ಪ್ರತಿಭಟನೆಯ ಹಕ್ಕು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಕೈಗೊಳ್ಳಬೇಕೆಂದಿರುವ ಅನಿರ್ದಿಷ್ಟಾವಧಿಯ ನಿರಶನಕ್ಕೆ ಕೇಂದ್ರ ಸರ್ಕಾರ ಹಾಕಿರುವ ಷರತ್ತುಗಳು ಮತ್ತು ನಿರ್ದಿಷ್ಟ ಸ್ಥಳ ನಿರಾಕರಣೆಯು ಜನತಂತ್ರ ವ್ಯವಸ್ಥೆಯಲ್ಲಿ ಜನರಿಗೆ ಇರುವ ಪ್ರತಿಭಟನೆಯ ಹಕ್ಕನ್ನೇ ಮೊಟಕು ಮಾಡುವ ದಮನಕಾರಿ ನೀತಿ. ಇದು ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆ. ನಿರಶನ ನಡೆಸಲು ಆಯ್ಕೆ ಮಾಡುವ ಜಾಗಗಳಿಗೆ ಒಂದಲ್ಲ ಒಂದು ಆಕ್ಷೇಪ ಎತ್ತಿರುವುದು, 72 ಗಂಟೆ ನಂತರ ನಿರಶನ ನಡೆಸಬಾರದು ಮತ್ತು ಆ ಪ್ರದೇಶದಲ್ಲಿ ಐದು ಸಾವಿರ ಜನರಿಗಿಂತ ಹೆಚ್ಚು ಸೇರಬಾರದು ಎಂಬ ಷರತ್ತುಗಳು ತುರ್ತು ಪರಿಸ್ಥಿತಿ ಕಾಲದ ನಿರ್ಬಂಧಗಳನ್ನು ನೆನಪಿಗೆ ತರುತ್ತವೆ. ಆಡಳಿತದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಧಾನಿಯನ್ನೂ ಒಳಗೊಂಡ ಬಲಿಷ್ಠವಾದ ಜನ ಲೋಕಪಾಲ್ ಕಾಯ್ದೆಯನ್ನು ರೂಪಿಸಬೇಕೆನ್ನುವ ಅಣ್ಣಾಅವರ ಹೋರಾಟಕ್ಕೆ ಅನವಶ್ಯಕವಾಗಿ ಅಡ್ಡಿ ಉಂಟು ಮಾಡುವ ಸರ್ಕಾರದ ಕ್ರಮ ಖಂಡನೀಯ. ನಿರಶನಕ್ಕೆ ಸ್ಥಳ ನೀಡಲು ನಿರಾಕರಿಸಿದ ಮತ್ತು ಷರತ್ತುಗಳನ್ನು ವಿಧಿಸಿರುವ ಪೊಲೀಸ್ ಕ್ರಮದ ಬಗೆಗೆ ಅಣ್ಣಾ ಅವರ ಮನವಿಗೆ ಪ್ರಧಾನಿ ಮನಮೋಹನ್ ಸಿಂಗ್ ತೋರಿರುವ ತಾಂತ್ರಿಕ ಪ್ರತಿಕ್ರಿಯೆ ನುಣುಚಿಕೊಳ್ಳುವ ಪಲಾಯನತಂತ್ರ. ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿಯ ಸದಸ್ಯರನ್ನು ಸೇರಿಸಿಕೊಂಡು ಲೋಕಪಾಲ್ ಕರಡು ಮಸೂದೆಯ ಪ್ರಕ್ರಿಯೆ ಆರಂಭಿಸಿ ನಂತರ ಆ ಸಮಿತಿಯನ್ನು ದೂರವಿಟ್ಟ ಕ್ರಮ ಭ್ರಷ್ಟಾಚಾರ ನಿರ್ಮೂಲನಕ್ಕೆ ಸರ್ಕಾರದ ಬದ್ಧತೆಯನ್ನು ಶಂಕಿಸುವಂತೆ ಮಾಡಿದೆ. ಯಾವುದೇ ಕಾನೂನು ತರುವ ಪರಮಾಧಿಕಾರ ಸಂಸತ್ತಿನದು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ಅಣ್ಣಾ ಹಜಾರೆ ಅವರು ಕೂಡ ಅಲ್ಲಗಳೆದಿಲ್ಲ. ಆದರೆ, ಕರಡು ಮಸೂದೆಯಲ್ಲಿ ಪ್ರಧಾನಿ ಮತ್ತು ನ್ಯಾಯಾಂಗಕ್ಕೆ ನೀಡಿದ ವಿನಾಯಿತಿಯ ಬಗ್ಗೆ ರಾಜಕೀಯ ಪಕ್ಷಗಳಲ್ಲೂ ಒಮ್ಮತವಿಲ್ಲ. ಇದೇನೇ ಇದ್ದರೂ, ಅಣ್ಣಾ ಹಜಾರೆ ಅವರ ನಿರಶನಕ್ಕೆ ಅಡ್ಡಿ ಉಂಟು ಮಾಡುತ್ತಿರುವ ಸಂಗತಿ ಕೇಂದ್ರದ ನಿರಂಕುಶ ಪ್ರವೃತ್ತಿಯ ನಿದರ್ಶನ. ಅಣ್ಣಾ ಹಜಾರೆ ಸೇರಿದಂತೆ ನಾಗರಿಕ ಸಮಿತಿಯ ಸದಸ್ಯರ ಚಾರಿತ್ರ್ಯ ಹನನ ಮಾಡುತ್ತಿರುವ ಕೇಂದ್ರದ ಕೆಲವು ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ನಾಯಕರ ಕುತ್ಸಿತ ವರ್ತನೆ ಖಂಡನೀಯ. ಪ್ರಧಾನಿ ಅವರದು ಪರಿಣಿತ ಆರ್ಥಿಕತಜ್ಞರು ಎಂಬ ಖ್ಯಾತಿ. ವೈಯಕ್ತಿಕವಾಗಿ ಪರಿಶುದ್ಧರು ಎಂಬುದು ಅವರ ಬಗೆಗಿನ ಸಾರ್ವಜನಿಕರ ನಂಬಿಕೆ. ಆದರೆ, ಅವರ ಆಡಳಿತದಲ್ಲಿಯೇ ಹಣದುಬ್ಬರ ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಅವರ ಆಡಳಿತ ಕಾಲದ ಭ್ರಷ್ಟಾಚಾರ ಹಗರಣಗಳು ಲಕ್ಷಾಂತರ ಕೋಟಿಗಳ ಲೆಕ್ಕದಲ್ಲಿವೆ. ಎಲ್ಲ ರಂಗಗಳಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರದ ನಿಯಂತ್ರಣಕ್ಕೆ ಪ್ರಬಲ ಕಾಯ್ದೆ ಬೇಕು ಎಂಬುದು ಅಣ್ಣಾ ಸೇರಿದಂತೆ ದೇಶದ ಜನತೆಯ ಅಭಿಪ್ರಾಯ. ಭ್ರಷ್ಟಾಚಾರದ ವಿರುದ್ಧ ದೇಶವನ್ನು ಉದ್ದೇಶಿಸಿ ಮಾತನಾಡಿದರೆ ಅದು ನಿರ್ಮೂಲವಾಗದು. ಈ ಕುರಿತಾಗಿ ಈಗಾಗಲೇ ಮೂಡಿರುವ ಜನಾಭಿಪ್ರಾಯವನ್ನು ಗೌರವಿಸುವ ದೊಡ್ಡತನವನ್ನು ಕೇಂದ್ರ ಸರ್ಕಾರ ತೋರಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.