ಸರ್ಕಾರ ಪ್ರತಿಷ್ಠೆ ಬಿಡಬೇಕು ಸತ್ಯಾಗ್ರಹ ಮಾಡಲು ಸರ್ಕಾರದ ಅನುಮತಿ ಪಡೆಯುವುದಕ್ಕೆ ದೇಶದಾದ್ಯಂತ ಜನ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರೆ ಅಲ್ಲಿ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದು ಹೇಳುವುದು ಸಾಧ್ಯವಿಲ್ಲ. ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಸತ್ತೆಯ ಮೌಲ್ಯಗಳನ್ನು ಎತ್ತಿಹಿಡಿದ ದಾಖಲೆಯೇನೂ ಇಲ್ಲ. ಅಧಿಕಾರಕ್ಕೆ ಕುತ್ತು ಬಂದಾಗ ಸಂವಿಧಾನವನ್ನೇ ತಿರುಚಿ ಜನಾದೇಶವನ್ನೇ ದುರುಪಯೋಗ ಮಾಡಿಕೊಂಡ ಅದರ ಸರ್ವಾಧಿಕಾರ ಧೋರಣೆಯ ಪರಿಚಯ ದೇಶದ ಜನತೆಗೆ ಕಳೆದ ಶತಮಾನದ 70ರ ದಶಕದಲ್ಲಿ ಅನುಭವಕ್ಕೆ ಬಂದಿದೆ. ಜನತೆಯ ಮೂಲಭೂತ ಹಕ್ಕುಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುವ ಕಾಂಗ್ರೆಸ್ಸಿನ ನಿರಂಕುಶ ಪ್ರವೃತ್ತಿಯ ಕ್ರೌರ್ಯವನ್ನು ಆಂತರಿಕ ತುರ್ತು ಪರಿಸ್ಥಿತಿ ಜಾರಿಯಲ್ಲಿ ಇಲ್ಲದಿದ್ದಾಗಲೂ ಜನ ಅನುಭವಿಸಬೇಕಾಗುತ್ತದೆ ಎಂಬುದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಪ್ರಕರಣದಲ್ಲಿ ಈಗ ಬಯಲಿಗೆ ಬಂದಿದೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಬಲಿಷ್ಠ ಕಾನೂನು ರೂಪಿಸುವುದಕ್ಕಾಗಿ ಒತ್ತಾಯಿಸಲು ಸತ್ಯಾಗ್ರಹ ನಡೆಸುವುದಕ್ಕೆ ಸರ್ಕಾರದ ಅನುಮತಿ ಪಡೆಯಲು ಅಣ್ಣಾ ಹಜಾರೆ ಮೂರು ದಿನಗಳಿಂದ ಉಪವಾಸ ನಡೆಸುತ್ತಾ ಜೈಲಿನಲ್ಲಿ ಕಳೆಯಬೇಕಾಯಿತು; ಅವರ ಬೇಡಿಕೆಯನ್ನು ಬೆಂಬಲಿಸಿ ಸಹಸ್ರಾರು ಜನ ಬೀದಿಗಿಳಿದು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕಾಯಿತು. ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರದ ನಿರಂಕುಶ ಸರ್ವಾಧಿಕಾರ ಧೋರಣೆಗೆ ಇದಕ್ಕಿಂತಲೂ ಬೇರೆ ನಿದರ್ಶನಗಳು ಬೇಕಿಲ್ಲ. ದೆಹಲಿಯ ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ಮುಂದುವರಿಸಲು ಸರ್ಕಾರ ಅನುಮತಿ ನೀಡಿರುವುದು ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಸಿಕ್ಕ ಸಣ್ಣ ಮಟ್ಟದ ಗೆಲುವಷ್ಟೆ. ಇದು ಬಲಿಷ್ಠ ಲೋಕಪಾಲ ಕಾನೂನು ರೂಪಿಸುವ ಬೇಡಿಕೆಯ ಬಗ್ಗೆ ಯಾವ ನಿರೀಕ್ಷೆಯನ್ನೂ ಮೂಡಿಸುವುದಿಲ್ಲ. ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಲೋಕಪಾಲ ಮಸೂದೆ ಪ್ರಧಾನಿ ಮತ್ತು ನ್ಯಾಯಾಂಗವನ್ನು ಹೊರಗಿಟ್ಟ ದುರ್ಬಲ ವಿಧೇಯಕ ಎಂಬುದನ್ನು ಹಲವು ವಿರೋಧ ಪಕ್ಷಗಳು ಬಣ್ಣಿಸಿದ್ದರೂ ಅಣ್ಣಾ ಹಜಾರೆ ಅವರ ನಾಗರಿಕ ಸಮಾಜ ರೂಪಿಸಿದ ಜನಲೋಕಪಾಲ ಮಸೂದೆಯ ಅಂಶಗಳನ್ನು ಅದರಲ್ಲಿ ಸೇರಿಸಿಕೊಳ್ಳುವ ಬಗ್ಗೆ ಯಾವೊಂದು ರಾಜಕೀಯ ಪಕ್ಷವೂ ಆಸಕ್ತಿ ತಾಳಿಲ್ಲ. ಇದು ಈ ಕುರಿತಾಗಿ ಸಂಸತ್ತಿನಲ್ಲಿ ವ್ಯಕ್ತವಾದ ಚರ್ಚೆಯಲ್ಲಿ ಸ್ಪಷ್ಟವಾಗಿದೆ. ಹಾಗೆ ನೋಡಿದರೆ ಯಾವ ರಾಜಕೀಯ ಪಕ್ಷಕ್ಕೂ ಬಲಿಷ್ಠವಾದ ಲೋಕಪಾಲ ವ್ಯವಸ್ಥೆ ಬೇಕಿಲ್ಲ. ಇವುಗಳ ಬಣ್ಣ ಬಯಲಾಗಬೇಕಾದರೆ ಜನಲೋಕಪಾಲ ಮಸೂದೆ ಲೋಕಸಭೆಯಲ್ಲಿ ಯಾವುದಾದರೂ ರೂಪದಲ್ಲಿ ಮಂಡನೆಯಾಗಬೇಕು. ಎರಡು ಮಸೂದೆಗಳನ್ನು ಮಂಡಿಸಲು ಅವಕಾಶ ಇಲ್ಲ ಎನ್ನುವ ಸಂಪ್ರದಾಯವನ್ನು ಮುರಿಯುವುದು ಬೇಡವೆಂದಾದರೆ ಖಾಸಗಿ ಸದಸ್ಯರ ಮಸೂದೆಯಾಗಿ ಮಂಡಿಸಲಿ. ಇದರಿಂದ ಜನಲೋಕಪಾಲ ಮಸೂದೆ ಬಗ್ಗೆ ತಾವು ಆರಿಸಿ ಕಳುಹಿಸಿದ ಪ್ರತಿನಿಧಿಗಳ ಅಭಿಪ್ರಾಯ ಏನೆಂಬುದನ್ನು ಮತದಾರರು ಕೂಡಾ ತಿಳಿದುಕೊಂಡಂತಾಗುತ್ತದೆ. ಉಪವಾಸ ಸತ್ಯಾಗ್ರಹಕ್ಕೆ ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರ ಬಿಕ್ಕಟ್ಟನ್ನು ಸ್ವಲ್ಪ ಕಾಲ ಮುಂದೂಡಿದೆ ಅಷ್ಟೆ. ಇದು ಶಾಶ್ವತವಾದ ಪರಿಹಾರವೇನೂ ಅಲ್ಲ. ಅದರ ನಂತರವೂ ಅಣ್ಣಾ ಹಜಾರೆ ಮತ್ತು ಬೆಂಬಲಿಗರು ಪಟ್ಟು ಸಡಿಲಿಸಲಾರರು. ಈ ಪರಿಸ್ಥಿತಿಯಲ್ಲಿ ಜನಲೋಕಪಾಲ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲು ಅವಕಾಶ ನೀಡುವ ಹೊರತಾಗಿ ಯುಪಿಎ ಸರ್ಕಾರಕ್ಕೆ ಬೇರೆ ದಾರಿ ಇಲ್ಲ. ಪೊಳ್ಳು ಪ್ರತಿಷ್ಠೆ ಇದಕ್ಕೆ ಅಡ್ಡಿಯಾಗಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.