಳ್ಳುತ್ತಿರುವ ಯೋಜನೆ ಎಂಬುದನ್ನು ಈ ಅಧಿಕಾರಿಗಳು ತಿಳಿದುಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಮೂಡಿರುವ ಸಂಶಯದ ನಿವಾರಣೆ ಅವರ ಕರ್ತವ್ಯ. ಶೋಧನೆಯ ಮೂಲಕ ಸತ್ಯವನ್ನು ತಿಳಿದುಕೊಂಡು ಸಾರ್ವಜನಿಕರ ಗಮನಕ್ಕೆ ತರಬೇಕಾಗಿರುವುದು ಮಾಧ್ಯಮಗಳ ಹೊಣೆಗಾರಿಕೆಯೂ ಹೌದು. ಇದಕ್ಕೆ ಸಹಕಾರ ನೀಡಬೇಕಾಗಿರುವ ನಿಗಮ ಅಡ್ಡಗಾಲು ಹಾಕುತ್ತಿರುವುದು ಖಂಡನೀಯ. ಕಾಲ ಬದಲಾಗಿದೆ ಎನ್ನುವುದು ಬಹುಶಃ ನಿಗಮದಲ್ಲಿರುವ ಅಧಿಕಾರಿಗಳಿಗೆ ತಿಳಿದಿಲ್ಲ. ಪತ್ರಕರ್ತರೇ ಯಾಕೆ ಸಾರ್ವಜನಿಕರಿಗೂ ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವ ಅವಕಾಶ ಈಗ ಲಭ್ಯ. ಇದಕ್ಕಾಗಿ ಸರ್ಕಾರವೇ ಮಾಹಿತಿ ಹಕ್ಕು ಕಾಯಿದೆ ಎಂಬ ಅಸ್ತ್ರವನ್ನು ಎಲ್ಲರ ಕೈಗೆ ಕೊಟ್ಟಿದೆ. ಹೀಗಿದ್ದರೂ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಇನ್ನೂ `ಹಳೆಯ ಕಾಲದ ಬಾವಿ~ಯಲ್ಲಿಯೇ ಸುತ್ತು ಹೊಡೆಯುತ್ತಿರುವ ಹಾಗೆ ಕಾಣುತ್ತಿದೆ. ಸರ್ಕಾರದ ಯಾವುದೇ ಇಲಾಖೆ ಇರಲಿ, ಅಂತಿಮವಾಗಿ ಅದು ಜನತೆಗೆ ಉತ್ತರದಾಯಿಯಾಗಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿಗಳು ಜನವಿರೋಧಿಯಾದ ತಮ್ಮ ಈಗಿನ ನಿಲುವನ್ನು ತಿದ್ದಿಕೊಂಡು ಪಾರದರ್ಶಕ ರೀತಿಯಲ್ಲಿ ಕಾರ‌್ಯನಿರ್ವಹಿಸಲು ಕಲಿಯಬೇಕು. ಮಾಧ್ಯಮಗಳಿಗೆ ಸಾರ್ವಜನಿಕ ಹಿತಾಸಕ್ತಿಯ ಕಾವಲು ಕಾಯುವ ಹೊಣೆಗಾರಿಕೆಯಿರುವುದರಿಂದ ಅವುಗಳ ಕರ್ತವ್ಯ ನಿರ್ವಹಣೆಗೆ ಅಗತ್ಯ ಇರುವ ಎಲ್ಲ ಬಗೆಯ ಸಹಕಾರ ನೀಡಬೇಕು. ಯೋಜನಾ ಪ್ರದೇಶಕ್ಕೆ ಪ್ರವೇಶ ನಿರಾಕರಿಸಿರುವ ಆದೇಶವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.