ಕಾಯ್ದೆ ಸಾಲದು, ಜಾರಿ ಬೇಕು ಮದ್ಯಪಾನ ಮಾಡಿ ವಾಹನ ಓಡಿಸುವವವರಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ `ಮೋಟಾರು ವಾಹನ ಕಾಯ್ದೆ~ಗೆ ತಿದ್ದುಪಡಿ ತಂದು ವಾಹನ ಚಾಲನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂಥ ವ್ಯವಸ್ಥೆ ರೂಪಿಸುವ ಸರ್ಕಾರದ ಕಾಳಜಿ ಸ್ವಾಗತಾರ್ಹ. ಮದ್ಯಪಾನ ಮಾಡಿ ವಾಹನ ಓಡಿಸುವ ಚಾಲಕರಿಗೆ ದಂಡದ ಜೊತೆಗೆ ಆರು ತಿಂಗಳು ಜೈಲು ಶಿಕ್ಷೆ ಸೇರಿದಂತೆ ಇತರ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಆಲೋಚನೆ ಮೆಚ್ಚುವಂಥದ್ದು. ಈ ವ್ಯವಸ್ಥೆ ಸುಗಮ ಸಂಚಾರದ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಆಗಬಹುದಷ್ಟೆ. ಈಗ ಜಾರಿಯಲ್ಲಿರುವ ಮೋಟಾರು ವಾಹನ ಕಾಯ್ದೆಯಲ್ಲಿಯೇ ಅಮಲಿನಲ್ಲಿ ವಾಹನ ಓಡಿಸುವವರಿಗೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ಎರಡನ್ನೂ ವಿಧಿಸಲು ಅವಕಾಶವಿದೆ. ಆದರೆ ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಾಗುತ್ತಿಲ್ಲ. ಅಮಲಿನಲ್ಲಿ ವಾಹನ ಓಡಿಸುವಾಗ ಸಿಕ್ಕಿಬಿದ್ದ ಚಾಲಕರಿಗೆ ದಂಡ ಹಾಕಿ, ಎಚ್ಚರಿಕೆ ನೀಡಿ ಬಿಟ್ಟು ಕಳಿಸುವ ಪರಿಪಾಠ ರೂಢಿಯಲ್ಲಿದೆ. ಹೀಗಾಗಿ ಕುಡಿದು ವಾಹನ ಓಡಿಸುವುದು ಶಿಕ್ಷಾರ್ಹ ಅಪರಾಧ ಎಂದು ಯಾರೂ ಪರಿಗಣಿಸಿಲ್ಲ. ಕಳೆದ ವರ್ಷ ದೇಶದ ಉದ್ದಗಲ ಅಮಲಿನಲ್ಲಿ ವಾಹನ ಓಡಿಸಿದ ಚಾಲಕರು 4.5 ಲಕ್ಷ ಅಪಘಾತಗಳಿಗೆ ಕಾರಣರಾಗಿದ್ದಾರೆ. ಇವುಗಳಲ್ಲಿ 1.3 ಲಕ್ಷ ಜನರು ಜೀವ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ. ಅಮಲಿನಲ್ಲಿ ವಾಹನ ಓಡಿಸುವ ಪ್ರವೃತ್ತಿಯಿಂದ ಇನ್ನೂ ಅನೇಕ ಬಗೆಯ ಅಧ್ವಾನಗಳು ನಡೆಯುತ್ತವೆ. ಈ ಪ್ರವೃತ್ತಿಗೆ ಸರ್ಕಾರ ಕಡಿವಾಣ ಹಾಕಬೇಕು. ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದರೆ ಸಾಲದು. ಅವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ವ್ಯವಸ್ಥೆಯನ್ನೂ ಮಾಡಬೇಕು. ಈಗ ಜಾರಿಯಲ್ಲಿರುವ ಸಾಮಾನ್ಯ ಸಂಚಾರ ನಿಯಮಗಳೂ ಪಾಲನೆ ಆಗುತ್ತಿಲ್ಲ. ಅನೇಕರು ಲೈಸನ್ಸ್ ಇಲ್ಲದೆ ವಾಹನ ಓಡಿಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಯಾವ ನಿಯಮಗಳೂ ಇಲ್ಲ. ಲೈಸನ್ಸ್ ನೀಡಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಇದೆ. ಸಾರಿಗೆ ಇಲಾಖೆಯ ಪ್ರತಿ ಹಂತದಲ್ಲೂ ಹಣ, ರಾಜಕೀಯ ಪ್ರಭಾವ ಕೆಲಸ ಮಾಡುತ್ತದೆ. ಲೈಸನ್ಸ್ ನೀಡುವ ಮೊದಲು ಕಟ್ಟುನಿಟ್ಟಿನ ಪರೀಕ್ಷೆ ನಡೆಸಬೇಕು. ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ ಬಲಗೊಳ್ಳಬೇಕು. ಸಂಚಾರ ನಿಯಮಗಳ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿದ ಮಾತ್ರಕ್ಕೆ ಅಪಘಾತಗಳು ಹತೋಟಿಗೆ ಬರುತ್ತವೆ ಎಂಬ ವಿಶ್ವಾಸ ಇಲ್ಲ. ಈ ಹಿನ್ನೆಲೆಯಲ್ಲಿ ಸಂಚಾರ ನಿಯಮಗಳ ಪಾಲನೆ ಕುರಿತಂತೆ ಮಕ್ಕಳಿಗೆ ಶಾಲಾ ಪಠ್ಯದಲ್ಲಿಯೇ ತಿಳುವಳಿಕೆ ನೀಡುವುದಕ್ಕೂ ಸರ್ಕಾರ ಗಮನ ಕೊಡಬೇಕು. ನಿಯಮ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ ಎನ್ನುವ ವಾತಾವರಣ ನಿರ್ಮಾಣವಾದರೆ ಸುಗಮ ಸಂಚಾರ ವ್ಯವಸ್ಥೆ ಸಾಧ್ಯವಾಗಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.