ಮಹತ್ವದ ತೀರ್ಪು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯನ್ನು ನಿಷೇಧಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗಣಿಗಾರಿಕೆಯಿಂದ ಪರಿಸರಕ್ಕೆ ಆಗಿರುವ ಹಾನಿ ಕುರಿತು ಸುಪ್ರೀಂ ಕೋರ್ಟಿನಿಂದ ನೇಮಕವಾದ ಉನ್ನತಾಧಿಕಾರ ಸಮಿತಿ (ಸಿಇಸಿ) ಅಧ್ಯಯನ ನಡೆಸಿ ಮಾಡಿದ ಶಿಫಾರಸಿಗೆ ಅನುಗುಣವಾಗಿ ಗಣಿಗಾರಿಕೆ ಸ್ಥಗಿತಗೊಂಡಿದೆ. ಗಣಿಗಾರಿಕೆಯಿಂದ ಎರಡೂ ಜಿಲ್ಲೆಗಳಲ್ಲಿ ಪರಿಸರಕ್ಕೆ ಅಪಾರ ಹಾನಿಯಾಗಿದೆ. ಆರ್ಥಿಕ ಅಭಿವೃದ್ಧಿ ಮತ್ತು ಪರಿಸರ ಸಮತೋಲನ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಈ ಸೂಚನೆಯೇ ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದೆ. ಗಣಿಗಾರಿಕೆಗೆ ಅನುಮತಿ ಕೊಡುವ ಅಧಿಕಾರ ಕೇಂದ್ರ ಸರ್ಕಾರದ್ದಾದರೂ ಪರಿಸರಕ್ಕೆ ಹಾನಿಯಾಗದಂತೆ ಗಣಿಗಾರಿಕೆ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಗಣಿ ಗುತ್ತಿಗೆ ಪಡೆದ ಕಂಪೆನಿಗಳು ಬೇಕಾಬಿಟ್ಟಿಯಾಗಿ ಗಣಿಗಾರಿಕೆ ನಡೆಸಲು ಅವಕಾಶ ನೀಡುವ ಮೂಲಕ ರಾಜ್ಯ ಸರ್ಕಾರ ಕರ್ತವ್ಯ ನಿರ್ವಹಣೆಯಲ್ಲಿ ಸೋತಿದೆ. ಬೆಟ್ಟ ಪ್ರದೇಶದಲ್ಲಿ ಮಾತ್ರವಲ್ಲದೆ ನೂರಾರು ಅಡಿಗಳ ನೆಲದಾಳದಲ್ಲೂ ಅಕ್ರಮವಾಗಿ ಅದಿರು ತೆಗೆಯಲಾಗಿದೆ. ಇದರಿಂದ ಗಣಿ ಸುತ್ತಲಿನ ಹಳ್ಳಿಗಳಲ್ಲಿ ಅಂತರ್ಜಲದ ಮಟ್ಟ ಕುಸಿದಿದೆ. ಗಣಿ ದೂಳಿನಿಂದ ಜನರ ಆರೋಗ್ಯ ಹಾಳಾಗಿದೆ. ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಿದರೂ ಈ ಪ್ರದೇಶ ಸಹಜ ಸ್ಥಿತಿಗೆ ಬರಲು ಹಲವು ದಶಕಗಳೇ ಬೇಕಾಗಬಹುದು. ಒಟ್ಟಾರೆ ರಾಜ್ಯ ಸರ್ಕಾರದ ಹೊಣೆಗೇಡಿತನಕ್ಕೆ ಜನ ಸಾಮಾನ್ಯರು ಕಷ್ಟಗಳನ್ನು ಅನುಭವಿಸುವಂತಾಗಿದೆ. ಅಕ್ರಮವಾಗಿ ಅದಿರು ತೆಗೆದ ಗಣಿ ಕಂಪೆನಿಗಳಿಗೆ ಶಿಕ್ಷೆಯಾಗಬೇಕು. ಅವರಿಗೆ ಕುಮ್ಮಕ್ಕು ನೀಡಿದ ಸರ್ಕಾರದ ಉನ್ನತ ಅಧಿಕಾರಿಗಳು, ಕೆಳಹಂತದ ಸಿಬ್ಬಂದಿ ಹಾಗೂ ಗಣಿ, ಅರಣ್ಯ, ಕಂದಾಯ, ಸಾರಿಗೆ, ಪೊಲೀಸ್ ಮತ್ತಿತರ ಇಲಾಖೆಗಳ ಜವಾಬ್ದಾರಿ ಹೊತ್ತಿರುವ ಸಚಿವರೂ ತಪ್ಪಿತಸ್ಥರು. ಗಣಿಗಾರಿಕೆಯಿಂದ ಪರಿಸರಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಲು ಕೈಗೊಳ್ಳಬೇಕಾದ ಕ್ರಮಗಳಿಗೆ ತಗಲುವ ವೆಚ್ಚವನ್ನು ಗಣಿ ಕಂಪೆನಿಗಳಿಂದ ವಸೂಲು ಮಾಡಬೇಕು. ಅಕ್ರಮವಾಗಿ ತೆಗೆದ ಅದಿರಿನ ಬೆಲೆಯನ್ನು ನಿಗದಿ ಮಾಡಿ ವಸೂಲು ಮಾಡಬೇಕು. ಅದಿರು ಸಾಗಣೆಯಿಂದ ಎರಡೂ ಜಿಲ್ಲೆಗಳಲ್ಲಿ ರಸ್ತೆಗಳು ಹಾಳಾಗಿವೆ. ಗಣಿ ಸುತ್ತಲಿನ ಭೂಮಿಯಲ್ಲಿ ಮತ್ತೆ ಅರಣ್ಯ ಬೆಳೆಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಲಮಿತಿಯ ಯೋಜನೆ ರೂಪಿಸಬೇಕು. ಗಣಿಗಾರಿಕೆಯ ಕೆಟ್ಟ ಪರಿಣಾಮಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ವಿಷಯದಲ್ಲಿ ಗಣಿ ಪ್ರದೇಶದ ಗ್ರಾಮ ಪಂಚಾಯ್ತಿಗಳೂ ವಿಫಲವಾಗಿವೆ. ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡುವವರೆಗೆ ಸ್ಥಳೀಯ ಜನರು ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ಆರೋಗ್ಯ ಹಾಗೂ ಪರಿಸರಕ್ಕೆ ಹಾನಿ ಮಾಡಿದ ಅಕ್ರಮ ಗಣಿಗಾರಿಕೆ ವಿರುದ್ಧ ಸ್ಥಳೀಯರು ಸಕಾಲದಲ್ಲಿ ಪ್ರತಿಭಟನೆ ನಡೆಸಿದ್ದರೆ ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಿರಲಿಲ್ಲ. ಅದೇನೇ ಇರಲಿ, ಕಾನೂನುಬಾಹಿರ ಕೃತ್ಯಗಳ ಬಗ್ಗೆ ಸ್ಥಳೀಯ ಮುಖಂಡರು, ಪ್ರಜ್ಞಾವಂತರು ಜನರಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲವಾದರೆ ಸಾಮಾನ್ಯ ಜನರು ವಿನಾಕಾರಣ ಕಷ್ಟ ನಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.