ಜಾಣತನದ ನಿರ್ಧಾರ ಸ್ವಾರ್ಥ ಇಲ್ಲದೆ ರಾಜಕಾರಣ ಇಲ್ಲ. ಉತ್ತರಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಭಜನೆ ಮಾಡುವ ನಿರ್ಧಾರ ಹಿಂದೆ ಮುಖ್ಯಮಂತ್ರಿ ಮಾಯಾವತಿ ಅವರಿಗೆ ಖಂಡಿತ ರಾಜಕೀಯ ಸ್ವಾರ್ಥ ಇದೆ. ಮುಂದಿನ ಆರು ತಿಂಗಳೊಳಗೆ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿರುವ ಮಾಯಾವತಿ ಅವರಿಗೆ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಲು ಇಂತಹದ್ದೊಂದು ಅಚ್ಚರಿಯ ರಾಜಕೀಯ ನಿರ್ಧಾರದ ಅಗತ್ಯ ಇತ್ತು. ಈ ನಿರ್ಧಾರದ ಹಿಂದಿನ ರಾಜಕೀಯ ಸ್ವಾರ್ಥ ಏನೇ ಇರಲಿ, `ಬಿಮಾರು~ ಪಟ್ಟವನ್ನು ಪಡೆದಿರುವ ರಾಜ್ಯ ಉತ್ತರಪ್ರದೇಶದ ಸುಧಾರಣೆಗೆ ವಿಭಜನೆ ಅತೀ ಅಗತ್ಯವಾಗಿತ್ತು. 2.4 ಲಕ್ಷ ಚದರ ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿರುವ ರಾಜ್ಯವನ್ನು ಯಾವುದೋ ಒಂದು ಭಾಗದಲ್ಲಿ ಕುಳಿತು ಆಳುವುದು ಅಸಾಧ್ಯವಾಗಿತ್ತು. ಈ ಕಾರಣದಿಂದಾಗಿಯೇ ರಾಜ್ಯದ ಪೂರ್ವಾಂಚಲ ಮತ್ತು ಬುಂದೇಲ್‌ಖಂಡ ಪ್ರದೇಶದಲ್ಲಿ ಹೆಸರಿಗಷ್ಟೇ ಸರ್ಕಾರ ಇತ್ತು, ಅಲ್ಲಿದ್ದದ್ದು ಬಾಹುಬಲದ ಭೂಗತ ದೊರೆಗಳು ಮತ್ತು ಡಕಾಯಿತರು ನಡೆಸುತ್ತಿರುವ `ಸಮಾನಾಂತರ~ ಸರ್ಕಾರ. ಅಭಿವೃದ್ಧಿ ಮತ್ತು ಕಾನೂನು ಪಾಲನೆ ಎರಡರಲ್ಲಿಯೂ ರಾಜ್ಯ ಹಿಂದುಳಿಯಲು ಭೌಗೋಳಿಕವಾದ ವಿಸ್ತಾರವೂ ಒಂದು ಕಾರಣ. ಆದರೆ ಮಾಯಾವತಿ ಅವರ ನಿರ್ಧಾರದ ಹಿಂದೆ ಇಂತಹ ಜನಹಿತದ ಉದ್ದೇಶವಷ್ಟೇ ಇದೆ ಎಂದು ಹೇಳಲಾಗದು. ದಲಿತ ಸಮುದಾಯದ ಅಖಂಡ ಬೆಂಬಲ ಮಾಯಾವತಿ ಅವರ ರಾಜಕೀಯ ಶಕ್ತಿ. ಆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 25ರಷ್ಟಿರುವ ದಲಿತರು ಇಡೀ ರಾಜ್ಯದಲ್ಲಿ ಹರಡಿಕೊಂಡಿದ್ದಾರೆ. ಪ್ರಸ್ತಾಪಿತ ನಾಲ್ಕು ಹೊಸ ರಾಜ್ಯಗಳಾದ ಅವಧ್ ಪ್ರದೇಶ, ಪಶ್ಚಿಮ ಪ್ರದೇಶ, ಬುಂದೇಲಖಂಡ ಮತ್ತು ಪೂರ್ವಾಂಚಲಗಳಲ್ಲಿ ದಲಿತರ ಜನಸಂಖ್ಯೆ ಶೇಕಡಾ 18ರಿಂದ 25ರಷ್ಟಿದೆ. ಆದ್ದರಿಂದ ಮಾಯಾವತಿಯವರ ಈ ಮತಬ್ಯಾಂಕ್ ಅಬಾಧಿತ. ಆದರೆ ಇದನ್ನೇ ವಿರೋಧಪಕ್ಷಗಳ ಬಗ್ಗೆ ಹೇಳುವಂತಿಲ್ಲ. ರಾಜ್ಯ ವಿಭಜನೆಯಿಂದ ಎಲ್ಲ ವಿರೋಧ ಪಕ್ಷಗಳ ಮತಬ್ಯಾಂಕ್ ಛಿದ್ರಗೊಂಡಿದೆ. ಸೈದ್ಧಾಂತಿಕವಾಗಿ ಸಣ್ಣ ರಾಜ್ಯಗಳ ಪರವಾಗಿರುವ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಈ ವಿಷಯವನ್ನೆತ್ತಿಕೊಂಡು ಮಾಯಾವತಿಯವರನ್ನು ದೂರುವ ಹಾಗಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಲ್ಲಿರುವ ಸಮಾಜವಾದಿ ಪಕ್ಷದ ಭವಿಷ್ಯ ಕೂಡಾ ರಾಜ್ಯ ವಿಭಜನೆಯಿಂದ ಮಂಕಾಗಿದೆ. ಇಷ್ಟು ಮಾತ್ರವಲ್ಲ, ಮಾಯಾವತಿ ಅವರ ನಿರ್ಧಾರ ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್‌ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಜ್ಯ ವಿಭಜನೆಗೆ ಅಂತಿಮವಾಗಿ ಅಂಗೀಕಾರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಸಂಸತ್ ಬಹುಮತದಿಂದ ರಾಜ್ಯದ ನಿರ್ಣಯವನ್ನು ಅನುಮೋದಿಸಬೇಕಾಗಿದೆ. ಒಂದೊಮ್ಮೆ ಉತ್ತರಪ್ರದೇಶ ವಿಭಜನೆಗೆ ಯುಪಿಎ ಸರ್ಕಾರ ಒಪ್ಪಿಕೊಂಡರೆ ಪ್ರತ್ಯೇಕ ತೆಲಂಗಾಣ ಮತ್ತು ಗೂರ್ಖಾಲ್ಯಾಂಡ್ ರಚನೆಗಾಗಿ ಒತ್ತಾಯಿಸುತ್ತಿರುವ ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳ ಜನತೆಯ ಬೇಡಿಕೆಯನ್ನೂ ಒಪ್ಪಬೇಕಾಗಬಹುದು. ಮಾಯಾವತಿ ಅವರ ನಿರ್ಧಾರ ಮೇಲ್ನೋಟಕ್ಕೆ ಅವರ ಅಧಿಕಾರದ ವ್ಯಾಪ್ತಿಯನ್ನೇ ಮೊಟಕುಗೊಳಿಸುವಂತೆ ಕಂಡರೂ ಆಳದ ಲೆಕ್ಕಾಚಾರದಲ್ಲಿ ವಿರೋಧಪಕ್ಷಗಳ ಬಲ ಕುಂದಿಸುವ ಎಲ್ಲ ಸಾಧ್ಯತೆಗಳೂ ಇವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.