ಮಕ್ಕಳ ಶೋಷಣೆ ನಿಲ್ಲಲಿ ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದನ್ನು ಕಾಯ್ದೆಬದ್ಧವಾಗಿ ನಿಷೇಧಿಸಲಾಗಿದೆ. ಆದರೂ ವಾಸ್ತವವಾಗಿ ಹಲವು ಸಣ್ಣಪುಟ್ಟ ಕಾರ್ಖಾನೆಗಳಲ್ಲಿ, ಗ್ಯಾರೇಜುಗಳಲ್ಲಿ, ಹೋಟೆಲುಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ. ಕಟ್ಟಡ ನಿರ್ಮಾಣ ಮತ್ತು ಮನೆಗೆಲಸ ಮತ್ತಿತರ ಕಡೆಗಳಲ್ಲಿ ಮಕ್ಕಳನ್ನು ದುಡಿಸುತ್ತಿರುವುದು ಇನ್ನೂ ವ್ಯಾಪಕವಾಗಿಯೇ ಇದೆ. ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ನಾಲ್ಕು ಪ್ಲಾಸ್ಟಿಕ್ ಕಾರ್ಖಾನೆಗಳ ಮೇಲೆ ದಿಢೀರನೆ ದಾಳಿ ಮಾಡಿ 37 ಮಂದಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರನ್ನು ಆ ಕೆಲಸದಿಂದ ಮುಕ್ತಿಗೊಳಿಸಿದ್ದಾರೆ. ಇಲ್ಲಿ ದುಡಿಯುತ್ತಿದ್ದ ಮಕ್ಕಳು ಮತ್ತು ಉದ್ಯಮಿಗಳು ಬೇರೆ ರಾಜ್ಯಗಳಿಂದ ಬಂದವರು. ಯಾರೇ ಆಗಲಿ ಇದು ಕಾನೂನುಬಾಹಿರ. ಈ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಮಕ್ಕಳನ್ನು ಅವರ ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸುವ ಕೆಲಸ ಆಗಬೇಕು. ಅನೇಕ ಕಡೆಗಳಲ್ಲಿ ಅಪಾಯಕಾರಿ ಉದ್ಯಮಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳಲಾಗುತ್ತಿದೆ. ಉದ್ಯಮಗಳನ್ನು ಕಾರ್ಖಾನೆ ನಿರೀಕ್ಷಕರು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ನಡೆಸುತ್ತಾರೆ. ಅಲ್ಲಿ ದುಡಿಯುತ್ತಿರುವ ಮಕ್ಕಳು ಇಲಾಖೆಯವರ ಕಣ್ಣಿಗೆ ಬೀಳುವುದಿಲ್ಲವೆಂದರೆ ಅದು ತಪಾಸಣೆ ಕ್ರಮದಲ್ಲಿನ ಲೋಪ. ಇದು ಎರಡೂ ಇಲಾಖೆಗಳ ಕರ್ತವ್ಯಲೋಪ. ಸ್ವಚ್ಛಂದವಾಗಿ ಆಟವಾಡುವ ಮತ್ತು ಶಾಲೆಗಳಲ್ಲಿ ಓದಬೇಕಾದ ಮಕ್ಕಳು ಮೈಮುರಿದು ದುಡಿಯಲು ಕುಟುಂಬದಲ್ಲಿ ಅನಕ್ಷರತೆ ಮತ್ತು ಬಡತನ ಕಾರಣ ಎಂಬುದು ಬೆಳಕಿನಷ್ಟು ಸತ್ಯ. ಇಂತಹ ಬಡ ಕುಟುಂಬದ ಮಕ್ಕಳನ್ನು ಶಾಲೆಗಳಿಗೆ ಸೇರಿಸುವ ಕಾರ್ಯ ಪ್ರಾಮಾಣಿಕವಾಗಿ ನಡೆಯಬೇಕಿದೆ. ಕಡ್ಡಾಯ ಮತ್ತು ಉಚಿತ ಶಿಕ್ಷಣ ಸೌಲಭ್ಯ ಈ ಮಕ್ಕಳನ್ನು ಮುಟ್ಟಬೇಕಿದೆ. ಶಿಕ್ಷಣ ಸೌಲಭ್ಯಗಳನ್ನು ಕೇವಲ ಪ್ರಚಾರ ಮಾಡಿದರೆ ಸಾಲದು. ಬಡಕುಟುಂಬಗಳ ಸಮೀಕ್ಷೆ ಮಾಡಿ ಅಲ್ಲಿರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗಳಿಗೆ ಸೇರಿಸುವ ಮತ್ತು ಅಂತಹವರಿಗಾಗಿ ವಸತಿ ಶಾಲೆಗಳನ್ನು ಆರಂಭಿಸುವುದು ಅವಶ್ಯ. ಬಡವರ ಅಭಿವೃದ್ಧಿಯ ಹೆಸರಿನ ಕಾರ್ಯಕ್ರಮಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಥೇಚ್ಛವಾಗಿ ಖರ್ಚು ಮಾಡುತ್ತಿವೆ. ಆದರೆ ಮಕ್ಕಳು ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ಪರಿಸ್ಥಿತಿಯನ್ನು ನೋಡಿದರೆ ಅಭಿವೃದ್ಧಿ ಯೋಜನೆಗಳ ಹಣ ಬಡವರಿಗೆ ಮುಟ್ಟುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ನಗರಗಳ ಕೊಳೆಗೇರಿಗಳಲ್ಲಿನ ಬಡತನ ನಿವಾರಣೆ ಆಗದೆ ಬಾಲ ಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕುವುದು ಕಷ್ಟವಾಗಿದೆ. ಈ ಸ್ಥಿತಿಗೆ ತಂದೆ ತಾಯಿಗಳು ಕಾರಣವಾದರೂ, ನಾಗರಿಕ ಸಮಾಜ ಮತ್ತು ಜನತಂತ್ರ ವ್ಯವಸ್ಥೆಯಲ್ಲಿನ ಆಡಳಿತ ವ್ಯವಸ್ಥೆಯೂ ಅಷ್ಟೇ ಕಾರಣ. ಇದೇನೇ ಇದ್ದರೂ, ಬಾಲ ಕಾರ್ಮಿಕ ಪದ್ಧತಿಯನ್ನು 2007ರ ಹೊತ್ತಿಗೆ ಸಂಪೂರ್ಣ ನಿಷೇಧಿಸಬೇಕೆಂಬ ಸುಪ್ರೀಂ ಕೋರ್ಟಿನ ಆಜ್ಞೆಯ ಸ್ಪಷ್ಟ ಉಲ್ಲಂಘನೆ ಆಗುತ್ತಿದೆ. ಇದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಆಗಿದೆ. ಮಕ್ಕಳನ್ನು ದುಡಿಮೆಗೆ ಹಾಕುವುದು ಅಪರಾಧ ಎನ್ನುವ ಬಗೆಗೆ ಪೋಷಕರಲ್ಲಿ ಅರಿವು ಮೂಡಿಸಬೇಕಿದೆ. ಈ ದಿಶೆಯಲ್ಲಿ ಕಾರ್ಮಿಕ ಇಲಾಖೆ ಯಾವುದೇ ಸಬೂಬು ನೀಡದೆ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವ ಕೆಲಸ ಮಾಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.