ಮೋಸದಾಟದ ತನಿಖೆ ಆಗಲಿ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ, 1996 ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಸೋತ ಸೆಮಿಫೈನಲ್ ಪಂದ್ಯದಲ್ಲಿ ಮೋಸದಾಟ ನಡೆದ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಸತ್ತುಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದಾರೆ. ಶ್ರೀಲಂಕಾ ವಿರುದ್ಧದ ಆ ಪಂದ್ಯದಲ್ಲಿ ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡಿದ್ದ ನಾಯಕ ಮಹಮ್ಮದ್ ಅಜರುದ್ದೀನ್ ಅವರ ನಿರ್ಧಾರ ಮೋಸದಾಟದ ಅನುಮಾನ ಮೂಡಿಸಿತ್ತು ಎಂದೂ ಅವರು ಹೇಳಿದ್ದಾರೆ. ಕೋಲ್ಕತ್ತದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಸೋಲುವುದು ಖಚಿತವಾದಾಗ ದೊಡ್ಡ ಗಲಾಟೆಯೇ ಆಗಿ ಪಂದ್ಯ ನಿಂತಿತ್ತು. ಶ್ರೀಲಂಕಾ ವಿಜಯೀ ಎಂದು ಘೋಷಿಸಲಾಗಿತ್ತು. ನಂತರ ಕ್ರಿಕೆಟ್ ರಂಗದ ಮೋಸದಾಟ ಪ್ರಕರಣ ಬೆಳಕಿಗೆ ಬಂದು ಅಜರುದ್ದೀನ್ ಅವರನ್ನು ಆಜೀವ ಪರ್ಯಂತ ಆಡದಂತೆ ನಿಷೇಧಿಸಲಾಗಿತ್ತು. ವಿನೋದ್ ಕಾಂಬ್ಳಿ ಪ್ರತಿಭಾವಂತ ಆಟಗಾರನಾಗಿದ್ದರೂ ತಮ್ಮ ಅಶಿಸ್ತು ಮತ್ತು ಒರಟುತನದಿಂದ ತಂಡದಿಂದ ಹೊರಹೋದವರು. ಆ ಪಂದ್ಯ ನಡೆದು 15 ವರ್ಷಗಳ ನಂತರ ಈಗ ಅವರು ಬಾಯಿಬಿಡುತ್ತಿರುವುದು ಯಾಕೆ ಎಂಬುದು ಅರ್ಥವಾಗುವುದಿಲ್ಲ. ಆಗ ತಮ್ಮನ್ನು ಹರಕೆ ಕುರಿಯನ್ನಾಗಿ ಮಾಡಲಾಗಿತ್ತು ಎಂದು ಹೇಳಿರುವ ಅವರು ಈಗಲೂ ಯಾರದೋ ಕುಮ್ಮಕ್ಕಿನಿಂದ ಮಾತನಾಡಿರುವ ಸಾಧ್ಯತೆ ಇದೆ. ತಮ್ಮ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಅವರು ಆಗ ಅಜರುದ್ದೀನ್ ವಿರುದ್ಧ ಆರೋಪ ಮಾಡಲು ಸಾಧ್ಯವಾಗಿರಲಿಕ್ಕಿಲ್ಲ. ಆದರೆ ಪ್ರಕರಣದ ವಿಚಾರಣೆ ನಡೆಯುವ ಸಂದರ್ಭದಲ್ಲಾದರೂ ಅವರು ಬಾಯಿಬಿಡಬಹುದಿತ್ತು. ಈಗ ಅವರ ಉದ್ದೇಶವೂ ಅನುಮಾನಾಸ್ಪದವಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾಂಬ್ಳಿ ಹೇಳಿಕೆ ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದೆ. ಆದರೆ ಕೇಂದ್ರ ಕ್ರೀಡಾ ಸಚಿವ ಅಜಯ್ ಮಾಕೆನ್ ಬಗ್ಗೆ ತನಿಖೆಯಾಗಬೇಕು ಎಂದಿದ್ದಾರೆ. ಭಾರತದ ಕೆಲವು ಆಟಗಾರರ ಕ್ರಿಕೆಟ್ ಜೀವನ ಈ ಪ್ರಕರಣದಿಂದ ಅಂತ್ಯಗೊಂಡರೂ ಯಾರಿಗೂ ದೊಡ್ಡ ಶಿಕ್ಷೆಯಾಗಿಲ್ಲ. ಇಂಗ್ಲೆಂಡ್‌ನಲ್ಲಿ ಮೋಸದಾಟ (ಸ್ಪಾಟ್ ಫಿಕ್ಸಿಂಗ್) ನಡೆಸಿದ ಆರೋಪದ ಮೇಲೆ ಪಾಕಿಸ್ತಾನದ ಮೂವರು ಆಟಗಾರರಿಗೆ ಈಗ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಅಂಶ ಕಾಂಬ್ಳಿಗೆ ಮನಸ್ಸನ್ನು ಬಡಿದೆಬ್ಬಿಸಿರಬಹುದು. ಅದೇನೇ ಇದ್ದರೂ, ತನಿಖೆ ನಡೆಸುವುದರಲ್ಲಿ ಯಾವ ತಪ್ಪೂ ಇಲ್ಲ. ದೆಹಲಿ ಪೊಲೀಸರು ಆರಂಭಿಸಿದ್ದ ತನಿಖೆ ಪೂರ್ಣಗೊಳ್ಳುತ್ತಲೇ ಇಲ್ಲ. ಈಗ ಸಂಸದರಾಗಿರುವ ಅಜರುದ್ದೀನ್ ಸಹಜವಾಗಿಯೇ ಕಾಂಬ್ಳಿ ಹೇಳಿಕೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಯಾವ ತಪ್ಪನ್ನೂ ಮಾಡಿಲ್ಲ ಎಂದು ಹೇಳುವ ಅಜರ್ ತನಿಖೆಗೆ ಯಾಕೆ ಹೆದರಬೇಕು? ಒಬ್ಬ ಸಂಸದನಾಗಿ ಕ್ರಿಕೆಟ್‌ಗೆ ಅಂಟಿದ್ದ ಕಳಂಕವನ್ನು ತೊಡೆದುಹಾಕಲು ಅವರು ಯತ್ನಿಸಬೇಕು. ಕೇಂದ್ರ ತನಿಖೆಗೆ ಆದೇಶಿಸಬೇಕು. ಕಾಂಬ್ಳಿ ತಡವಾಗಿ ರಾಡಿ ಕದಡಿದ್ದರೂ ಆ ಕೊಳ ಶುದ್ಧ ಮಾಡುವ ಜವಾಬ್ದಾರಿ ಮಂಡಳಿ ಮೇಲಿದೆ. ಸತ್ಯ ಅರಿಯುವ ಹಕ್ಕು ಕ್ರಿಕೆಟ್ ಪ್ರೇಮಿಗಳಿಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.