ಮನೆಬಾಗಿಲು ಭದ್ರವಾಗಿರಲಿ `ಭೂಸ್ವರ್ಗ'ಎಂದು ಬಣ್ಣಿಸಲಾಗುವ ಕಾಶ್ಮೀರ ಕೊನೆಗೂ ಶಾಂತಿಯ ಹಾದಿಗೆ ಮರಳುತ್ತಿದೆ ಎಂಬ ಅಭಿಪ್ರಾಯ ಮೂಡುತ್ತಿದ್ದ ಕಾಲದಲ್ಲಿಯೇ ಅಲ್ಲಿ ಭಯೋತ್ಪಾದನೆ ಮತ್ತೆ ಹೆಡೆ ಎತ್ತಿ ಫೂತ್ಕರಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಶಿಬಿರಕ್ಕೆ ನುಗ್ಗಿ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ದಾಳಿಗೆ ಮಂಡ್ಯದ ಯೋಧ ಸತೀಶ್ ಸೇರಿದಂತೆ ಐವರು ಯೋಧರು ಬಲಿಯಾಗಿದ್ದಾರೆ. ಬಂದ್ ಕರೆಯ ಹಿನ್ನೆಲೆಯಲ್ಲಿ ಪಕ್ಕದಲ್ಲಿಯೇ ಇರುವ ಶಾಲೆಗೆ ರಜೆ ಸಾರಲಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿಹೋಗಿದೆ. ಪಾಕಿಸ್ತಾನದಿಂದ ನುಸುಳಿ ಬರುತ್ತಿರುವ ಉಗ್ರರನ್ನು ಇತ್ತೀಚಿನ ದಿನಗಳಲ್ಲಿ ಭದ್ರತಾಪಡೆ ಯಶಸ್ವಿಯಾಗಿ ಹಿಮ್ಮೆಟ್ಟಿಸುತ್ತಾ ಬಂದಿದೆ. ಅಲ್ಲಲ್ಲಿ ಗ್ರಾಮಪಂಚಾಯತ್ ಸರಪಂಚರ ಹತ್ಯೆಯ ಘಟನೆಗಳು ನಡೆಯುತ್ತಿದ್ದರೂ ಕಳೆದ ಮೂರು ವರ್ಷಗಳ ಅವಧಿಯಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ನಡೆದಿರಲಿಲ್ಲ. ಈ ಕಾರಣದಿಂದಾಗಿ ಕಾಶ್ಮೆರ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ನಿರೀಕ್ಷೆ ಹುಟ್ಟಿಕೊಂಡಿತ್ತು. ಸಂಸತ್‌ಮೇಲೆ ನಡೆದಿದ್ದ ದಾಳಿಯ ಸಂಚುಕೋರ ಅಫ್ಜಲ್‌ಗುರುವನ್ನು ಗ್ಲ್ಲಲಿಗೇರಿಸಿದ ನಂತರ ಕಾಶ್ಮೀರ ಕಣಿವೆಯ ಶಾಂತಿ ಕದಡಬಹುದೆಂಬ ಭೀತಿ ಸಾರ್ವಜನಿಕರಲ್ಲಿ ಮಾತ್ರವಲ್ಲ ಸರ್ಕಾರಕ್ಕೂ ಇತ್ತು. ಅಫ್ಜಲ್‌ಗುರುವಿನ ಮೃತದೇಹವನ್ನು ಒಪ್ಪಿಸಬೇಕೆಂದು ಆಗ್ರಹಪಡಿಸುವ ಪ್ರತಿಭಟನೆಗಳು ಕಾಶ್ಮೀರದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಭಯೋತ್ಪಾದಕರ ಒಂದು ತಂಡ ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಬಂದಿರುವ ಹಿನ್ನೆಲೆಯಲ್ಲಿ ದೊಡ್ಡಮಟ್ಟದ ಉಗ್ರರ ದಾಳಿ ನಡೆಯಬಹುದೆಂಬ ಸುಳಿವನ್ನೂ ಗುಪ್ತಚರ ಇಲಾಖೆಯೂ ನೀಡಿತ್ತು. ಹೀಗಿದ್ದೂ ನಡೆಯಬಾರದ ಘಟನೆ ನಡೆದುಹೋಗಿದೆ. ಪಾಕಿಸ್ತಾನದ ಆಂತರಿಕ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಅಲ್ಲಿನ ಸರ್ಕಾರ ಅತ್ಯಂತ ದುರ್ಬಲವಾಗಿರುವ ಕಾಲದಲ್ಲಿಯೇ ಆ ದೇಶ ಭಾರತದ ಪಾಲಿಗೆ ಅಪಾಯಕಾರಿ ಎನ್ನುವುದನ್ನು ಮರೆಯಬಾರದು. ಆಡಳಿತ ಸಂಪೂರ್ಣ ಕುಸಿದು ಬಿದ್ದಿರುವ ಕಾರಣದಿಂದಾಗಿ ಅಲ್ಲಿ ಮತಾಂಧ ಧರ್ಮಗುರುಗಳು ಮತ್ತು ರಕ್ತದಾಹಿ ಉಗ್ರಗಾಮಿ ಸಂಘಟನೆಗಳ ಕೈ ಮೇಲಾಗುತ್ತಿದೆ. ತನ್ನ ವೈಫಲ್ಯದಿಂದ ಜನರ ಗಮನವನ್ನು ಬೇರೆ ಕಡೆ ಸೆಳೆಯಲು ಅಲ್ಲಿನ ಸರ್ಕಾರವೇ ಇಂತಹ ದುಷ್ಕೃತ್ಯಗಳಿಗೆ ಬೆಂಬಲ ನೀಡಿದರೆ ಆಶ್ಚರ್ಯವೇನಿಲ್ಲ. ಇಂತಹ ಸ್ಥಿತಿಯಲ್ಲಿ ಎಚ್ಚರದಿಂದ ಇರಬೇಕಾಗಿರುವುದು ಭಾರತ. ಜಮ್ಮು ಮತ್ತು ಕಾಶ್ಮೆರದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆ (ವಿಶೇಷ ಅಧಿಕಾರ)ಕಾಯ್ದೆಯ ವಿರುದ್ಧ ಸಾರ್ವಜನಿಕರು ಮಾತ್ರವಲ್ಲ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರೇ ದನಿ ಎತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆ ಇಲ್ಲವೇ ಸಡಿಲಗೊಳಿಸಬೇಕೆ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರಪಂಚರ ಸರಣಿ ಹತ್ಯೆಯನ್ನು ತಡೆಯಲು ಕೂಡಾ ಸರ್ಕಾರ ವಿಫಲವಾಗಿದೆ. ಕಾಶ್ಮೆರದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಸರ್ಕಾರವೇ ನೇಮಿಸಿರುವ ಸಂಧಾನಕಾರರ ವರದಿ ದೂಳು ತಿನ್ನುತ್ತಾ ಬಿದ್ದಿದೆ. ಮನೆಯೊಳಗಿನ ಜಗಳವನ್ನು ಬಗೆಹರಿಸಿಕೊಂಡು ಬಾಗಿಲು ಭದ್ರಮಾಡಿಕೊಳ್ಳದಿದ್ದರೆ ಹೊರಗಿನವರ ದಾಳಿಯನ್ನು ತಡೆಯಲು ಸಾಧ್ಯ ಇಲ್ಲ ಎನ್ನುವುದನ್ನು ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ತಿಳಿದುಕೊಳ್ಳಬೇಕು. ರಾಜ್ಯದ ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸುವ ಕಾರ್ಯ ಮೊದಲು ಕಾಶ್ಮೆರ ಕಣಿವೆಯಲ್ಲಿ ನಡೆಯಬೇಕು. ಉಗ್ರರಿಗೆ ಇದೇ ಸರಿಯಾದ ಉತ್ತರ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.