ಕಬ್ಬು ಬೆಳೆಗಾರರ ಸಮಸ್ಯೆ ರಾಜ್ಯದ ಕೆಲವೆಡೆ ಕಬ್ಬು ಬೆಳೆ ಕಟಾವಿಗೆ ಬಂದಿದೆ. ಕಾರ್ಖಾನೆಗಳು ಕಬ್ಬು ಅರೆಯುವ ಕೆಲಸ ಆರಂಭವಾಗಬೇಕು. ಪ್ರಸ್ತುತ ಸಾಲಿನಲ್ಲಿ ಕಬ್ಬಿನ ದರ ನಿಗದಿ ಪಡಿಸುವಲ್ಲಿ ಆಗಿರುವ ವಿಳಂಬವನ್ನು ಕಬ್ಬು ಬೆಳೆಗಾರರು ಸರ್ಕಾರದ ಗಮನ ಸೆಳೆದಿದ್ದಾರೆ. ಕಬ್ಬಿಗೆ ವೈಜ್ಞಾನಿಕವಾಗಿ ದರ ನಿಗದಿಪಡಿಸಬೇಕೆನ್ನುವುದು ಬೆಳೆಗಾರರ ಒತ್ತಾಯ. ಪ್ರತಿ ವರ್ಷ ಈ ಒತ್ತಾಯ ಮಾಡುತ್ತಿದ್ದರೂ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಗೆ ಹಿಂದೇಟು ಹಾಕುತ್ತಾ ಬಂದಿರುವುದು ವಿಪರ್ಯಾಸ. ಸಕ್ಕರೆ ಕಾರ್ಖಾನೆಗಳು ಜುಲೈ ಮತ್ತು ಆಗಸ್ಟ್‌ನಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಿಸಬೇಕು. ಆದರೆ ಸೂಕ್ತ ಬೆಲೆ ನಿಗದಿಯಾಗದ ಕಾರಣ ಬೆಳೆಗಾರರು ಇನ್ನೂ ಕಬ್ಬನ್ನು ಕಟಾವು ಮಾಡುವುದಕ್ಕೆ ಕೈಹಾಕಿಲ್ಲ. ಕಬ್ಬು ಬೆಳೆದು ಈಗಾಗಲೇ 12ರಿಂದ 15 ತಿಂಗಳಾಗಿದೆ. ಬೆಲೆ ನಿಗದಿ ಆಗದ ಕಾರಣ ಬೆಳೆಗಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡುವ ಮುನ್ನ ಸದ್ಯಕ್ಕೆ ಟನ್ನಿಗೆ 2000 ರೂಪಾಯಿ ನಿಗದಿ ಮಾಡಬೇಕು, ನಂತರ ಅಂತಿಮ ದರವನ್ನು 2500 ರೂಪಾಯಿಗೆ ನಿಗದಿ ಪಡಿಸಬೇಕೆನ್ನುವುದು ರೈತರ ಪಟ್ಟು. ಈ ಬೇಡಿಕೆಯನ್ನು ಖಾಸಗಿ ಕಾರ್ಖಾನೆಗಳು ಒಪ್ಪದಿರುವುದರಿಂದ ಸಮಸ್ಯೆ ಬಗೆಹರಿಯದೆ ಕಗ್ಗಂಟಾಗಿದೆ. ಕಾರ್ಖಾನೆಗಳು ಸಕ್ಕರೆ ಉತ್ಪಾದನೆ ಜೊತೆಗೆ ಕಾಕಂಬಿ ಸೇರಿದಂತೆ ಇತರೆ ಉಪ ಉತ್ಪನ್ನಗಳಿಂದ ಲಾಭ ಗಳಿಸುತ್ತಿವೆ. ಆದ್ದರಿಂದ ಕಬ್ಬಿನ ದರವನ್ನು ಟನ್‌ಗೆ 2500 ರೂಪಾಯಿಗೆ ನಿಗದಿಪಡಿಸುವುದರಿಂದ ಕಾರ್ಖಾನೆಗಳಿಗೆ ನಷ್ಟವೇನೂ ಆಗುವುದಿಲ್ಲ ಎನ್ನುವುದು ರೈತರ ವಾದ. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ವರ್ಷವೂ ಸಕ್ಕರೆ ಬೆಲೆ ಹೆಚ್ಚುತ್ತಲೇ ಇರುವುದರಿಂದ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಲು ಹಿಂದೇಟು ಹಾಕುವುದೇಕೆ ಎನ್ನುವ ರೈತರ ವಾದವನ್ನು ತಪ್ಪು ಎನ್ನಲಾಗದು. ಕಬ್ಬು ಬೆಳೆಯಲು ರೈತರು ಮಾಡುವ ಖರ್ಚನ್ನು ವೈಜ್ಞಾನಿಕವಾಗಿ ಲೆಕ್ಕಾಚಾರ ಹಾಕಿ ಅದರ ಅನ್ವಯವೇ ದರ ನಿಗದಿ ಮಾಡಬೇಕೆನ್ನುವ ಅವರ ಬೇಡಿಕೆಯು ನ್ಯಾಯ ಸಮ್ಮತವಾಗಿದೆ. ಕೃಷಿಯು ಇಂದಿನ ದಿನಗಳಲ್ಲಿ ಲಾಭದ ಕ್ಷೇತ್ರವಾಗಿ ಉಳಿದಿಲ್ಲ. ಜೊತೆಗೆ ರೈತರು ಕೃಷಿಯಲ್ಲಿ ತಮ್ಮ ಮನೆಯವರ ಶ್ರಮ ಮತ್ತು ದುಡಿಮೆಯನ್ನು ಎಂದೂ ಲೆಕ್ಕಹಾಕಿದವರಲ್ಲ. ಆದರೆ ಪ್ರತಿ ವರ್ಷ ಹೆಚ್ಚುತ್ತಿರುವ ರಸಗೊಬ್ಬರ ಬೆಲೆ ಮತ್ತು ಕೂಲಿಯಿಂದಾಗಿ ರೈತರು ನಷ್ಟವನ್ನೇ ಅನುಭವಿಸುವಂತಾಗಿದೆ. ಆದ್ದರಿಂದಾಗಿ ಕಬ್ಬು ವಾಣಿಜ್ಯ ಬೆಳೆಯಾದರೂ ಇಂದಿನ ದಿನಗಳಲ್ಲಿ ಅದು ಸಹಾ ಲಾಭದಾಯಕವಾಗಿಲ್ಲ ಎನ್ನುವ ಅಂಶವನ್ನು ಸರ್ಕಾರ ಗಮನಿಸಬೇಕಿದೆ. ಕಬ್ಬು ಕಟಾವು ಮಾಡದೆ ಗದ್ದೆಯಲ್ಲೇ ಒಣಗುವ ಮುನ್ನ ಆದಷ್ಟು ಬೇಗ ಸರ್ಕಾರ ಕಬ್ಬಿನ ಬೆಲೆಯನ್ನು ನಿರ್ಧರಿಸುವ ವ್ಯವಸ್ಥೆ ಬರಬೇಕು. ಹಾಗೆಯೇ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಆರಂಭಿಸುವಂತಾದರೆ ಬೆಳೆಗಾರರನ್ನು ಮತ್ತು ಸಕ್ಕರೆ ಉದ್ಯಮವನ್ನೂ ರಕ್ಷಿಸಿದಂತಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.