ಕ್ಷುಲ್ಲಕ ರಾಜಕಾರಣ ತನ್ನ ಎಲೆಯ ಮೇಲೆ ಆನೆ ಸತ್ತು ಬಿದ್ದಿರುವಾಗ, ಬೇರೆಯವರ ತಟ್ಟೆಯ ಮೇಲೆ ನೊಣ ಸತ್ತು ಬಿದ್ದಿರುವುದರ ಬಗ್ಗೆ ಆಡಿಕೊಂಡರಂತೆ. ಪಾಕಿಸ್ತಾನದ ವರ್ತನೆ ಈ ಗಾದೆಗೆ ತಕ್ಕಂತೆಯೇ ಇದೆ. ಹಿಂದಿ ಚಿತ್ರರಂಗದ ಜನಪ್ರಿಯ ನಟ ಶಾರುಕ್ ಖಾನ್ ಅವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಭಾರತಕ್ಕೆ ಸೂಚಿಸಿರುವುದು ಹಾಸ್ಯಾಸ್ಪದವಾಗಿದೆ. ಸದಾ ಕಾಲುಕೆದರಿಕೊಂಡು ಕ್ಯಾತೆ ತೆಗೆಯುವ ಪ್ರವೃತ್ತಿ ಹೊಂದಿರುವ ಪಾಕಿಸ್ತಾನ, ಈ ವಿಷಯದಲ್ಲಿ ಮೂಗು ತೂರಿಸಿರುವುದರ ಬಗ್ಗೆ ಕ್ಷಿಪ್ರವಾಗಿ ಹಾಗೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ ಇಂತಹ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದೆಂದು ಪಾಕಿಸ್ತಾನವನ್ನು ಎಚ್ಚರಿಸಿರುವುದು ಸಕಾಲಿಕವಾಗಿದೆ. `ಔಟ್‌ಲುಕ್ ಟರ್ನಿಂಗ್ ಪಾಯಿಂಟ್' ನಿಯತಕಾಲಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಶಾರುಕ್ ಖಾನ್, ಭಾರತದಲ್ಲಿರುವ ಮುಸ್ಲಿಮರು ದೇಶಭಕ್ತಿ ಹೊಂದಿಲ್ಲ ಎಂದು ಪದೇಪದೇ ಆರೋಪಿಸುವ ಪ್ರವೃತ್ತಿ ಹೊಂದಿರುವ ಕೆಲವು ರಾಜಕಾರಣಿಗಳು, ಅದಕ್ಕೆ ತನ್ನ ಹೆಸರನ್ನು ದಾಳವಾಗಿ ಬಳಸಿಕೊಳ್ಳುತಿದ್ದು ತನ್ನನ್ನು ಮುಸ್ಲಿಮರ ಪ್ರತೀಕ ಎಂದೂ ಬಿಂಬಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. `ಆದರೆ ನಾನು ಅಪ್ಪಟ ಭಾರತೀಯ, ಆದರೂ ನಾನು ಪಕ್ಕದ ರಾಷ್ಟ್ರದೊಂದಿಗೆ ಹೆಚ್ಚು ಬಾಂಧವ್ಯ ಹೊಂದಿದ್ದೇನೆ ಎಂದು ಆರೋಪ ಹೊರಿಸಲಾಗುತ್ತಿದೆ' ಎಂದು ನೋವು ತೋಡಿಕೊಂಡಿದ್ದಾರೆ. ಖಾನ್ ಎನ್ನುವ ಹೆಸರಿನ ಕಾರಣದಿಂದ ಹಲವಾರು ಬಾರಿ ತೊಂದರೆ ಎದುರಿಸಿರುವ ಶಾರುಕ್ ಆಗಾಗ ವಿವಾದದ ಕೇಂದ್ರಬಿಂದುವಾಗುತ್ತಲೇ ಇದ್ದಾರೆ.ಅಮೆರಿಕದ ವಿಮಾನನಿಲ್ದಾಣದಲ್ಲೂ ಅವರನ್ನು ಎರಡು ಬಾರಿ ತಡೆದು ವಿಚಾರಣೆಗೆ ಒಳಪಡಿಸಿದ್ದ ಘಟನೆಯೂ ನಡೆದಿತ್ತು. ಶಾರುಕ್ ಅವರನ್ನು ಭಾರತೀಯರು ಒಬ್ಬ ಕಲಾವಿದನನ್ನಾಗಿ ನೋಡಿದ್ದಾರೆಯೇ ವಿನಾ ಜಾತಿ, ಧರ್ಮದ ಹಿನ್ನೆಲೆಯಲ್ಲಿ ನೋಡಿದ ಉದಾಹರಣೆ ಇಲ್ಲ. ಹಾಗೆ ನೋಡಿದರೆ ಶಾರುಕ್ ಯಶಸ್ಸು ಜಾತ್ಯತೀತ ಮೌಲ್ಯಗಳ ಅಸ್ತಿತ್ವಕ್ಕೆ ಉದಾಹರಣೆ. ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಹಿಂದೂ ಮುಸ್ಲಿಂ ಏಕತೆಯ ಮೂಲಕ ಮೆರೆದ ಸಾಂಸ್ಕೃತಿಕ ವೈಭವಕ್ಕೆ ಇತಿಹಾಸದ ಪುಟಗಳೇ ಸಾಕ್ಷಿಯಾಗಿದೆ. ಇಂತಹ ಸಹಬಾಳ್ವೆ ಇರುವ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಜನಪ್ರಿಯನಟನ ಹೆಸರನ್ನು ಬಳಸಿಕೊಂಡು ವಿಷಬೀಜ ಬಿತ್ತುವ ಕೆಲಸವನ್ನು ಪಾಕಿಸ್ತಾನ ಮಾಡಹೊರಟಿರುವುದು ಖಂಡನೀಯ. ಇದೊಂದು ರೀತಿಯಲ್ಲಿ ಸಾಂಸ್ಕೃತಿಕ ಭಯೋತ್ಪಾದನೆ. ಭಾರತೀಯ ಸಂವಿಧಾನದಲ್ಲಿಯೇ ಅಲ್ಪಸಂಖ್ಯಾತರಿಗೆ ಸಮಾನಹಕ್ಕು, ಮತ್ತು ಸಮಾನಸ್ಥಾನಮಾನ ನೀಡಲಾಗಿದೆ. ಜಾತ್ಯತೀತ ತತ್ವದ ಬುನಾದಿಯ ಮೇಲೆ ನಡೆಯುತ್ತಿರುವ ದೇಶಕ್ಕೆ, ಭಯೋತ್ಪಾದಕರನ್ನು ಉತ್ಪಾದಿಸುವ ದೇಶ ಎಂದೇ ಕುಖ್ಯಾತವಾಗಿರುವ ಪಾಕಿಸ್ತಾನ, ಅಭದ್ರತಾ ಭಾವದ ಬಗ್ಗೆ ಹೇಳುತ್ತಿರುವುದೇ ಕುಚೋದ್ಯ. ಭಾರತದ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಅವಲೋಕಿಸುವ ಬದಲು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿ -ಗತಿ ಏನಾಗಿದೆ ಎನ್ನುವುದನ್ನು ಕಣ್ಣುಬಿಟ್ಟು ನೋಡಲಿ. ಅಲ್ಲಿನ ಭಾರತೀಯರ ಪರಿಸ್ಥಿತಿ ಕಳವಳಕಾರಿಯಾಗಿದೆ. ಅವರನ್ನು ಎಲ್ಲ ರೀತಿಯಲ್ಲೂ ಶೋಷಣೆಗೆ ಒಳಪಡಿಸಲಾಗಿರುವ ವರದಿಗಳು ಪ್ರಕಟವಾಗಿವೆ. ಶಿಯಾಗಳನ್ನು ಹಿಂಸಿಸಲಾಗುತ್ತಿದೆ. ಅಹಮದಿಯಾಗಳಿಗೆ ರಕ್ಷಣೆ ಇಲ್ಲ. ಸೋರುತ್ತಿರುವ ತನ್ನ ಮನೆಯನ್ನೇ ಪಾಕಿಸ್ತಾನ ಮೊದಲು ಸರಿಪಡಿಸಿಕೊಂಡರೆ ಸಾಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.