ಕನ್ನಡದ ಹಿರಿಮೆ ಹೆಚ್ಚಿಸಿದ ಭೈರಪ್ಪ ಕನ್ನಡಕ್ಕೆ ಇನ್ನೊಂದು ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗೌರವ. ತಮ್ಮ ಅನನ್ಯ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಎಸ್.ಎಲ್. ಭೈರಪ್ಪನವರು `ಸರಸ್ವತಿ ಸಮ್ಮಾನ್~ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡಿಗರ ಸಾಂಸ್ಕೃತಿಕ ಹಿರಿಮೆಗೊಂದು ಪ್ರತಿಷ್ಠೆಯ ಗರಿ ಮೂಡಿಸಿದ್ದಾರೆ. ಕೆ.ಕೆ. ಬಿರ್ಲಾ ಪ್ರತಿಷ್ಠಾನ ದೇಶದ ವಿವಿಧ ಭಾಷೆಗಳ ಶ್ರೇಷ್ಠ ಬರಹಗಾರರನ್ನು ಪುರಸ್ಕರಿಸಲು 1990ರಲ್ಲಿ ಆರಂಭಿಸಿದ ಈ ಪ್ರತಿಷ್ಠಿತ ಪ್ರಶಸ್ತಿ 2010ರ ಸಾಲಿಗೆ ಭೈರಪ್ಪನವರಿಗೆ ಬಂದಿದೆ. ಈ ಪ್ರಶಸ್ತಿ ಪ್ರಕಟಣೆಯ ನಂತರ ಚಂದ್ರಶೇಖರ ಕಂಬಾರರಿಗೆ ಇದೇ ಸಾಲಿನ ಜ್ಞಾನಪೀಠ ಪ್ರಶಸ್ತಿಯೂ ಲಭಿಸಿರುವುದು ಕನ್ನಡಿಗರ ಸಂಭ್ರಮ ಇಮ್ಮಡಿಯಾಗಲು ಕಾರಣವಾಗಿದೆ. ಈ ಎರಡೂ ಮೇರು ಪ್ರಶಸ್ತಿಗಳ ಮೂಲಕ ಕನ್ನಡ ಸಾಹಿತ್ಯದ ನವನವೋನ್ಮೇಷಶಾಲಿನೀ ಪ್ರತಿಭಾ ವಿಲಾಸ ರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಂಡಿವೆ. ಸುಮಾರು ಒಂದೂವರೆ ಸಾವಿರ ವರ್ಷಗಳಿಂದ ಬೆಳೆದು ಬಂದ ಕನ್ನಡ ಸಾಹಿತ್ಯ, ಹಲವು ಬಗೆಯ ಛಂದೋರೂಪಗಳ ಅಪರಿಮಿತ ಸಂಖ್ಯೆಯ ಕಾವ್ಯಗಳ ಸಮೃದ್ಧಿಯಿಂದ ಕೂಡಿದ್ದರೂ, ಈಚಿನ ಒಂದೂವರೆ ಶತಮಾನದ ಆಧುನಿಕ ಸಾಹಿತ್ಯದಲ್ಲಿ ಗದ್ಯ ಪ್ರಕಾರದಲ್ಲಿ ಹೆಚ್ಚಿನ ಸಾಹಿತ್ಯ ಕೃಷಿ ನಡೆದಿದೆ. ಅದರಲ್ಲಿಯೂ ಕಾದಂಬರಿ ಪ್ರಕಾರ ಸಾಹಿತ್ಯವಲಯಕ್ಕೆ ಶ್ರೀಸಾಮಾನ್ಯ ಸಾಕ್ಷರರನ್ನೂ ಎಳೆದು ತಂದಿದೆ. ಕನ್ನಡಿಗರಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ್ದಲ್ಲದೆ, ತಮ್ಮ ಕಾದಂಬರಿಗಳ ಮೂಲಕ ಓದುಗ ವರ್ಗವನ್ನು ಅಭಿಮಾನಿಗಳನ್ನಾಗಿ ಪರಿವರ್ತಿಸಿಕೊಂಡ ಚುಂಬಕ ಶಕ್ತಿ ಭೈರಪ್ಪನವರ ಸಾಹಿತ್ಯದ ಹಿರಿಮೆ. ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದರೂ, ಸಂಗೀತಕ್ಕೆ ಪ್ರಥಮ ಆದ್ಯತೆಯನ್ನು ನೀಡಿದ್ದರೂ ಸಾಹಿತಿಯಾಗಿ ಭೈರಪ್ಪನವರು ಇಂದು ಅತ್ಯಂತ ದೊಡ್ಡ ಸಂಖ್ಯೆಯ ಓದುಗ ವರ್ಗವನ್ನು ಪಡೆದ ಕನ್ನಡದ ಹೆಮ್ಮೆಯ ಬರಹಗಾರ. ಅವರ 22 ಕಾದಂಬರಿಗಳು ಕನ್ನಡದಲ್ಲಿ ಹಲವು ಮುದ್ರಣಗಳನ್ನು ಕಂಡಿದ್ದು ಇನ್ನೂ ಓದುಗರ ಬೇಡಿಕೆ ಉಳಿಸಿಕೊಂಡಿವೆ. ಆತ್ಮವೃತ್ತಾಂತ ಮತ್ತು ಸಾಹಿತ್ಯ ಚಿಂತನ ಕುರಿತ ಅವರ ಇತರ ಕೃತಿಗಳೂ ನಿರಂತರ ಬೇಡಿಕೆಯಲ್ಲಿವೆ. ಅವರ ಹೆಚ್ಚಿನ ಕೃತಿಗಳು ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಆಯಾ ಪ್ರದೇಶಗಳ ಓದುಗರಲ್ಲಿಯೂ ಜನಪ್ರಿಯವಾಗಿವೆ. ಭೈರಪ್ಪನವರಷ್ಟು ಓದುಗರಿಂದ ನಿರಂತರ ಬೇಡಿಕೆ ಇರುವಂಥ ಲೇಖಕರು ಸದ್ಯದಲ್ಲಿ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿಯೇ ವಿರಳ. ಕಾದಂಬರಿ ಪ್ರಕಾರವನ್ನು ಅಭಿವ್ಯಕ್ತಿ ಮಾಧ್ಯಮವನ್ನಾಗಿ ಆಯ್ಕೆಮಾಡಿಕೊಂಡಿರುವ ಭೈರಪ್ಪನವರಿಗೆ ಬರವಣಿಗೆ ಸ್ಫೂರ್ತಿ, ಆವೇಶಗಳ ಕ್ರಿಯೆಯಲ್ಲ; ಸಿದ್ಧತೆ, ಶಿಸ್ತು ಮತ್ತು ಧ್ಯಾನಸ್ಥ ಅವಸ್ಥೆಯಲ್ಲಿ ನಡೆಸುವ ಸೃಷ್ಟಿ ಕಾರ್ಯ. ಬೀಜರೂಪದಲ್ಲಿ ಮೊಳೆಯುವ ಕಥಾವಸ್ತುವನ್ನು ಪರಿಭಾವನೆ, ಸಂಶೋಧನೆ ಮತ್ತು ಸ್ವಾನುಭವದಿಂದ ವಿಸ್ತರಿಸಿ ಹರಳುಗಟ್ಟಿಸುವ ಕಸುಬುದಾರಿಕೆಯನ್ನು ಅಳವಡಿಸಿಕೊಂಡವರು ಭೈರಪ್ಪ. ಆದ್ದರಿಂದಲೇ ಅವರ ಹೊಸ ಬರವಣಿಗೆಯು ಓದುಗರಲ್ಲಿ ನಿರೀಕ್ಷೆ ಮೂಡಿಸುವ ಕೌತುಕ. ಅವರು ಈಚಿನ ಕೃತಿಗಳಲ್ಲಿ ಪ್ರತಿಪಾದಿಸುವ ಬಲಪಂಥೀಯ ಆಶಯಗಳ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅವರ ಒಟ್ಟು ಬರವಣಿಗೆ ಸಹೃದಯ ಆಕರ್ಷಣೆ ಉಳಿಸಿಕೊಂಡಿರುವುದನ್ನು ಮರೆಯುವಂತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.