ದೇವದಾಸಿಯರ ಸಮಸ್ಯೆ ರಾಜ್ಯದಲ್ಲಿ ದೇವದಾಸಿ ಪದ್ಧತಿಯನ್ನು ಕಾನೂನುಬದ್ಧವಾಗಿ ನಿಷೇಧಿಸಿ 29 ವರ್ಷಗಳೇ ಆಗಿವೆ. ಆದರೂ, ಅದು ಇನ್ನೂ ಕದ್ದು ಮುಚ್ಚಿ ಅಲ್ಲಲ್ಲಿ ನಡೆಯುತ್ತಿರುವ ವರದಿಗಳಿವೆ. ಈ ಪರಿಸ್ಥಿತಿಗೆ ದೇವದಾಸಿ ಪದ್ಧತಿಯನ್ನು ಅನುಸರಿಸಿಕೊಂಡು ಬಂದ ಕುಟುಂಬಗಳಲ್ಲಿ ಆಳವಾಗಿ ಬೇರುಬಿಟ್ಟಿರುವ ಮೌಢ್ಯ ಮತ್ತು ಕೆಲವರಿಗೆ ಬದುಕಲು ದಾರಿ ಕಾಣದೆ ಅನಿವಾರ್ಯವಾಗಿರುವ ಸಾಧ್ಯತೆಯೂ ಇರಬಹುದು. ಈ ವಾಸ್ತವವನ್ನು ಸುಲಭವಾಗಿ ತಳ್ಳಿಹಾಕುವುದು ಕಷ್ಟ. ದೇವದಾಸಿ ಪದ್ಧತಿಯನ್ನು ರದ್ದು ಮಾಡಿದ ಸರ್ಕಾರ ಅವರ ಪುನರ್‌ವಸತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆಯಾದರೂ, ಅವರನ್ನು ಆ ಪದ್ಧತಿಯಿಂದ ವಿಮೋಚನೆಗೊಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಅದು ಇನ್ನು ಅಲ್ಲಲ್ಲಿ ಜೀವಂತವಾಗಿರಲು ಇದೇ ಕಾರಣ. ಸಾಮಾಜಿಕ ವ್ಯವಸ್ಥೆಯಲ್ಲಿನ ಕೆಟ್ಟ ಸಂಪ್ರದಾಯಗಳಿಂದ ನಲುಗಿಹೋದ ಈ ಅಮಾಯಕ ಜನರ ಬಗೆಗೆ ಸರ್ಕಾರ ಮತ್ತು ಅಧಿಕಾರಿಗಳಿಗಿರುವ ನಿಷ್ಕಾಳಜಿಯನ್ನು ಇದು ತೋರಿಸುತ್ತದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಇತ್ತೀಚೆಗೆ ಗುರುತಿಸಿರುವಂತೆ ದೇವದಾಸಿ ಪದ್ಧತಿಯನ್ನು ಪಾಲಿಸಿಕೊಂಡು ಬಂದವರ ಸಂಖ್ಯೆ 23,787. ಆದರೆ ಇವರನ್ನು ಸಂಪೂರ್ಣವಾಗಿ ಆ ವೃತ್ತಿಯಿಂದ ವಿಮೋಚನೆಗೊಳಿಸಿ ಸಮಾಜದ ಮುಂಚೂಣಿಗೆ ತರಲು ಇನ್ನೂ ಸಾಧ್ಯವಾಗುತ್ತಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ದೇವದಾಸಿ ವೃತ್ತಿಯಿಂದ ದೂರವಿರುವಂತೆ ಮಾಡುವಲ್ಲಿ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಯಾಗದಿರುವುದೇ ಈ ಲೋಪಗಳಿಗೆ ಕಾರಣ. ಪ್ರತಿಯೊಬ್ಬ ಮಾಜಿ ದೇವದಾಸಿಯರಿಗೆ ಪ್ರತಿ ತಿಂಗಳು 400 ರೂಪಾಯಿ ಮಾಸಾಶನ, ಮನೆ ಕಟ್ಟಿಕೊಳ್ಳಲು 40 ಸಾವಿರ ರೂಪಾಯಿವರೆಗೆ ಬ್ಯಾಂಕುಗಳಿಂದ ಸಾಲ ನೀಡಿಕೆ ಮತ್ತು ಸ್ವಯಂ ಉದ್ಯೋಗ ಅವಲಂಬಿಸುವವರಿಗೆ ಅವರು ಪಡೆಯುವ ಸಾಲದ ಮೊತ್ತದಲ್ಲಿ ಶೇ 50 ರಷ್ಟು ಸಬ್ಸಿಡಿ ನೀಡುವ ಯೋಜನೆ ನಿರೀಕ್ಷಿತ ಫಲ ನೀಡಿಲ್ಲ. ವಿಪರ್ಯಾಸದ ಸಂಗತಿ ಎಂದರೆ ಈ ವೃತ್ತಿಯಲ್ಲಿ ಇರದಿದ್ದವರೂ ಅರ್ಜಿ ಹಾಕಿ ಮಾಸಾಶನ ಪಡೆಯುತ್ತಿರುವುದು. ಹೀಗೆ ಮಾಸಾಶನ ಪಡೆಯುವವರು ಮಾತ್ರವಲ್ಲದೆ ಹಣದಾಸೆಗೆ ಮಧ್ಯವರ್ತಿಗಳು ಮತ್ತು ಈ ಕಾರ್ಯಕ್ರಮವನ್ನು ಜಾರಿಗೆ ತರುವ ಕೆಳಮಟ್ಟದ ನೌಕರ ಸಿಬ್ಬಂದಿಯೂ ಕಾರಣಕರ್ತರು ಎನ್ನುವುದು ಬಹಿರಂಗ ಸತ್ಯ. ಈ ಲೋಪಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮಧ್ಯೆ, ದೇವದಾಸಿ ಪದ್ಧತಿಯನ್ನು ತ್ಯಜಿಸಿರುವವರಿಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪುನರ್‌ವಸತಿಗಾಗಿ 42.14 ಕೋಟಿ ರೂಪಾಯಿ ಯೋಜನೆಯನ್ನು ಸಿದ್ಧಪಡಿಸಿಕೊಂಡಿತ್ತಾದರೂ ಅದನ್ನು ಜಾರಿಗೊಳಿಸಲಾಗದೇ ಕಾಲಹರಣ ಮಾಡಿದ್ದು ಅಕ್ಷಮ್ಯ. ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಈಚೆಗೆ ನಡೆಸಿದ ಉನ್ನತ ಮಟ್ಟದ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಈ ಕಾರ್ಯಕ್ರಮ ಜಾರಿಯಾಗದಿರುವುದನ್ನು ಗಮನಿಸಿ ಕೂಡಲೇ 12 ಕೋಟಿ ರೂಪಾಯಿ ಬಿಡುಗಡೆಗೆ ಆಜ್ಞಾಪಿಸಿರುವುದು ಶ್ಲಾಘನೀಯ. ಕಾರ್ಯಕ್ರಮಗಳನ್ನು ರೂಪಿಸಿ ಹಣ ಬಿಡುಗಡೆ ಮಾಡಿದರೆ ಸಾಲದು, ಈ ಯೋಜನೆಯ ಪ್ರತಿಫಲ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವುದು ಮುಖ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.