ಕಿಂಗ್‌ಫಿಷರ್: ನಷ್ಟದ ಸುಳಿ ಐ ಷಾರಾಮಿ ವಿಮಾನಯಾನ ಸಂಸ್ಥೆ `ಕಿಂಗ್‌ಫಿಷರ್ ಏರ್‌ಲೈನ್ಸ್~ ಸತತವಾಗಿ ಅನುಭವಿಸುತ್ತಿರುವ ನಷ್ಟದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವಾರದಲ್ಲಿ 250 ವಿಮಾನಗಳ ಸಂಚಾರವನ್ನು ಅದು ರದ್ದುಪಡಿಸಿದೆ. ಇಂಧನ ಖರೀದಿ, ನೌಕರರ ಸಂಬಳ, ವಿಮಾನ ನಿಲ್ದಾಣ ಶುಲ್ಕಕ್ಕೆ ಹಣ ನೀಡಲಾಗದ ಸ್ಥಿತಿಯಲ್ಲಿ ಅದು ಸಿಲುಕಿಕೊಂಡಿದೆ. ಕುಸಿದುಹೋಗುತ್ತಿರುವ ಸಂಸ್ಥೆಗೆ ಜೀವದಾನ ನೀಡಲು, ಸರ್ಕಾರದಿಂದ ಸಂಕಷ್ಟ ಪರಿಹಾರ ಪ್ಯಾಕೇಜ್ ನೀಡಬೇಕೆ ಬೇಡವೆ ಎಂಬ ವಿಚಾರವೂ ಈಗ ವಾದವಿವಾದಗಳಿಗೆ ಕಾರಣವಾಗಿದೆ. ಕಿಂಗ್‌ಫಿಷರ್ ಸಂಸ್ಥೆಗೆ ನೆರವಾಗುವ ದಾರಿಗಳನ್ನು ಸರ್ಕಾರ ಹುಡುಕಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ. ಆದರೆ ಈ ವರ್ಷ ಜನವರಿಯಲ್ಲಷ್ಟೇ ಈ ವಿಮಾನ ಯಾನ ಸಂಸ್ಥೆಯ ಸಾಲ ಸ್ವರೂಪವನ್ನು ಪುನರ್‌ರಚನೆ ಮಾಡಿ, ಸಾಲದ ಮೇಲಿನ ಬಡ್ಡಿದರ ಇಳಿಕೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ಈಗ ಮತ್ತೆ ಎದ್ದಿರುವ ಈ ನಷ್ಟದ ಹುಯಿಲು ಸಂಸ್ಥೆಯ ವ್ಯವಹಾರ ಮಾದರಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯೇ. ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರಾದ ಮದ್ಯದ ದೊರೆ, ಶತಕೋಟ್ಯಧಿಪತಿ ವಿಜಯ್ ಮಲ್ಯ ಅವರ ಹೊಸ ಷೋಕಿ ಎನ್ನುವ ರೀತಿಯೇ ಈ ಅದ್ದೂರಿಯ, ಆಡಂಬರದ ವಿಮಾನಯಾನ ಸಂಸ್ಥೆ ಹುಟ್ಟು ಪಡೆದಿದ್ದು. ಭಾರತದ ಪ್ರಯಾಣಿಕರು ಕಾಣದಿದ್ದ ಅದ್ದೂರಿತನ, ಥಳುಕು ಬಳುಕನ್ನೂ ಕಿಂಗ್‌ಫಿಷರ್ ವಿಮಾನಯಾನ ಸಾಕಾರಗೊಳಿಸಿತ್ತು. ಆದರೆ ಈ ಉದ್ಯಮ ಆರಂಭಕ್ಕೆ ಅಗತ್ಯವಾಗಿದ್ದ ಪೂರ್ವಸಿದ್ಧತೆ, ಪರಿಶ್ರಮ ಅಥವಾ ಸಮರ್ಪಕ ಯೋಜನೆಗಳಲ್ಲಿ ಸಂಸ್ಥೆ ಎಡವಿರುವುದರ ಫಲ ಈಗಿನ ಸ್ಥಿತಿ. 2005ರಲ್ಲಿ ಕಿಂಗ್‌ಫಿಷರ್ ಏರ್‌ಲೈನ್ಸ್ ಸ್ಥಾಪನೆಗೊಂಡ ನಂತರ, ಭಾರತದ ಅತಿ ಕಡಿಮೆ ಪ್ರಯಾಣದರದ ವಿಮಾನ ಸಂಸ್ಥೆ `ಏರ್ ಡೆಕ್ಕನ್~ ಖರೀದಿಗೆ ಅದು ಭಾರಿ ಬೆಲೆಯನ್ನೇ ತೆತ್ತಿತ್ತು. ಈಚಿನ ವರ್ಷಗಳಲ್ಲಿ ಲಾಭ ಗಳಿಸದ ಕಿಂಗ್‌ಫಿಷರ್ ಒಟ್ಟು 7057. 08 ಕೋಟಿ ರೂಪಾಯಿಗಳ ನಷ್ಟದ ಸುಳಿಯಲ್ಲಿ ಈಗ ಸಿಲುಕಿದೆ. ಹಾಗೆ ನೋಡಿದರೆ ರಾಷ್ಟ್ರದ ಎಲ್ಲಾ ವಿಮಾನಯಾನ ಸಂಸ್ಥೆಗಳೂ ಸಂಕಷ್ಟದಲ್ಲೇ ಇವೆ. 2007ರಲ್ಲಿ ಏರ್ ಇಂಡಿಯಾ ಹಾಗೂ ಇಂಡಿಯನ್ ಏರ್‌ಲೈನ್ಸ್ ವಿಲೀನದ ನಂತರ ಸೃಷ್ಟಿಯಾದ ಸರ್ಕಾರದ `ಏರ್ ಇಂಡಿಯಾ~ದ ನಷ್ಟ ಭಾರಿ ಸುದ್ದಿಯನ್ನೇ ಮಾಡಿದೆ. ಜೆಟ್‌ಏರ್‌ವೇಸ್. ಸ್ಪೈಸ್‌ಜೆಟ್‌ಗಳೂ ನಷ್ಟದಲ್ಲೇ ಇವೆ. ಹೆಚ್ಚಿದ ಇಂಧನ ಬೆಲೆ, ದುರ್ಬಲ ರೂಪಾಯಿ ಹಾಗೂ ವಿಮಾನಯಾನ ರಂಗದಲ್ಲಿನ ತೀವ್ರ ಸ್ಪರ್ಧೆಯನ್ನು ಇದಕ್ಕೆ ದೂರಲಾಗುತ್ತದೆ. ಆದರೆ ವಿಶ್ವಾಸಾರ್ಹ ವಾಣಿಜ್ಯ ಯೋಜನೆಯನ್ನು ರೂಪಿಸಬೇಕಾದುದು ವಿಮಾನಯಾನ ಸಂಸ್ಥೆಗಳ ಕರ್ತವ್ಯ. ನಷ್ಟದಲ್ಲಿ ಸಿಲುಕಿದ ಖಾಸಗಿ ಕಂಪೆನಿಗಳಿಗೆ ಸಂಕಷ್ಟ ಪರಿಹಾರ ಪ್ಯಾಕೇಜ್‌ಗಳನ್ನು ನೀಡುವ ಬಗ್ಗೆ ಹಿರಿಯ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರು ವ್ಯಕ್ತಪಡಿಸಿರುವ ವಿರೋಧ ಈ ಸಂದರ್ಭದಲ್ಲಿ ಉಲ್ಲೇಖಾರ್ಹ. ಮುಕ್ತ ಅರ್ಥ ವ್ಯವಸ್ಥೆಯಲ್ಲಿ `ಸಾಯುವವರು ಸಾಯಲೇಬೇಕು~ ಎಂಬ ಅವರ ಮಾತು ಅರ್ಥಗರ್ಭಿತ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.