ಲೋಕಾಯುಕ್ತ ಬಲಗೊಳ್ಳಲಿ ಲೋಕಾಯುಕ್ತ, ಕರ್ನಾಟಕ ಸರ್ಕಾರವೇ ಅಸ್ತಿತ್ವಕ್ಕೆ ತಂದ ಭ್ರಷ್ಟಾಚಾರ ಪ್ರಕರಣಗಳ ತನಿಖಾ ಸಂಸ್ಥೆ. ದೂರನ್ನು ಆಧರಿಸಿ ಮಾತ್ರವಲ್ಲದೆ, ಮಾಹಿತಿ ಅವಲಂಬಿಸಿ ಸ್ವಯಂ ಪ್ರೇರಣೆಯಿಂದ ತನಿಖೆ ನಡೆಸುವ ಅಧಿಕಾರವನ್ನು ಅದಕ್ಕೆ ನೀಡಬೇಕೆಂದು ಲೋಕಾಯುಕ್ತ ಹುದ್ದೆ ವಹಿಸಿಕೊಂಡಿದ್ದವರು ಮನವಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಅದನ್ನು ಪುರಸ್ಕರಿಸಿಲ್ಲ. ಆದರೂ, ಲಭ್ಯವಿರುವ ಅಧಿಕಾರವನ್ನೇ ಬಳಸಿ ತನಿಖೆ ನಡೆಸಿ, ಸರ್ಕಾರಕ್ಕೆ ಸಲ್ಲಿಸಿದ ವರದಿಯಿಂದ ರಾಜ್ಯದ ಮುಖ್ಯಮಂತ್ರಿಯೇ ಅಧಿಕಾರ ಕಳೆದುಕೊಳ್ಳುವಂತಾಯಿತು. ಈ ಕಾರಣಕ್ಕೆ ಕರ್ನಾಟಕದ ಲೋಕಾಯುಕ್ತ, ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ದೇಶದಲ್ಲಿಯೇ ಪ್ರಬಲ ಸಂಸ್ಥೆಯೆಂದು ಹೆಸರಾಗಿದೆ. ಲೋಕಾಯುಕ್ತ ತನಿಖೆಯ ಬಿಸಿ ಆಡಳಿತಾರೂಢ ಬಿಜೆಪಿಯ ಕೆಲವು ಸಚಿವರು ಮತ್ತು ಜೆಡಿಎಸ್ ಅಧ್ಯಕ್ಷರ ಸಂಬಂಧಿಗಳಿಗೆ ತಟ್ಟಿರುವ ಕಾರಣ ಈ ತನಿಖಾ ಸಂಸ್ಥೆಯನ್ನೇ ದುರ್ಬಲಗೊಳಿಸಲು ಈ ಎರಡೂ ಪಕ್ಷಗಳ ಮುಖಂಡರು ಯತ್ನಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಹಿಡಿದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮತ್ತು ಮೂವರು ಸಚಿವರು ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ ಲೋಕಾಯುಕ್ತ ತನಿಖಾ ವರದಿಯನ್ನು ಜೀರ್ಣಿಸಿಕೊಳ್ಳಲು ಆ ಪಕ್ಷಕ್ಕೆ ಇನ್ನೂ ಸಾಧ್ಯವಾಗಿಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳು, ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆ, ಜನಪ್ರತಿನಿಧಿಗಳ ಜವಾಬ್ದಾರಿ ಮತ್ತು ಕರ್ತವ್ಯದ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇಲ್ಲದವರಂತೆ ವರ್ತಿಸುವ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಿಗೆ, ರಜೆಯಲ್ಲಿರುವ ಲೋಕಾಯುಕ್ತದ ಎಸ್‌ಪಿ ಮಧುಕರಶೆಟ್ಟಿ ಪ್ರಾಸಂಗಿಕವಾಗಿ `ಲೋಕಾಯುಕ್ತದಲ್ಲಿಯೂ ಭ್ರಷ್ಟರಿದ್ದಾರೆ~ ಎಂದು ಹೇಳಿದ ಮಾತು ಈಗ ನೆಪವಾಗಿದೆ. `ಭ್ರಷ್ಟರಿಂದ ಕೂಡಿರುವ ಲೋಕಾಯುಕ್ತವನ್ನು ರದ್ದು ಮಾಡಬೇಕು~ ಎಂದು ಆಗ್ರಹಿಸುವ ಮೂಲಕ ಭ್ರಷ್ಟಾಚಾರ ತನಿಖೆ ವ್ಯವಸ್ಥೆಯನ್ನೇ ನಿಷ್ಕ್ರಿಯಗೊಳಿಸುವ ದುಷ್ಟ ಉದ್ದೇಶವನ್ನು ಅವರು ಪ್ರಕಟಿಸಿದ್ದಾರೆ. ರಾಜ್ಯ ಸಂಪುಟದ ಕೆಲವು ಸಚಿವರ ವಿರುದ್ಧ ಆರೋಪಗಳಿವೆ ಎಂದ ಮಾತ್ರಕ್ಕೆ ಸಂಪುಟವನ್ನೇ ವಿಸರ್ಜಿಸಲು ಅವರು ಆಗ್ರಹಿಸುತ್ತಾರೆಯೇ? ಲೋಕಾಯುಕ್ತದಲ್ಲಿ ಭ್ರಷ್ಟರಿದ್ದಾರೆ ಎಂಬುದು ಹೊಸ ಸಂಗತಿಯೇನೂ ಅಲ್ಲ. ಹಿಂದಿನ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಅವರೇ ಅದನ್ನು ಬಹಿರಂಗಪಡಿಸಿದ್ದರು. ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದ ಲೋಕಾಯುಕ್ತ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಿದ ಹಾಗೂ ಕಳಂಕಿತ ಅಧಿಕಾರಿಗಳನ್ನು ತಮ್ಮ ಹಿಂದಿನ ಇಲಾಖೆಗಳಿಗೆ ಕಳುಹಿಸಿದ ನಿದರ್ಶನಗಳಿವೆ. ಪ್ರಬಲ ಜನಲೋಕಪಾಲಕ್ಕಾಗಿ ಈಚೆಗೆ ನಡೆದ ನಾಗರಿಕ ಸಮಾಜದ ಹೋರಾಟದ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಬಲ ಲೋಕಾಯುಕ್ತ ರಚಿಸಿಕೊಳ್ಳುವ ಜಾಗೃತಿ ಮೂಡಿದೆ. ತನಿಖಾ ವ್ಯವಸ್ಥೆ ಪ್ರಬಲವಾಗಿದ್ದರೆ ಭ್ರಷ್ಟಾಚಾರ ನಿರ್ಮೂಲನ ಸಾಧ್ಯ. ಈಗ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದವರೆಲ್ಲರೂ ಲೋಕಾಯುಕ್ತದ ವಿರುದ್ಧ ಹರಿಹಾಯುತ್ತಿರುವುದನ್ನು ಗಮನಿಸಿದರೆ ಅದು ಎಷ್ಟು ಪ್ರಭಾವಶಾಲಿ ಎಂಬುದು ಸ್ಪಷ್ಟವಾಗುತ್ತದೆ. ಅಕ್ರಮ ಗಣಿಗಾರಿಕೆ ಕುರಿತಾಗಿ ಲೋಕಾಯುಕ್ತ ಸಂಸ್ಥೆ ಸಲ್ಲಿಸಿದ ವರದಿಯ ಕಾರಣದಿಂದಲೇ, ತಾವು ಕನಸಿನಲ್ಲಿಯೂ ನಿರೀಕ್ಷೆ ಮಾಡದ ಮುಖ್ಯಮಂತ್ರಿ ಸ್ಥಾನಕ್ಕೆ ಬಂದ ಡಿ.ವಿ.ಸದಾನಂದಗೌಡರು ಈ ತನಿಖಾ ಸಂಸ್ಥೆಯನ್ನು ಬಲಪಡಿಸುವುದಕ್ಕೆ ಬದಲಾಗಿ ದುರ್ಬಲಗೊಳಿಸಲು ಹೊರಟಿರುವುದು ಕೃತಘ್ನ ನಡವಳಿಕೆ. `ಜನತೆ ನೀಡಿದ ಅಧಿಕಾರ, ಸ್ವೇಚ್ಛಾವರ್ತನೆಗೆ ಪರವಾನಗಿಯಲ್ಲ; ಅದು ಶಾಶ್ವತವೂ ಅಲ್ಲ~ ಎಂಬುದನ್ನು ಮುಖ್ಯಮಂತ್ರಿಗಳು ಅರಿತುಕೊಳ್ಳಬೇಕು. ಲೋಕಾಯುಕ್ತದ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.