ಬೇಡಿಕೆಗಳಿಗೆ ಕಿವಿಗೊಡಿ ಕನಿಷ್ಠ ವೇತನ ನಿಗದಿಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಕ್ಕೂಟದ (ಎಐಟಿಯುಸಿ) ಸದಸ್ಯರು ಬೆಂಗಳೂರಿನಲ್ಲಿ ಬೃಹತ್ ಜಾಥಾ ನಡೆಸಿ ಧರಣಿ ನಡೆಸಿದ್ದಾರೆ. ತಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಡಲು ಹಲವು ಬಗೆಯ ಪ್ರತಿಭಟನಾ ಕಾರ್ಯಕ್ರಮಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ನಡೆಸಿಕೊಂಡೇ ಬಂದಿದ್ದಾರೆ. ಅಂಗನವಾಡಿ ಕಾರ್ಯಕ್ರಮ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ (ಐಸಿಡಿಎಸ್)ಅಡಿ 1975ರಲ್ಲಿ ಕೇಂದ್ರ ಹಾಗೂ ರಾಜ್ಯಗಳ ಜಂಟಿ ಸಹಭಾಗಿತ್ವದಲ್ಲಿ ಆರಂಭವಾಯಿತು. ಅಂದಿನಿಂದಲೂ ಅಲ್ಪಮೊತ್ತದ ಗೌರವಧನವನ್ನಷ್ಟೇ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ. ಅವರನ್ನು ಸರ್ಕಾರಿ ನೌಕರರನ್ನಾಗಿ ಎಂದೂ ಪರಿಗಣಿಸಿಲ್ಲ. ಹೀಗಾಗಿ ಉದ್ಯೋಗ ಕಾಯಂ ಸಮಸ್ಯೆ ಇಂದಿಗೂ ಆಡಳಿತಗಾರರು ಹಾಗೂ ಕಾರ್ಯಕರ್ತೆಯರನ್ನು ಕಾಡುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು `ಸಿ' ದರ್ಜೆ ನೌಕರರು ಹಾಗೂ ಸಹಾಯಕಿಯರನ್ನು `ಡಿ' ದರ್ಜೆ ನೌಕರರೆಂದು ಪರಿಗಣಿಸಿ ಅವರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಈಗ ಮತ್ತೊಮ್ಮೆ ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಿರಂತರ ಹೋರಾಟಗಳ ಫಲವಾಗಿ ಈಗ ಅವರು ಪಡೆದುಕೊಳ್ಳುತ್ತಿರುವ ಮಾಸಿಕ ವೇತನ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ. 4500 ಹಾಗೂ ಸಹಾಯಕರಿಗೆ ರೂ. 2250. ಆದರೆ ಬೆಲೆ ಏರಿಕೆಯ ಈ ದಿನಗಳಲ್ಲಿ ಕನಿಷ್ಠ ವೇತನವನ್ನು ರೂ. 10,000ಕ್ಕೆ ಏರಿಸಬೇಕೆಂಬುದು ಅವರ ಬೇಡಿಕೆ. ಪೌಷ್ಟಿಕ ಆಹಾರ ತಯಾರಿಕೆಗೆ ಗ್ಯಾಸ್, ಸ್ಟೌ ಸೌಲಭ್ಯ ಅಥವಾ ಉರುವಲು ವೆಚ್ಚ ನೀಡಬೇಕೆಂಬುದೂ ಅವರ ಬೇಡಿಕೆಯಲ್ಲಿ ಸೇರಿದೆ. ಈಗ ಸ್ವಂತ ಹಣ ಹಾಕಿ ಉರುವಲು ವೆಚ್ಚವನ್ನು ಕಾರ್ಯಕರ್ತೆಯರೇ ಭರಿಸಿದರೂ ಮರು ಹಣಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂಬುದು ಅವರ ದೂರು. ನಮ್ಮ ರಾಷ್ಟ್ರದಲ್ಲಿ ಮಕ್ಕಳ ಅಪೌಷ್ಟಿಕತೆ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ ಎಂಬುದನ್ನು ನೆನಪಿಡಬೇಕು. ಈ ನಿಟ್ಟಿನಲ್ಲಿ ಅಂಗನವಾಡಿಗಳು ಮಹತ್ವದ ಪಾತ್ರ ವಹಿಸಬೇಕಿವೆ. ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿ, ಬಾಣಂತಿ ಆರೋಗ್ಯ, ಮಹಿಳೆಯರ ಪೌಷ್ಟಿಕತೆ, ಶಿಶುವಿಹಾರಗಳ ನಿರ್ವಹಣೆ ಮುಂತಾದ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾ ಬಂದಿದ್ದಾರೆ. ತಾಯಂದಿರು ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವ ಕಾರ್ಯಕ್ರಮಗಳ ಮೂಲಕ ಮಾತೃ ಮರಣ ಹಾಗೂ ಮಕ್ಕಳ ಮರಣ ಪ್ರಮಾಣಗಳನ್ನು ತಗ್ಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೊಡುಗೆ ಮಹತ್ತರವಾದದ್ದು. ಇಷ್ಟಲ್ಲದೆ ತಳಮಟ್ಟದಲ್ಲಿ ಅನೇಕ ಗಣತಿ ಹಾಗೂ ಅಂಕಿಅಂಶ ಸಂಗ್ರಹ ಕಾರ್ಯಗಳ್ಲ್ಲಲೂ ಈ ಕಾರ್ಯಕರ್ತೆಯರ ಸೇವೆಯನ್ನು ನಿರ್ಲಕ್ಷಿಸಲಾಗದು. ಆದರೆ ಈ ಕಾರ್ಯಗಳಿಗೆ ಸೂಕ್ತ ಮಾನ್ಯತೆ ದಕ್ಕದಿರುವುದು ವಿಷಾದನೀಯ. ಬಹುತೇಕ ಸ್ವಯಂಸೇವೆಯ ರೀತಿ ಕೆಲಸಮಾಡಬೇಕೆಂಬ ನಿರೀಕ್ಷೆಯೇ ವಿಪರ್ಯಾಸ. ರಾಜ್ಯದಲ್ಲಿ 1.25 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಸ್ತವವಾಗಿ ಸರ್ಕಾರಿ ನೌಕರರ ರೀತಿಯೇ ಕಾರ್ಯ ನಿರ್ವಹಿಸುವ ಈ ಮಹಿಳೆಯರ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಪರಿಶೀಲಿಸುವುದು ಅಗತ್ಯ. ಅಂಗನವಾಡಿ ವ್ಯವಸ್ಥೆಗೆ ಕಾಯಕಲ್ಪ ನೀಡಲು ಸರ್ಕಾರ ಮುಂದಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.