ಮರುಪರಿಶೀಲನೆ ಅಗತ್ಯ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆ ಜಾರಿಗೆ ಮದ್ರಾಸ್ ಹೈಕೋರ್ಟ್ ಎಂಟು ವಾರಗಳ ಕಾಲ ತಡೆ ನೀಡುವ ಮೂಲಕ ಆ ಸಂಬಂಧವಾದ ಮಾನವೀಯ ಮತ್ತು ಕಾನೂನು ಅಂಶಗಳ ಮರು ಪರಿಶೀಲನೆ ಅಗತ್ಯವನ್ನು ಚರ್ಚೆಯ ಮುಂಚೂಣಿಗೆ ತಂದಿದೆ. ರಾಷ್ಟ್ರಪತಿ ಅವರು ಆ ಮೂವರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರನ್ನು ಸೆಪ್ಟೆಂಬರ್ 9 ರಂದು ಗಲ್ಲಿಗೇರಿಸಲು ವೆಲ್ಲೂರು ಜೈಲಿನಲ್ಲಿ ಎಲ್ಲ ಸಿದ್ಧತೆಯೂ ನಡೆದಿತ್ತು. ಈ ಮಧ್ಯೆ, ತಮಿಳುನಾಡು ವಿಧಾನಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಅವರ ಕ್ಷಮಾದಾನ ಅರ್ಜಿಯನ್ನು ಪುನರ್ ಪರಿಶೀಲಿಸಬೇಕೆಂದು ರಾಷ್ಟ್ರಪತಿಯವರನ್ನು ಒತ್ತಾಯಿಸಿತು. ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮುರುಗನ್, ಸಂತಾನ್ ಮತ್ತು ಪೇರ್‌ಅರಿವಳನ್ ಅವರ ಕ್ಷಮಾದಾನ ಅರ್ಜಿ ಬಗ್ಗೆ ರಾಷ್ಟ್ರಪತಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳುವಲ್ಲಿ 11 ವರ್ಷಗಳು ಹಿಡಿದಿವೆ. ಈ ವಿಳಂಬ ಸಮರ್ಥನೀಯ ಎನಿಸುವುದಿಲ್ಲ. ಅವರು ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಜೈಲುಶಿಕ್ಷೆ ಅನುಭವಿಸಿರುವುದರಿಂದ ಗಲ್ಲು ಶಿಕ್ಷೆಯಿಂದ ವಿನಾಯ್ತಿ ನೀಡಿ ಅವರನ್ನು ಜೀವನ ಪೂರ್ತಿ ಜೈಲಿನಲ್ಲಿ ಇರುವಂಥ ಶಿಕ್ಷೆಗೆ ಗುರಿಪಡಿಸಬಹುದಾಗಿದೆ ಎಂಬುದು ತಮಿಳುನಾಡು ರಾಜಕಾರಣಿಗಳು, ಮಾನವ ಹಕ್ಕು ಸಂಘಟನೆಗಳು ಮತ್ತು ಕಾನೂನು ತಜ್ಞರ ವಾದ. ಕ್ಷಮಾದಾನ ಕೊಡುವಲ್ಲಿ ಆಗಿರುವ ವಿಳಂಬ ಕುರಿತಂತೆ ಎದ್ದಿರುವ ಸಹಜ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಬೇಕಿದೆ. ವಿಶ್ವದ ಅನೇಕ ಮುಂದುವರಿದ ದೇಶಗಳಲ್ಲಿ ಗಲ್ಲು ಶಿಕ್ಷೆ ರದ್ದು ಮಾಡಲಾಗಿದೆ. ಕೊಲೆ ಮಾಡಿದವರನ್ನು ಕೊಲೆ ಮಾಡುವಂತೆ ನ್ಯಾಯಾಲಯ ಆದೇಶ ನೀಡುವುದು ಅಮಾನವೀಯ ಎಂಬ ವಾದಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಬೆಂಬಲ ಸಿಗುತ್ತಿದೆ. ಆದರೆ ಭಾರತದಲ್ಲಿ ಗಲ್ಲು ಶಿಕ್ಷೆ ಕೊಡುವುದನ್ನು ನ್ಯಾಯಾಲಯಗಳು ಉಳಿಸಿಕೊಂಡು ಬಂದಿವೆ. ಹೀಗಾಗಿ ಈಗ ಎದ್ದಿರುವುದು ಗಲ್ಲು ಶಿಕ್ಷೆ ಇರಬೇಕೇ, ಬೇಡವೇ ಎಂಬುದಲ್ಲ. ಗಲ್ಲು ಶಿಕ್ಷೆ ವಿಧಿಸುವಲ್ಲಿ ಆಗಿರುವ ವಿಳಂಬದಿಂದ ಅವರು ಅನುಭವಿಸಿರುವ ನೋವಿಗೆ ಪರಿಹಾರ ಒದಗಿಸಬೇಕೆಂಬುದು. ಗಲ್ಲು ಶಿಕ್ಷೆಗಿಂತ ಘೋರವಾದದ್ದು ನೇಣುಗಂಬದ ಭೀತಿಯಲ್ಲಿ ಹನ್ನೊಂದು ವರ್ಷಗಳ ಕಾಲ ಅವರು ಬದುಕಿದ್ದು. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನು ಇಷ್ಟು ಅವಧಿಯೊಳಗೆ ಇತ್ಯರ್ಥ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಆದರೆ ಸಮರ್ಥನೀಯವಾದ ಅವಧಿಯೊಳಗೆ ಇತ್ಯರ್ಥ ಮಾಡಬೇಕು ಮತ್ತು ವಿಳಂಬವಾದ ಪಕ್ಷದಲ್ಲಿ ಕಾನೂನಿನ ಅನ್ವಯ ಪರಿಹಾರಕ್ಕೆ ಸಂಬಂಧಿಸಿದವರು ಅರ್ಹರು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪು ಗಮನಾರ್ಹವಾದುದು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ರಾಷ್ಟ್ರಪತಿಗಳ ಮತ್ತು ನ್ಯಾಯಾಲಯಗಳ ಮರುಪರಿಶೀಲನೆಗೆ ಅರ್ಹವಾಗಿದೆ. ಈ ಪ್ರಕರಣದ ಮೂಲಕ ಜನರನ್ನು ಭಾವೋದ್ರೇಕಕ್ಕೆ ಒಳಗುಮಾಡಿ ರಾಜಕೀಯ ಲಾಭ ಗಳಿಸಿಕೊಳ್ಳಲು ತಮಿಳುನಾಡು ರಾಜಕಾರಣಿಗಳು ಯತ್ನಿಸುತ್ತಿದ್ದಾರೆ. ಅದೇ ರೀತಿ ರಾಜೀವ್ ಹಂತಕರಿಗೆ ಗಲ್ಲು ಶಿಕ್ಷೆಯಿಂದ ವಿನಾಯ್ತಿ ಸಿಕ್ಕರೆ ಸಂಸತ್ತಿನ ಮೇಲೆ ದಾಳಿ ನಡೆಸಿದ ಸಂಚಿನ ಸೂತ್ರಧಾರ ಅಫ್ಜಲ್ ಗುರುವಿಗೂ ನಾಳೆ ಅದೇ ರೀತಿ ವಿನಾಯ್ತಿ ಸಿಗಬಹುದಾದ ಸಾಧ್ಯತೆ ನಿರ್ಮಾಣವಾಗುತ್ತದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲ ಸಂವಿಧಾನದ ಚೌಕಟ್ಟಿನಲ್ಲಿಯೇ ಉತ್ತರ ಕಂಡುಕೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.