ಆಡಳಿತ ಹೊಣೆಗೇಡಿತನ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡುವ ಹಣವನ್ನು ಆಯಾ ವರ್ಷವೇ ಖರ್ಚು ಮಾಡುವುದು ಸಂಬಂಧಿಸಿದ ಸಚಿವರು ಮತ್ತು ಇಲಾಖೆಗಳ ಉನ್ನತ ಅಧಿಕಾರಿಗಳ ದಕ್ಷತೆಯನ್ನು ಅವಲಂಬಿಸಿರುತ್ತದೆ. ಹಣ ಇದ್ದರೂ ಖರ್ಚು ಮಾಡಲು ಆಗಲಿಲ್ಲ ಎಂದರೆ ಅದಕ್ಕೆ ಅದಕ್ಷತೆ ಮತ್ತು ಬೇಜವಾಬ್ದಾರಿತನಗಳೇ ಕಾರಣ. ನಗರಾಭಿವೃದ್ಧಿ, ಲೋಕೋಪಯೋಗಿ, ಹಣಕಾಸು, ಕೃಷಿ, ತೋಟಗಾರಿಕೆ, ನೀರಾವರಿ ಮತ್ತಿತರ ಇಲಾಖೆಗಳಿಗೆ ಬಿಡುಗಡೆ ಮಾಡಿದ್ದ ಹಣದಲ್ಲಿ ಸುಮಾರು 11,878 ಕೋಟಿ ರೂಪಾಯಿ ಖರ್ಚಾಗಿಲ್ಲ ಎಂಬ ಆಘಾತಕರ ಮಾಹಿತಿಯನ್ನು ಮಹಾಲೇಖಪಾಲರ (ಸಿಎಜಿ) ಇತ್ತೀಚಿನ ವರದಿ ಹೇಳಿದೆ. ಇದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಬಿಡುಗಡೆಯಾದ ಹಣ ಖರ್ಚಾಗದಿರುವುದಕ್ಕೆ ಆಡಳಿತಾತ್ಮಕ ವಿಳಂಬ ಕಾರಣ ಎಂದು ವರದಿ ಹೇಳಿದೆ. ಕೃಷಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ, ನಿಯೋಜನೆ ಇತ್ಯಾದಿಗಳಿಂದಾದ ವಿಳಂಬದಿಂದ 1,311ಕೋಟಿ ರೂಪಾಯಿಗಳು ಖರ್ಚಾಗಿಲ್ಲ. ನೂರು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣ ಖರ್ಚಾಗದೆ ಉಳಿದ 22 ಪ್ರಕರಣಗಳನ್ನು ವರದಿ ಎತ್ತಿ ತೋರಿಸಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಸಕಾಲದಲ್ಲಿ ಬಿಡುಗಡೆ ಮಾಡಲಿಲ್ಲ ಎಂಬ ಕಾರಣದಿಂದ ನೀರಾವರಿ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡಿದ 300 ಕೋಟಿ ರೂಪಾಯಿ ಖರ್ಚಾಗಿಲ್ಲ. ಇದನ್ನೆಲ್ಲ ಗಮನಿಸಿದರೆ ಅನೇಕ ಸಚಿವರು ತಮ್ಮ ಖಾತೆಗೆ ಸಂಬಂಧಿಸಿದ ಇಲಾಖೆಗಳಲ್ಲಿ ಏನಾಗುತ್ತಿದೆ ಎಂಬುದನ್ನು ಗಮನಿಸುವ ಪ್ರಯತ್ನವನ್ನೇ ಮಾಡಿಲ್ಲ ಎಂಬುದು ಸ್ಪಷ್ಟ. ಇಲಾಖೆಯ ಕೆಲಸವನ್ನೇ ಗಮನಿಸದಿದ್ದರೆ ಅವರಿಗೆ ಸಚಿವ ಸ್ಥಾನವಾದರೂ ಯಾಕೆ? ಅಂಥವರನ್ನು ಈಗಲೂ ಮುಂದುವರಿಸುವ ಅಗತ್ಯವಿದೆಯೇ ಎಂಬುದನ್ನು ಮುಖ್ಯಮಂತ್ರಿಯವರು ಪರಿಶೀಲಿಸಬೇಕು. ತಮ್ಮ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ಅದ್ಭುತ ಪ್ರಗತಿ ಸಾಧಿಸಿದೆ ಎಂದೇ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುತ್ತಿದ್ದರು. ಪ್ರತಿ ಸಭೆಗಳಲ್ಲೂ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದರು. ಅನೇಕ ಸಚಿವರು ಅದೇ ಧಾಟಿಯಲ್ಲೇ ಮಾತನಾಡುತ್ತಿದ್ದರು. ಅವರ ಮಾತುಗಳೆಲ್ಲ ಸುಳ್ಳು ಎನ್ನುವುದು ಸಿಎಜಿ ವರದಿಯಿಂದ ಸಾಬೀತಾಗಿದೆ. ಅಧಿಕಾರಿಗಳನ್ನು ಪದೇ ಪದೇ ವರ್ಗ ಮಾಡುವುದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದು ಹಿಂದಿನ ಮುಖ್ಯಮಂತ್ರಿಯವರಿಗೆ ಕೊನೆಗೂ ಅರ್ಥವೇ ಆಗಲಿಲ್ಲ. ಅನುಭವದ ಕೊರತೆಯೇ ಅದಕ್ಕೆ ಕಾರಣ. ಈ ಲೋಪವನ್ನು ಮುಚ್ಚಿಹಾಕಲು ಅಭಿವೃದ್ಧಿ ಯೋಜನೆಗಳ ಗುರಿಯನ್ನೇ ಸಾಧನೆ ಎಂದು ಬಿಂಬಿಸುವ ಮಾತುಗಳನ್ನು ಆಡುತ್ತ ಕಾಲಹರಣ ಮಾಡಿದರು. ಲಭ್ಯವಾದ ಸಂಪನ್ಮೂಲಗಳನ್ನು ಬಳಸಿಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸುವುದು ಮಾತನಾಡುವಷ್ಟು ಸರಳ ಅಲ್ಲ. ಅದಕ್ಕೆ ಕಾರ್ಯದಕ್ಷತೆ ಮತ್ತು ರಾಜಕೀಯ ಬದ್ಧತೆ ಬೇಕಾಗುತ್ತದೆ. ಅದೇನೇ ಇರಲಿ, ಈಗಿನ ಮುಖ್ಯಮಂತ್ರಿ ಸದಾನಂದ ಗೌಡರು ಹಿಂದಿನವರಂತೆ ಅಭಿವೃದ್ಧಿ ಮಂತ್ರ ಜಪಿಸುತ್ತ ಕಾಲಹರಣ ಮಾಡದೆ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ವಿವಿಧ ಇಲಾಖೆಗಳ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸುವ ಮೂಲಕ ಆಡಳಿತ ವ್ಯವಸ್ಥೆ ಚುರುಕಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಅಭಿವೃದ್ಧಿ ಎನ್ನುವುದು ಮಾತು, ಘೋಷಣೆಗಳ ಮಟ್ಟದಲ್ಲೇ ಉಳಿದು ಬಿಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.