ಮೀಸಲಾತಿ ಅರ್ಥಪೂರ್ಣವಾಗಲಿ ಕೇಂದ್ರ ಸರ್ಕಾರ ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಮತ್ತೆ 70 ಜಾತಿಗಳನ್ನು ಸೇರಿಸಲು ನಿರ್ಧರಿಸುವ ಮೂಲಕ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ವ್ಯಾಪ್ತಿಯಲ್ಲಿ ಮತ್ತಷ್ಟು ಗೊಂದಲ ಮತ್ತು ಇರುವ ಅಲ್ಪಸ್ವಲ್ಪ ಸವಲತ್ತಿನಲ್ಲಿ ಪೈಪೋಟಿ ತಂದಿಡುತ್ತಿದೆ. ಹೊಸದಾಗಿ ಸೇರ್ಪಡೆಯಾಗುವ ಜಾತಿಗಳನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಮಾಡಿದ ಶಿಫಾರಸಿನ ಅನ್ವಯವೇ ಮಾಡಿರುವುದು ಸರಿಯಷ್ಟೇ. ಹಾಗೆ ಮಾಡಬೇಕಾದುದು ನ್ಯಾಯಸಮ್ಮತ ಎನ್ನುವುದು ಸರಿಯಾದ ಕ್ರಮ. ಮೀಸಲಾತಿ ವ್ಯಾಪ್ತಿಯಿಂದ ವಂಚಿತವಾಗಿರುವ ಜಾತಿಗಳ ಸೇರ್ಪಡೆ ಮತ್ತು ಈಗಾಗಲೇ ಮೀಸಲಾತಿಗೆ ಅನರ್ಹವಾಗಿರುವ ಜಾತಿಗಳು ಸೇರ್ಪಡೆಯಾಗಿದ್ದರೆ ಅವುಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಶಿಫಾರಸು ಮಾಡುವ ಅಧಿಕಾರ ಈ ಆಯೋಗಕ್ಕಿದೆ. ಆದರೆ, ಹೀಗೆ ಮಾಡುವಾಗ ಈ ಜಾತಿಗಳ ಜನರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ನಂತರ ಅದನ್ನು ವಿಶ್ಲೇಷಿಸಬೇಕಾಗುತ್ತದೆ. ದುರದೃಷ್ಟಕರ ಸಂಗತಿ ಎಂದರೆ ಎಲ್ಲವೂ ಅಧ್ಯಯನದ ನಂತರವೇ ಆಗುತ್ತದೆ ಎಂದು ಹೇಳುವ ಹಾಗಿಲ್ಲ. ಬಹುತೇಕ ಜಾತಿಗಳ ಸೇರ್ಪಡೆ ಓಟಿನ ಮೇಲೆ ಕಣ್ಣಿಟ್ಟು ಅಧಿಕಾರಸ್ಥ ರಾಜಕಾರಣಿಗಳು ನೀಡುವ ಭರವಸೆಯ ಮೇಲೆಯೇ ಆಗುತ್ತಿರುವ ಗುಮಾನಿ ಸಾಮಾನ್ಯವಾಗಿದೆ. ಇಂತಹ ಕ್ರಮಗಳಿಂದ ನಿಜವಾಗಿಯೂ ಅರ್ಹತೆ ಇರುವ ಜಾತಿಗಳು ವಂಚನೆಗೆ ಒಳಗಾಗುವುದು ಸಹಜ. ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದಾಗಿನಿಂದ ಷೇರು ವಿಕ್ರಯದಿಂದ ಸರ್ಕಾರಿ ಉದ್ಯಮಗಳು ಜಂಟಿ ಸಹಭಾಗಿತ್ವ ಮತ್ತು ಖಾಸಗೀಕರಣಗೊಂಡು ಸರ್ಕಾರಿ ಕೋಟಾದ ಉದ್ಯೋಗಗಳು ಬರಿದಾಗಿವೆ. ಸರ್ಕಾರದ ಮಟ್ಟದಲ್ಲಿ ವರ್ಷ ವರ್ಷವೂ ಉದ್ಯೋಗಗಳು ಖಾಲಿ ಬೀಳುತ್ತಿವೆ. ಹೊಸದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಮೀಸಲಾತಿ ಹೆಸರಿಗಷ್ಟೇ ಇದ್ದು, ಈ ವರ್ಗಗಳಿಗೆ ನಿಗದಿಪಡಿಸಿದ ಹುದ್ದೆಗಳು ಭರ್ತಿಯಾಗುತ್ತಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಮೀಸಲಾತಿ ಪಟ್ಟಿಗೆ ಹೊಸ ಜಾತಿಗಳ ಸೇರ್ಪಡೆಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಸಾಮಾನ್ಯ ವರ್ಗದ ಪಟ್ಟಿಯಲ್ಲಿದ್ದ ಜಾತಿಗಳನ್ನು ಮೀಸಲಾತಿ ವ್ಯಾಪ್ತಿಗೆ ತಂದ ಮೇಲೆ ಇಲ್ಲಿ ಖಾಲಿ ಬೀಳುವ ಶೇಕಡಾವಾರು ಪ್ರಮಾಣವನ್ನು ಮೀಸಲಾತಿಯಲ್ಲಿ ಹೆಚ್ಚಿಸಬೇಕಾಗುತ್ತದೆ. ಸರ್ಕಾರದಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಸರ್ಕಾರದ ಅನುದಾನ ಮತ್ತು ಇತರೆ ಸೌಲಭ್ಯ ಪಡೆಯುವ ಖಾಸಗಿ ಸಂಸ್ಥೆಗಳು, ಡೀಮ್ಡ ವಿಶ್ವವಿದ್ಯಾಲಯ ಮತ್ತಿತರೆ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಮೀಸಲಾತಿ ನಿಯಮಗಳನ್ನು ಜಾರಿಗೆ ತರುವಂತೆ ಸರ್ಕಾರ ಒಂದು ಗಟ್ಟಿ ನಿರ್ಧಾರ ಕೈಗೊಳ್ಳುವ ಬಗೆಗೆ ಗಂಭೀರ ಚಿಂತನೆ ನಡೆಸಬೇಕು. ಹಾಗೆ ಮಾಡದಿದ್ದರೆ ಈ ಅಲಕ್ಷಿತ ವರ್ಗಗಳಿಗೆ ವಂಚನೆ ಮಾಡಿದಂತಾಗುತ್ತದೆ. ಜೊತೆಗೆ ಕೆನೆ ಪದರದಲ್ಲಿ ಬರುವ ಹಿಂದುಳಿದ ವರ್ಗಗಳ ಉಳ್ಳವರು ಸಾಮಾನ್ಯ ವರ್ಗದ ಕೋಟಾದಡಿಯಲ್ಲಿಯೇ ಸ್ಪರ್ಧಿಸಿ ಅವಕಾಶಗಳನ್ನು ಪಡೆಯಬೇಕೇ ಹೊರತು, ಇಲ್ಲದವರಿಗಾಗಿ ಇರುವ ಮೀಸಲಾತಿಯ ತಟ್ಟೆಗೆ ಕೈ ಹಾಕಬಾರದು. ಹೆಚ್ಚು ಅಂಕಗಳನ್ನು ಪಡೆಯುವ ಮತ್ತು ಆರ್ಥಿಕವಾಗಿ ಮುಂದುವರಿದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಮೀಸಲಾತಿ ಹೊರತು ಪಡಿಸಿದ ಶೇ 50ರ ಸಾಮಾನ್ಯ ಸ್ಥಾನಗಳಿಗೆ ತುಂಬಬೇಕು. ಆಗ ಮೀಸಲಾತಿಯಲ್ಲಿ ಅರ್ಹರಿಗೆ ಅವಕಾಶ ಸಿಗಲು ಸಾಧ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.