ಜನತೆಯ ಗೆಲುವು ಬಲಿಷ್ಠ ಲೋಕಪಾಲ ವ್ಯವಸ್ಥೆಗಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅನಿರ್ದಿಷ್ಟ ನಿರಶನದ ಮೂಲಕ ಹಾಕಿದ್ದ ಒತ್ತಡಕ್ಕೆ ಸರ್ಕಾರ ಮಣಿದಿರುವುದು ಜನಶಕ್ತಿಗೆ ಸಂದ ವಿಜಯ. ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಒಂದು ಮಹತ್ವದ ಹೆಜ್ಜೆ. ಲೋಕಪಾಲದಂತೆ ರಾಜ್ಯಗಳಲ್ಲಿ ಲೋಕಾಯುಕ್ತ ರಚನೆ, ಪ್ರತಿ ಇಲಾಖೆಯ ಪ್ರತಿ ಕೆಲಸಕ್ಕೂ ಕಾಲಮಿತಿ ನಿಗದಿ ಮತ್ತು ಕೆಳಹಂತದ ಅಧಿಕಾರಶಾಹಿಯನ್ನು ಲೋಕಪಾಲದ ವ್ಯಾಪ್ತಿಯಲ್ಲಿ ಅಡಕಗೊಳಿಸಬೇಕೆಂಬ ಬೇಡಿಕೆಗಳಿಗೆ ಸಂಸತ್ತಿನ ಉಭಯ ಸದನಗಳು ತಾತ್ವಿಕ ಒಪ್ಪಿಗೆ ನೀಡಿರುವುದರಿಂದ ಶಕ್ತಿಯುತ ಲೋಕಪಾಲ ವ್ಯವಸ್ಥೆ ರೂಪಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗಿದೆ. ಸರ್ಕಾರ ರೂಪಿಸಿದ ಕರಡು, ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿ ರಚಿಸಿದ ಜನಲೋಕಪಾಲದ ಅಂಶಗಳು ಹಾಗೂ ಇನ್ನಿತರ ಸಂಘಟನೆಗಳು ಸೂಚಿಸಿದ ಸಲಹೆಗಳನ್ನೆಲ್ಲ ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲಿಸಿ ಲೋಕಪಾಲ ಮಸೂದೆಗೆ ಅಂತಿಮ ರೂಪು ನೀಡಲಿದೆ. ಅದನ್ನು ಸಂಸತ್ತು ಅಂಗೀಕರಿಸಿ ಅನುಷ್ಠಾನಕ್ಕೆ ತಂದ ಮೇಲಷ್ಟೇ ಲೋಕಪಾಲ ವ್ಯವಸ್ಥೆಯ ಪರಿಕಲ್ಪನೆ ಅಸ್ತಿತ್ವಕ್ಕೆ ಬರುತ್ತದೆ. ಆಡಳಿತದ ಉನ್ನತಮಟ್ಟದಲ್ಲಿನ ಭ್ರಷ್ಟಾಚಾರ ನಿಯಂತ್ರಿಸುವುದಕ್ಕೆ ಪ್ರಬಲವಾದ ಕಾಯ್ದೆ ಬದ್ಧ ವ್ಯವಸ್ಥೆಯೊಂದನ್ನು ಅಸ್ತಿತ್ವಕ್ಕೆ ತರಬೇಕು ಎಂಬ ಬೇಡಿಕೆಯೇನೋ ಇತ್ತು. ಆದರೆ, ಇಷ್ಟು ವರ್ಷಗಳ ಕಾಲ ಭಾರಿ ಪ್ರಮಾಣದ ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬರುತ್ತಿದ್ದರೂ ಅವುಗಳನ್ನು ಅಸಹಾಯಕತೆಯಿಂದ ನೋಡುತ್ತಿದ್ದ ಪರಿಸ್ಥಿತಿ ಜನತೆಯದಾಗಿತ್ತು. ಅವರನ್ನು ಬೀದಿಗೆ ಕರೆ ತಂದು ಶಾಂತಿಯುತವಾಗಿ ಪ್ರತಿಭಟಿಸುವಂತೆ ಮಾಡಿದ ಚೈತನ್ಯಶೀಲ ನಾಯಕತ್ವ ನಿರ್ವಿವಾದವಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರದು. ತಮ್ಮ ಸಾತ್ವಿಕ ಪ್ರತಿಭಟನೆಯ ಮೂಲಕ ಸಂಸತ್ತಿಗೆ ತನ್ನ ಕರ್ತವ್ಯದ ಅರಿವು ಮೂಡಿಸಿದಂತಹ ಈ ಘಟನೆ ಸ್ವತಂತ್ರ ಭಾರತದಲ್ಲಿ ಅಪರೂಪದ್ದು. ಲೋಕಪಾಲವೊಂದೇ ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಹಾರವಲ್ಲ. ಆದರೆ ಇಂಥ ಒಂದು ವ್ಯವಸ್ಥೆಯನ್ನು ನಾಲ್ಕು ದಶಕಗಳ ಕಾಲ ಪ್ರಸ್ತಾಪದ ಹಂತದಲ್ಲಿಯೇ ಉಳಿಸಿಕೊಂಡು ಬಂದಿದ್ದ ವಿವಿಧ ರಾಜಕೀಯ ಪಕ್ಷಗಳಿಗೆ ಅಣ್ಣಾ ಹಜಾರೆ ಅವರ ಸಾತ್ವಿಕ ಪ್ರತಿಭಟನೆ ಚುರುಕು ಮುಟ್ಟಿಸಿದ್ದನ್ನು ಅಲ್ಲಗಳೆಯುವಂತಿಲ್ಲ. ಕಾಯ್ದೆ ರೂಪಿಸುವ ಸಂಸತ್ತಿನ ಪರಮಾಧಿಕಾರದ ನೆಪವನ್ನು ಮುಂದಿಟ್ಟುಕೊಂಡು ಅಣ್ಣಾ ಹಜಾರೆ ನೇತೃತ್ವದ ನಾಗರಿಕ ಸಮಿತಿಯ ಬೇಡಿಕೆಗಳನ್ನು ಕಡೆಗಣಿಸುತ್ತಾ, ಅದರಲ್ಲಿನ ವ್ಯಕ್ತಿಗಳ ಚಾರಿತ್ರ್ಯಹನನ ಮಾಡುತ್ತಿದ್ದ ರಾಜಕೀಯ ಪಕ್ಷಗಳ ಮುಖಂಡರಿಗೂ, ಅಣ್ಣಾ ಉಪವಾಸದ ಸಂದರ್ಭದಲ್ಲಿ ವ್ಯಕ್ತವಾದ ಜನಬೆಂಬಲ ಎಚ್ಚರಿಕೆಯ ಗಂಟೆಯಾಗಿದೆ. ಸಂಸತ್ತಿನ ಪರಮಾಧಿಕಾರದ ವಿಷಯದಲ್ಲಿ ರಾಜಿಯಾಗದೆ ಜನತೆಯ ಹಕ್ಕೊತ್ತಾಯವನ್ನೂ ಪುರಸ್ಕರಿಸುವ ಹೊಂದಾಣಿಕೆ ಮನೋಭಾವವನ್ನು ಪ್ರದರ್ಶಿಸಿದ ಸರ್ಕಾರದ ವರ್ತನೆಯೂ ಗಮನಿಸಬೇಕಾದ ಅಂಶ. ಜನತೆಯ ಅಹಿಂಸಾತ್ಮಕ ಹೋರಾಟದ ಎದುರು ಸದ್ಯಕ್ಕೆ ಮಣಿದಿರುವ ರಾಜಕೀಯ ಪಕ್ಷಗಳು ಬಲಿಷ್ಠ ಲೋಕಪಾಲವು ಅಸ್ತಿತ್ವಕ್ಕೆ ಬರುವುದಕ್ಕೆ ಅವಶ್ಯಕವಾದ ಕಾನೂನು ರೂಪಿಸುವ ಬದ್ಧತೆಯನ್ನು ಸಂಸತ್ತಿನಲ್ಲಿ ಪ್ರದರ್ಶಿಸಬೇಕಿದೆ. ಭ್ರಷ್ಟಾಚಾರದ ವಿರುದ್ಧ ಕಾನೂನು ರೂಪಿಸಲು ಶಾಂತಿಯುತವಾಗಿ ಒತ್ತಾಯಿಸಲು ಬೀದಿಗಿಳಿದ ಜನತೆ ಭ್ರಷ್ಟ ವ್ಯವಹಾರಗಳಿಗೆ ತಾವು ಕಾರಣರಾಗದಂತಹ ನೈತಿಕತೆಯನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.