ಎಚ್ಚರಿಕೆಯ ಹೆಜ್ಜೆ ಅಧಿಕಾರದಲ್ಲಿರುವ ರಾಜಕೀಯ ನಾಯಕರಿಂದ ಜನರು ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನಿರೀಕ್ಷಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ಅಂತಹ ರಾಜಕಾರಣಿಗಳು ವಿರಳ. ಮಗ, ಅಳಿಯ, ಸೊಸೆ ಹಾಗೂ ಇತರ ಸಂಬಂಧಿಗಳಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶ ಕೊಟ್ಟು ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುವ ನಿರ್ಲಜ್ಜ ರಾಜಕಾರಣಿಗಳೇ ಹೆಚ್ಚಾಗಿದ್ದಾರೆ. ಕೆಲವರಂತೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತಗಳನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಇದು ಅತ್ಯಂತ ಕೆಟ್ಟ ಬೆಳವಣಿಗೆ. ರಾಜಕೀಯ ಕ್ಷೇತ್ರಕ್ಕೆ ಬರುವುದೇ ಹಣ ಮಾಡಲು ಎಂಬ ಭಾವನೆ ವ್ಯಾಪಕವಾಗಿರುವ ಈ ಹೊತ್ತಿನಲ್ಲಿ ನೂತನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ತಮ್ಮ ಪತ್ನಿ ಹಾಗೂ ಮಗನಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಂತೆ ಸೂಚಿಸಿರುವುದು ಮೆಚ್ಚುವಂಥ ನಡವಳಿಕೆ. ಪತ್ನಿ ಹಾಗೂ ಮಗನಿಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಹೇಳಿದರೆ ಸಾಲದು. ಅದನ್ನು ಅವರೇ ಕಾರ್ಯರೂಪಕ್ಕೆ ತರಬೇಕು. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ನೀಡಿರುವುದಾಗಿ ಈಗಲೂ ಹೇಳಿಕೊಳ್ಳುತ್ತಾರೆ. ಅದು ಸುಳ್ಳು ಎನ್ನುವುದು ಜನರಿಗೆ ಗೊತ್ತಿದೆ. ಅದಕ್ಕೆ ಲೋಕಾಯುಕ್ತರ ವರದಿಯೇ ಸಾಕ್ಷಿ. ರಾಜಕಾರಣಿಗಳು ಆಡುವ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಜನರು ನಂಬಿಲ್ಲ. ನಿಜವಾಗಿಯೂ ಕುಟುಂಬದ ಸದಸ್ಯರನ್ನು ದೂರವಿಟ್ಟು ಆಡಳಿತ ಮಾಡಿದರೆ ಜನ ಮೆಚ್ಚಿಕೊಳ್ಳುತ್ತಾರೆ. ಸದಾನಂದ ಗೌಡರು ಸ್ವಜನ ಪಕ್ಷಪಾತದ ಆರೋಪಕ್ಕೆ ಒಳಗಾಗದಿರುವಂತೆ ನೋಡಿಕೊಳ್ಳುವ ಎಚ್ಚರಿಕೆಯನ್ನು ಅವರ ಕುಟುಂಬದವರೇ ವಹಿಸಬೇಕು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತೀಯತೆ, ನಿಸರ್ಗ ಸಂಪತ್ತಿನ ಲೂಟಿ ಇತ್ಯಾದಿಗಳಿಂದ ಕರ್ನಾಟಕ ನಲುಗಿಹೋಗಿದೆ. ಈಗ ಪರಿಸ್ಥಿತಿಯನ್ನು ಸುಧಾರಿಸುವ ಜವಾಬ್ದಾರಿ ಮುಖ್ಯಮಂತ್ರಿಯವರ ಮೇಲಿದೆ. ಅವರು ವೈಯಕ್ತಿಕವಾಗಿ ಪ್ರಾಮಾಣಿಕರಾಗಿದ್ದರೆ ಸಾಲದು. `ಯಡಿಯೂರಪ್ಪ ಸರ್ಕಾರದಲ್ಲಿ ಕಿಸೆಗಳ್ಳರು ಮತ್ತು ಡಕಾಯಿತರ್ದ್ದಿದರು~ ಎಂದು ಬಿಜೆಪಿ ಹಿರಿಯ ಮುಖಂಡ ಲಾಲ್‌ಕೃಷ್ಣ ಅಡ್ವಾಣಿ ಅವರೇ ಹೇಳಿದ್ದರೆಂಬುದನ್ನು ಮರೆಯಬಾರದು. ಹಿಂದಿನ ಸಂಪುಟದಲ್ಲಿದ್ದ ಬಹುತೇಕ ಮಂತ್ರಿಗಳನ್ನೇ ನೇಮಕ ಮಾಡಿಕೊಂಡಿರುವ ಸದಾನಂದ ಗೌಡರಿಂದ ಮುಂದಿನ 21 ತಿಂಗಳ ಅವಧಿಯಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಸಾಧ್ಯವೇ ಎಂಬುದನ್ನು ಈಗಲೇ ಹೇಳಲಾಗದು. ಮುಖ್ಯಮಂತ್ರಿಯಾಗಿ ಹದಿನೈದು ದಿನಗಳಾದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅವರಿಗೆ ಸಾಧ್ಯವಾಗಿಲ್ಲ. ಐವರು ಸಚಿವರಿಗೆ ಖಾತೆ ಹಂಚಿಕೆ ಮಾಡಿಲ್ಲ. ಪಕ್ಷದೊಳಗಿನ ಗುಂಪುಗಾರಿಕೆಯಿಂದ ನಲುಗಿಹೋಗಿರುವ ಮುಖ್ಯಮಂತ್ರಿಯವರು ತಮ್ಮ ಕುಟುಂಬದ ಸದಸ್ಯರನ್ನಷ್ಟೇ ದೂರ ಇಟ್ಟರೆ ಸಾಲದು, ಸಚಿವರು, ಶಾಸಕರಿಂದಲೂ ಅಂತಹ ಸ್ವಜನಪಕ್ಷಪಾತದ ವರ್ತನೆ ನಡೆಯದಂತೆ ಎಚ್ಚರ ವಹಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.