ವಿಧ್ವಂಸಕ ಕೃತ್ಯದ ತನಿಖೆಯಾಗಲಿ ಬೆಂಗಳೂರು ಮಹಾನಗರಪಾಲಿಕೆಯ ಮೂರು ವಿಭಾಗಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿದ ಪ್ರಕರಣಗಳ ತನಿಖೆ ಆರಂಭಿಸಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆಯ ಪೊಲೀಸ್ ಠಾಣೆಯ ಕಚೇರಿ ಮತ್ತು ಕಂಪ್ಯೂಟರ್ ಕೋಣೆಗೆ ಬೆಂಕಿ ಬಿದ್ದು ದಾಖಲೆಗಳು ಸುಟ್ಟು ಹೋಗಿರುವುದು ಸಂಶಯಕ್ಕೆ ಎಡೆ ಕೊಟ್ಟಿದೆ. ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಆಕಸ್ಮಿಕ ಉಂಟಾಗಿರುವ ಸಾಧ್ಯತೆಯನ್ನು ಪ್ರಾಥಮಿಕ ಹಂತದಲ್ಲಿಯೇ ತಳ್ಳಿ ಹಾಕಿರುವುದರಿಂದ ಇದು ವಿಧ್ವಂಸಕ ಕೃತ್ಯ ಎಂಬ ಗುಮಾನಿಗೆ ಬಲ ಬಂದಿದೆ. ಮಹಾನಗರ ಪಾಲಿಕೆಗೆ ಸಂಬಂಧಿಸಿ ಅಕ್ರಮ ವ್ಯವಹಾರಗಳ ತನಿಖೆ ನಡೆದಿರುವಾಗಲೆಲ್ಲ ಕಡತಗಳು ಸುಟ್ಟು ಹೋಗುವಂತೆ ಬೆಂಕಿ ಆಕಸ್ಮಿಕ ಸಂಭವಿಸುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ನಗರದ ಉತ್ತರ ವಿಭಾಗಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ತನಿಖೆ ನಡೆಯುತ್ತಿದ್ದಾಗಲೂ ಕಡತಗಳು ಬೆಂಕಿಗೆ ಸಿಕ್ಕಿದ್ದವು. ಸಾಕ್ಷ್ಯನಾಶದಿಂದ ಪ್ರಕರಣಗಳಿಂದ ಪಾರಾಗುವ ಸಂಚು ಈ ಪ್ರಕರಣಗಳಲ್ಲಿರುವುದು ಸ್ಪಷ್ಟ. ಹಿಂದಿನ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸ ನಡೆದು ಯಾರಿಗೂ ಶಿಕ್ಷೆಯಾಗದಿರುವುದರಿಂದ ಬೆಂಕಿ ಆಕಸ್ಮಿಕ ಮರುಕಳಿಸಿದೆ. ಮಹಾನಗರ ಕಾರ್ಯಪಡೆ ತನಿಖೆ ನಡೆಸುವುದಕ್ಕೆ ವಶಪಡಿಸಿಕೊಂಡಿದ್ದ ಯಾವ ಕಡತಗಳೂ ಈ ಆಕಸ್ಮಿಕದಲ್ಲಿ ನಾಶವಾಗಿಲ್ಲವೆಂಬ ಸಂಗತಿ ಸಮಾಧಾನಕರವಾಗಿದ್ದರೂ ಪಾಲಿಕೆ ಇಷ್ಟಕ್ಕೆ ಸುಮ್ಮನಾಗಬಾರದು. ಇದನ್ನು ಆಕಸ್ಮಿಕ ಪ್ರಕರಣವೆಂದು ಸರ್ಕಾರವೂ ಲಘುವಾಗಿ ಪರಿಗಣಿಸಬಾರದು. ಈಚಿನ ಮೂರು ವರ್ಷಗಳಲ್ಲಿ ಬೆಂಗಳೂರು ನಗರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಕಾಲಕಾಲಕ್ಕೆ ಆರೋಪಗಳು ಕೇಳಿಬಂದಿದ್ದರೂ ಸರಿಯಾಗಿ ಅವುಗಳ ತನಿಖೆಗೆ ಸರ್ಕಾರ ಆಸಕ್ತಿ ತೋರಿಸಿಲ್ಲ. ರಾಜ್ಯ ಸರ್ಕಾರದಿಂದ ಮಾತ್ರವಲ್ಲದೆ ಕೇಂದ್ರದಿಂದ ಬಂದ ವಿಶೇಷ ನೆರವಿನ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹರಿದು ಬಂದು ವೆಚ್ಚವಾಗಿದೆ. ಕಾಮಗಾರಿಗಳ ಗುಣಮಟ್ಟದಲ್ಲಿ ಲೋಪ, ಕೆಲಸಗಳು ನಡೆಯದೆಯೇ ಹಣ ಮಂಜೂರಾಗಿರುವುದು, ನಕಲಿ ಬಿಲ್ ಸಲ್ಲಿಸಿ ಹಣ ಪಡೆದಿರುವುದು, ಅನಗತ್ಯ ಕಾಮಗಾರಿಗಳಿಗೆ ಜಾಬ್‌ಕೋಡ್ ನೀಡಿ ಹಣ ಬಿಡುಗಡೆ ಮಾಡುವುದು ಇತ್ಯಾದಿ ಹಲವು ವಿಧಾನಗಳಲ್ಲಿ ಹಣದ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಈ ಯಾವ ಪ್ರಕರಣಗಳೂ ಸರಿಯಾಗಿ ತನಿಖೆಗೆ ಒಳಪಟ್ಟು ತಾರ್ಕಿಕ ಮುಕ್ತಾಯ ಕಂಡಿಲ್ಲ. ಇದಕ್ಕೆ ಮುಖ್ಯಕಾರಣ ಭ್ರಷ್ಟ ಅಧಿಕಾರಿಗಳು, ದುಷ್ಟ ಜನಪ್ರತಿನಿಧಿಗಳು ಮತ್ತು ಲಾಭಕೋರ ಗುತ್ತಿಗೆದಾರರ ನಡುವಣ ಅಪವಿತ್ರ ಹೊಂದಾಣಿಕೆ ಮತ್ತು ಈ ಹೊಂದಾಣಿಕೆಗೆ ಇರುವ ರಾಜಕೀಯ ರಕ್ಷಣೆ. ಕೆಲವು ವಿಭಾಗಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆದಿಲ್ಲವೆಂದು ಸ್ವತಃ ಆಯುಕ್ತರೇ ತನಿಖೆ ನಡೆಸಿ ಕ್ರಮಕ್ಕೆ ಮುಂದಾದರೆ, ಆ ವಿಭಾಗಗಳ ಜನಪ್ರತಿನಿಧಿಗಳು ಗುತ್ತಿಗೆದಾರರನ್ನು ಸಮರ್ಥಿಸಿಕೊಳ್ಳುವಂತೆ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹಿಸುವಂಥ ಪರಿಸ್ಥಿತಿ ಇರುವುದು ಇಂಥ ಹೊಂದಾಣಿಕೆಗೆ ನಿದರ್ಶನ. ಸರ್ಕಾರ ಮಹಾನಗರಪಾಲಿಕೆಯಲ್ಲಿ ನಡೆದಿರುವ ಎಲ್ಲ ಕಾಮಗಾರಿಗಳ ಸಮಗ್ರ ತನಿಖೆಗೆ ಆದೇಶಿಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷಿಸುವ ಬದ್ಧತೆಯನ್ನು ಪ್ರದರ್ಶಿಸಬೇಕು. ಈ ಸರ್ಕಾರದಿಂದ ಇಂಥ ನಿರೀಕ್ಷೆಯನ್ನು ಇಟ್ಟುಕೊಳ್ಳಬಹುದೇ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.