ಮರಳು ದಂಧೆಗೆ ಕಡಿವಾಣ ಹಾಕಿ ಮರಳು ಸಾಗಾಣಿಕೆ ಮಾಡುವ ಲಾರಿ ಮಾಲೀಕರು ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಮುಷ್ಕರ ನಡೆಸುತ್ತಿರುವ ಚಾಳಿ ದುರದೃಷ್ಟಕರ. ಇವರ ಮುಷ್ಕರದಿಂದಾಗಿ ಮರಳಿನ ಕೃತಕ ಕೊರತೆ ಉಂಟಾಗಿ ಅದರ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಒಮ್ಮೆ ಹೆಚ್ಚಿದ ಬೆಲೆ ಮತ್ತೆ ಕೆಳಗೆ ಇಳಿಯುವುದಿಲ್ಲ. ಇದರ ಪರಿಣಾಮದಿಂದ ಸ್ವಂತ ಮನೆ ಕಟ್ಟಿಕೊಳ್ಳಬೇಕೆನ್ನುವ ಜನಸಾಮಾನ್ಯರ ಕನಸು ನುಚ್ಚುನೂರಾಗುತ್ತಿದೆ. ಬೃಹತ್ ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳ ನಿರ್ಮಾಣದ ವೆಚ್ಚವೂ ಹೆಚ್ಚುವುದರಿಂದ ಅಂತಿಮವಾಗಿ ಆ ಹೊರೆ ಜನರ ಮೇಲೆಯೇ ಬೀಳುತ್ತಿದೆ. ಮರಳು ಲಾರಿ ಮಾಲೀಕರ ಈ ಸ್ವೇಚ್ಛಾಚಾರಕ್ಕೆ ಸರ್ಕಾರ ಮರಳು ನೀತಿಯನ್ನು ರೂಪಿಸುವ ಮೂಲಕ ಕಡಿವಾಣ ಹಾಕಬೇಕು. ಇದರರ್ಥ ಮರಳು ಲಾರಿ ಮಾಲೀಕರ ನಿಜವಾದ ಬೇಡಿಕೆಗಳನ್ನು ಕಡೆಗಣಿಸಬೇಕೆಂದೇನೂ ಅಲ್ಲ. ನ್ಯಾಯಯುತವಾದ ಬೇಡಿಕೆಗಳಿದ್ದರೆ ಸಹಜವಾಗಿಯೇ ಸರ್ಕಾರ ಸಹಾನೂಭೂತಿಯಿಂದ ಪರಿಶೀಲಿಸಿ ಪರಿಹಾರ ಕಂಡುಹಿಡಿಯಬೇಕು. ಅನವಶ್ಯಕವಾಗಿ ಮರಳು ಲಾರಿ ಮಾಲೀಕರು ಮುಷ್ಕರ ಹೋಗಲು ಸರ್ಕಾರ ಎಡೆಕೊಡಬಾರದು. ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಲ್ಲಿ ಪೊಲೀಸ್, ಗಣಿ ಮತ್ತು ಸಾರಿಗೆ ಇಲಾಖೆಗಳ ಸಿಬ್ಬಂದಿಯಿಂದ ಆಗುತ್ತಿರುವ ಕಿರುಕುಳ, ಲಂಚದ ಹಾವಳಿ ಇರುವುದು ಸುಳ್ಳಲ್ಲ. ಇದನ್ನು ತಪ್ಪಿಸಲು ಮರಳು ನೀತಿಯೊಂದನ್ನು ರೂಪಿಸಬೇಕೆಂದು ಲಾರಿ ಮಾಲೀಕರೂ ಕೇಳುತ್ತಿರುವುದರಿಂದ ಸರ್ಕಾರ ಈ ಬಗೆಗೆ ಕಿವುಡಾಗಬಾರದು. ಎರಡು ವರ್ಷದ ಹಿಂದೆ ಮರಳು ಲಾರಿ ಮಾಲೀಕರ ಮುಷ್ಕರದಿಂದ ಉಲ್ಬಣಿಸಿದ್ದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮರಳು ನೀತಿ ರೂಪಿಸಲು ಸರ್ಕಾರ, ಅಧಿಕಾರಿಗಳ ತಂಡವೊಂದನ್ನು ತಮಿಳುನಾಡಿಗೆ ಕಳುಹಿಸಿ ಅಲ್ಲಿನ ಮರಳು ಗಣಿಗಾರಿಕೆ ಮಾಹಿತಿಯನ್ನು ಪಡೆಯಲಾಯಿತು. ಆ ಅಧಿಕಾರಿಗಳ ತಂಡ ನೀಡಿದ ವರದಿಯಲ್ಲಿನ ಶಿಫಾರಸು ಏನಾಯಿತೆನ್ನುವುದು ತಿಳಿಯದಾಗಿದೆ. ಮರಳು ನೀತಿ ರೂಪಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಗಮನಿಸಿದರೆ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆಯನ್ನು ನಿಲ್ಲಿಸುವ ಬಗೆಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದಂತಿಲ್ಲ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು, ಇತ್ತೀಚೆಗೆ ಮರಳು ಗಣಿಗಾರಿಕೆ ನೀತಿ ರೂಪಿಸುವ ಮಾತನಾಡಿದ್ದಾರೆ. ಆದರೆ ಹಿಂದಿನಂತೆ ಇದು ಕೇವಲ ಭರವಸೆ ಆಗಬಾರದು. ತಮಿಳುನಾಡು ಮಾದರಿಯಂತೆ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಆಸಕ್ತಿವಹಿಸಿ ಮರಳು ಗಣಿಗಾರಿಕೆಯನ್ನು ಲೋಕೋಪಯೋಗಿ ಇಲಾಖೆಯೇ ನಿರ್ವಹಿಸುತ್ತಿದೆ. ಇದರಿಂದಾಗಿ ಮರಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಮೂಲಕವೇ ನಡೆಸುವುದರಿಂದ ಜನರಿಗೆ ಅಗ್ಗದ ಬೆಲೆಯಲ್ಲಿ ಮರಳು ಸಿಗುವ ಜೊತೆಗೆ ಸರ್ಕಾರಕ್ಕೂ ಸರಿಯಾಗಿ ಹಣ ಮತ್ತು ತೆರಿಗೆ ಪಾವತಿ ಆಗಲಿದೆ. ಇಂತಹ ಕ್ರಮದಿಂದ ಈಗ ಪರ್ಮಿಟ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದಂತಾಗುತ್ತದೆ. ಪದೇ ಪದೇ ಮುಷ್ಕರ ನಡೆಸುವ ಮರಳು ಲಾರಿ ಮಾಲೀಕರ ಉಪಟಳಕ್ಕೂ ತೆರೆ ಎಳೆದಂತಾಗುತ್ತದೆ. ಆದ್ದರಿಂದ ಸರ್ಕಾರ ತಡಮಾಡದೆ ಮರಳು ನೀತಿಯನ್ನು ರೂಪಿಸಿ ಮರಳು ಗಣಿಗಾರಿಕೆ ಮತ್ತು ಸಾಗಾಟವನ್ನು ಸರಿದಾರಿಗೆ ತರುವ ಇಚ್ಛಾಶಕ್ತಿಯನ್ನು ತೋರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.