ಕಡಲುಗಳ್ಳರ ನಿಗ್ರಹ ಪೂರ್ವ- ಪಶ್ಚಿಮ ರಾಷ್ಟ್ರಗಳ ಬಹುತೇಕ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟು ಮತ್ತು ಸಾಗಣೆ ಹಿಂದೂ ಮಹಾಸಾಗರವನ್ನೇ ಅವಲಂಬಿಸಿದೆ. ಹಿಂದೂ ಮಹಾಸಾಗರ ದಂಡೆಯ ರಾಷ್ಟ್ರಗಳಿಗೆ ಸಮುದ್ರ ಸಂಪನ್ಮೂಲಗಳೇ ನಿಜವಾದ ಆದಾಯ ಮೂಲ ಮತ್ತು ಜೀವನಾಧಾರ. ಇವುಗಳನ್ನೇ ಆಧರಿಸಿದ ಆರ್ಥಿಕ ವ್ಯವಹಾರದ ಜೊತೆಗೆ ನೈಸರ್ಗಿಕ ವಿಪತ್ತುಗಳು ಈ ರಾಷ್ಟ್ರಗಳನ್ನು ಕಾಡುತ್ತಿವೆ. ಸಾಗರ ಸಂಪನ್ಮೂಲ ಬಳಕೆಯ ಜೊತೆಗೆ ಅವುಗಳು ಎದುರಿಸುತ್ತಿರುವ ನೈಸರ್ಗಿಕ ವಿಕೋಪಗಳಿಂದಾಗುವ ಅನಾಹುತವನ್ನು ಪರಸ್ಪರ ಸಹಕಾರದಿಂದ ಬಗೆಹರಿಸಿಕೊಳ್ಳುವ ದಿಶೆಯಲ್ಲಿ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಹಿಂದೂ ಮಹಾಸಾಗರ ದಂಡೆ ರಾಷ್ಟ್ರಗಳ ಒಕ್ಕೂಟದ (ಐಒಆರ್-ಎಆರ್‌ಸಿ) ಸಚಿವ ಮಟ್ಟದ ಶೃಂಗ ಸಮ್ಮೇಳನ ಕೈಗೊಂಡಿರುವ ನಿರ್ಣಯಗಳು ಮಹತ್ವದ್ದಾಗಿವೆ. ಸಮುದ್ರ ತೀರದ ಈ ರಾಷ್ಟ್ರಗಳ ವ್ಯಾಪಾರ ವಹಿವಾಟು ಮತ್ತು ಸಂಪರ್ಕಕ್ಕೆ ಇಂದು ತೀವ್ರ ಅಡ್ಡಿಯಾಗಿರುವುದು ಕಡಲುಗಳ್ಳರ ಹಾವಳಿ. ಅಡೆನ್ ಕೊಲ್ಲಿಯಲ್ಲಷ್ಟೇ ಕಾರ್ಯನಿರ್ವಹಿಸುತ್ತಿದ್ದ ಸೊಮಾಲಿಯಾ ಕಡಲುಗಳ್ಳರು ಇತ್ತೀಚಿನ ವರ್ಷಗಳಲ್ಲಿ ಹಿಂದೂ ಮಹಾಸಾಗರಕ್ಕೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿರುವುದರಿಂದ ಭಾರತ ಸೇರಿದಂತೆ ಪೂರ್ವದ ಎಲ್ಲ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿದೆ. ಸರಕು ಮತ್ತು ತೈಲ ಸಾಗಣೆ ಹಡಗುಗಳನ್ನು ಮತ್ತು ಅವುಗಳಲ್ಲಿರುವ ಸಿಬ್ಬಂದಿಯನ್ನು ಅಪಹರಿಸಿ ಒತ್ತೆ ಇಟ್ಟುಕೊಂಡು ಹಣ ಕೀಳುವುದನ್ನು ಈ ಕಡಲುಗಳ್ಳರು ಒಂದು ದಂಧೆಯನ್ನಾಗಿ ಮಾಡಿಕೊಂಡಿರುವುದು ಕಡಲ ರಾಷ್ಟ್ರಗಳ ಆರ್ಥಿಕ ಚಟುವಟಿಕೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಲವು ಬಡರಾಷ್ಟ್ರಗಳಿಗೆ ಮತ್ತು ನೈಸರ್ಗಿಕ ವಿಪತ್ತು ಹಾನಿಗೊಳಗಾಗುವ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಹಡಗುಗಳ ಮೂಲಕ ಕಳುಹಿಸುವ ಆಹಾರ ಪದಾರ್ಥವನ್ನೂ ಲೂಟಿ ಮಾಡುತ್ತಿರುವುದರಿಂದ ಕಡಲುಗಳ್ಳರ ಹಾವಳಿ ಈಗ ಒಂದು ಜಾಗತಿಕ ಸಮಸ್ಯೆಯೂ ಆಗಿದೆ. ಕಡಲ ರಾಷ್ಟ್ರಗಳನ್ನು ಕಾಡುತ್ತಿರುವ ಈ ಸಮಸ್ಯೆಗೆ ಕಡಿವಾಣ ಹಾಕಲು ಈ ಎಲ್ಲ ರಾಷ್ಟ್ರಗಳ ಸಹಕಾರದಿಂದ ಕಡಲ ತೀರದಲ್ಲಿನ ಭದ್ರತೆಯನ್ನು ಹೆಚ್ಚಿಸಲು ಬೆಂಗಳೂರಿನ ಸಭೆ ಕೈಗೊಂಡಿರುವ ನಿರ್ಣಯ ಒಂದು ಮಹತ್ವದ ಹೆಜ್ಜೆ. ಆದರೆ ಈ ಸಮಸ್ಯೆಯ ಜೊತೆಯೇ ಸೊಮಾಲಿಯಾದ ಜನರು ಅನುಭವಿಸುತ್ತಿರುವ ಅನ್ನದ ಸಮಸ್ಯೆಯನ್ನೂ ಬಗೆಹರಿಸಲು ವಿಶ್ವಸಂಸ್ಥೆ ತುರ್ತಾಗಿ ಗಮನ ನೀಡಬೇಕಾಗಿದೆ. ಆಗ ಮಾತ್ರ ಸಮುದ್ರ ಮಾರ್ಗದಲ್ಲಿನ ಕಡಲುಗಳ್ಳರ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ. ಕಡಲ ರಾಷ್ಟ್ರಗಳನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಸುನಾಮಿ. ಇದ್ದಕ್ಕಿದ್ದ ಹಾಗೆ ಬರುವ ಸುನಾಮಿಯಿಂದ ದ್ವೀಪ ರಾಷ್ಟ್ರಗಳು ಅಪಾರ ಸಾವು ನೋವುಗಳಿಂದ ತತ್ತರಿಸಿಹೋಗುತ್ತಿವೆ. ಸುನಾಮಿ ಬಗೆಗೆ ಮುನ್ನೆಚ್ಚರಿಕೆಯ ಮಾಹಿತಿ ವಿನಿಮಯ, ಸಮುದ್ರದಲ್ಲಿ ಅಕ್ರಮ ಮೀನುಗಾರಿಕೆ ತಡೆಗೆ ಪರಸ್ಪರ ಸಹಕಾರ, ಸಮುದ್ರ ಸಂಪನ್ಮೂಲಗಳ ನಿರ್ವಹಣೆ, ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಕಡಲ ತೀರದ ರಾಷ್ಟ್ರಗಳ ನಡುವೆ ಮತ್ತಷ್ಟು ಸಹಕಾರ ವೃದ್ಧಿಗೆ ಸಹಕಾರಿಯಾಗುವ ಸಾಧ್ಯತೆಯನ್ನು ಈ ಸಮ್ಮೇಳನ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ನಡೆದ ಇಂತಹ ಅಂತರರಾಷ್ಟ್ರೀಯ ಮಟ್ಟದ ಸಭೆಯಿಂದ ರಾಜ್ಯದ ರಾಜಧಾನಿಯ ಪ್ರಾಮುಖ್ಯವೂ ಹೆಚ್ಚಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.