ಇನ್ನೊಂದು ಕಸರತ್ತು ಚುನಾವಣೆ ಬಂತೆಂದರೆ ಬಹಳ ಜನರಿಗೆ ಹಬ್ಬ. ಚುನಾವಣೆಯಲ್ಲಿ ಹಣದ ಪ್ರಭಾವ ಬಹಳ ದೊಡ್ಡದು. ಹಣವಿಲ್ಲದೇ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ವಾತಾವರಣವನ್ನು ಎಲ್ಲ ರಾಜಕೀಯ ಪಕ್ಷಗಳೂ ಸೃಷ್ಟಿಸಿವೆ. ಬಿಜೆಪಿಯ `ಆಪರೇಷನ್ ಕಮಲ~ವಂತೂ ರಾಜಕೀಯ ಕುದುರೆ ವ್ಯಾಪಾರದಲ್ಲಿ ಬೆಲೆ ಏರಿಸಿಬಿಟ್ಟಿದೆ. ಗಣಿಧಣಿಗಳ ಕೃಪೆಯಿಂದ ದುಡ್ಡಿನಿಂದ ಏನು ಬೇಕಾದರೂ ಯಾರನ್ನು ಬೇಕಾದರೂ ಖರೀದಿಸಬಹುದು ಎಂಬ ನಂಬಿಕೆ ಬಲವಾಗಿಬಿಟ್ಟಿದೆ. ಚುನಾವಣೆ ಆಯೋಗದ ಎಲ್ಲ ನಿಯಮ ಹಾಗೂ ನಿಬಂಧನೆಗಳನ್ನು ಗಾಳಿಗೆ ತೂರುವುದು ನಗ್ನ ಕಣ್ಣಿಗೇ ಗೋಚರಿಸುತ್ತದೆ. ಕೆಲವು ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈಗ ಜೈಲಿನ ಕಂಬಿ ಎಣಿಸುತ್ತಿರುವರಾದರೂ ಚುನಾವಣೆಯಲ್ಲಿ ಹಣದ ಹೊಳೆ ಹರಿಯದಂತೆ ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಬಳ್ಳಾರಿ ಉಪಚುನಾವಣೆಯಲ್ಲಿ ಹತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ತೆಗೆದುಕೊಂಡು ಹೋಗುವವರು ಅದಕ್ಕೆ ದಾಖಲೆ ಕೊಡಬೇಕಾಗುತ್ತದೆ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಹೇಳಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆದರೆ ರಂಗೋಲಿ ಕೆಳಗೆ ನುಸುಳುವ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ಕತ್ತಲು ರಾತ್ರಿಯಂದು ಅಂದರೆ ಮತದಾನದ ಹಿಂದಿನ ರಾತ್ರಿ ಪ್ರತಿಯೊಂದು ಮನೆಗೆ ಮತವೊಂದಕ್ಕೆ ಇಂತಿಷ್ಟು ಹಣ ಎಂದು ಕೊಟ್ಟು ಬರುವುದು ರಹಸ್ಯವೇನಲ್ಲ. ಆ್ಯಂಬುಲೆನ್ಸ್‌ಗಳಲ್ಲಿ, ಹಾಲಿನ ವ್ಯಾನುಗಳಲ್ಲಿ ಹಣ ಸಾಗಿಸುವಾಗ ಸಿಕ್ಕಿ ಬಿದ್ದ ಉದಾಹರಣೆಗಳೂ ಇವೆ. ತನಿಖಾ ದಳದವರ ಹದ್ದಿನ ಕಣ್ಣಿನ ನಡುವೆಯೇ ಹಣ ಹಂಚುವವರು ನುಸುಳಿ ಹೋಗುತ್ತಾರೆ. ಅಲ್ಲದೇ ತನಿಖಾ ದಳದವರಲ್ಲಿಯೂ ಭ್ರಷ್ಟರೇ ತುಂಬಿರುವ ಸಾಧ್ಯತೆಗಳಿವೆ. ಅವರು ಹಿಡಿದರೂ ಲೆಕ್ಕಾಚಾರ ಹತ್ತು ಸಾವಿರ ದಾಟುವುದೇ ಇಲ್ಲ. ಒಬ್ಬ ಅಭ್ಯರ್ಥಿ ಚುನಾವಣೆಗೆ ಇಂತಿಷ್ಟೇ ಹಣ ಖರ್ಚು ಮಾಡಬಹುದೆಂಬ ನಿಯಮ ಇದೆ. ಆದರೆ ಆ ನಿರ್ದಿಷ್ಟ ಸಂಖ್ಯೆಯ ಎಷ್ಟೋ ಪಟ್ಟು ಹೆಚ್ಚು ಹಣ ಖರ್ಚಾಗುವುದು ಕಂಡುಬರುತ್ತದೆ. ಇದರಿಂದಾಗಿಯೇ ಕಾಸಿಗಾಗಿ ಸುದ್ದಿ ಹಗರಣವೂ ಹುಟ್ಟಿಕೊಂಡು ಬೆಳಕಿಗೆ ಬಂದದ್ದು. ಬರೀ ಸೀರೆ, ಪಂಚೆ, ಹೆಂಡದಲ್ಲಿ ಮತ ಪಡೆಯುವ ದಿನಗಳೂ ಮುಗಿದುಹೋಗಿವೆ. ನೂರರ ನೋಟಿನ ಬದಲು ಸಾವಿರ ರೂಪಾಯಿ ನೋಟುಗಳು ಹೊರಬಂದಿವೆ. ಚುನಾವಣೆ ವೆಚ್ಚಕ್ಕೆ ಕಡಿವಾಣ ಹಾಕುವ ಕ್ರಮಗಳೆಲ್ಲ ಕಾಗದದ ಮೇಲಿನ ಹುಲಿಯಂತೆ ವ್ಯರ್ಥ ಕಸರತ್ತಾಗಿದೆ. ಹೆಚ್ಚು ಹಣ ಕೊಟ್ಟವನು ಗೆಲ್ಲುತ್ತಾನೆ ಎಂಬುದು ಅಭ್ಯರ್ಥಿಗೂ ಗೊತ್ತಿರುತ್ತದೆ. ಮತದಾರನೂ ಈ ವಿಷಯದಲ್ಲಿ ಜಾಣನಾಗಿರುವುದರಿಂದ ಚುನಾವಣಾ ಜಾತ್ರೆಯಲ್ಲಿ ಸಿಕ್ಕಷ್ಟು ಸೆಳೆಯುವ ಯೋಚನೆ ಮಾಡುತ್ತಾನೆ. ಚುನಾವಣೆಗಳಲ್ಲಿ ಜಾತಿಯ ಜೊತೆ ಹಣದ ಪ್ರಭಾವ ಕೀಳಲಾರದಷ್ಟು ಬೇರುಬಿಟ್ಟಿರುವುದರ ಪರಿಣಾಮ ಇದು. ಇದನ್ನು ಸರಿಪಡಿಸಬೇಕಾದರೆ ಮತದಾರ ಮೊದಲು ಎಚ್ಚರಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.