ಕಠಿಣ ಕ್ರಮ ಜರುಗಿಸಿ ನೆಲಮಂಗಲದ ಕಡೆಯಿಂದ ಬೆಂಗಳೂರಿಗೆ ಕ್ಯಾಂಟರ್ ಟ್ರಕ್‌ನಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಚಾಲಕನ ಮೇಲೆ ಹಲ್ಲೆ ನಡೆದು ಸಾವು ಸಂಭವಿಸಿದೆ. ಹಲ್ಲೆಯ ನಂತರ ಈತನನ್ನು ಮೇಲು ಸೇತುವೆಯಿಂದ ಕೆಳಗೆ ತಳ್ಳಿದ್ದರಿಂದ ಸಾವು ಸಂಭವಿಸಿರುವುದಾಗಿ ಒಂದು ವಾದ ಇದ್ದರೆ, ಈತನೇ ಮೇಲು ಸೇತುವೆಯಿಂದ ಬಿದ್ದು ಪ್ರಾಣ ಕಳೆದುಕೊಂಡಿರುವುದಾಗಿ ಆರೋಪವಿದೆ. ಈ ಸಾವಿಗೆ ಬೆಂಗಳೂರಿನ ಕೋರಮಂಗಲದ ಪ್ರಾಣಿ ದಯಾಸಂಘದವರು ಕಾರಣ ಎಂದು ಶಂಕಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಟ್ರಕ್ ಚಾಲಕ ಕೃಷ್ಣಪ್ಪನ ಸಾವು ಹೇಗೆ ಸಂಭವಿಸಿತು ಮತ್ತು ಯಾರಿಂದ ಎನ್ನುವ ಬಗೆಗೆ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಈ ಜಾನುವಾರುಗಳನ್ನು ಯಾವ ಕಾರಣಕ್ಕೆ ನಗರಕ್ಕೆ ಸಾಗಿಸಲಾಗುತ್ತಿತ್ತು ಎನ್ನುವ ವಿವರ ಇನ್ನೂ ಬಹಿರಂಗಗೊಂಡಿಲ್ಲ. ಸಣ್ಣಪುಟ್ಟ ಟ್ರಕ್‌ಗಳಲ್ಲಿ ಸಾಗಿಸುವ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯಲಾಗುತ್ತಿದೆ ಎನ್ನುವ ಶಂಕೆಯಿಂದ ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ದಾಳಿ ನಡೆಯುತ್ತಿರುವುದು ಹೊಸದೇನೂ ಅಲ್ಲ. ನೆಲಮಂಗಲದ ಈ ಭಾಗದಲ್ಲಿ ಪದೇ ಪದೇ ಇಂತಹ ದಾಳಿ ಮತ್ತು ಹಲ್ಲೆ ನಡೆಯುತ್ತಿರುವುದು ಪೊಲೀಸರಿಗೆ ತಿಳಿಯದ ಸಂಗತಿಯಲ್ಲ. ಜಾನುವಾರುಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು ಉತ್ತಮ ಕಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರಾಣಿ ದಯಾ ಸಂಘದ ಹೆಸರಿನಲ್ಲಿ ಕೆಲವರು ತಾವೇ ಕಾನೂನನ್ನು ಕೈಗೆತ್ತಿಕೊಳ್ಳುವುದು ಕಾನೂನು ಬಾಹಿರ ನಡವಳಿಕೆ. ಜಾನುವಾರುಗಳ ಸಾಗಾಣಿಕೆ ಕಾನೂನುಬಾಹಿರವಾಗಿದ್ದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಅಧಿಕಾರ ಪೊಲೀಸರಿಗೆ ಇದೆ. ಪೊಲೀಸರಿಗೆ ಇರುವ ಈ ಅಧಿಕಾರವನ್ನು ಪ್ರಾಣಿ ದಯಾಸಂಘದ ಹೆಸರಿನಲ್ಲಿ ಬೇರೆಯವರು ದುರುಪಯೋಗಪಡಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಕಸಾಯಿಖಾನೆಗೇ ಆಗಲಿ ಅಥವಾ ಸಾಕಾಣಿಕೆಗೇ ಆಗಲಿ ಜಾನುವಾರುಗಳನ್ನು ಬೇರೆ ಊರುಗಳಿಂದ ಸಾಗಿಸುವುದು ಕಾನೂನು ಬದ್ಧವೇ ಆಗಿದ್ದರೆ ಅದನ್ನು ತಡೆಯುವುದು ಮತ್ತು ಸಂಬಂಧಿಸಿದವರ ವಿರುದ್ಧ ಹಲ್ಲೆ ನಡೆಸುವುದು ಅಕ್ರಮ. ಇಂತಹ ಹಲ್ಲೆಯಿಂದ ಈಗ ಚಾಲಕನೊಬ್ಬನನ್ನು ಬಲಿ ತೆಗೆದುಕೊಳ್ಳಲಾಗಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕೊಲೆ ಮೊಕದ್ದಮೆ ಹೂಡಬೇಕು. ಇತ್ತೀಚಿನ ವರ್ಷಗಳಲ್ಲಿ ರೈತರು ಹಾಲಿಗಾಗಿ ಮಿಶ್ರತಳಿಯ ಹಸುಗಳನ್ನು ಸಾಕುತ್ತಾರೆ. ಈ ಹಸುಗಳು ಗಂಡು ಕರುಗಳನ್ನು ಹಾಕಿದರೆ ಅವುಗಳು ರೈತರಿಗೆ ಯಾವುದೇ ರೀತಿಯಿಂದಲೂ ಉಪಯೋಗವಿಲ್ಲ. ಹಸು ಹಾಲು ಕೊಡುವವರೆಗೆ ಅಂತಹ ಕರುಗಳನ್ನು ಇಟ್ಟುಕೊಂಡು ನಂತರ ರೈತರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಕೆಲವರು ಅವುಗಳನ್ನು ಸಾಕಲಾಗದೆ ಕಟುಕರಿಗೆ ಮಾರಾಟ ಮಾಡುತ್ತಾರೆ. ಬೇಸಾಯಕ್ಕೆ ಬಳಸಿದ ನಂತರ ಬಡಕಲಾದ ದೇಶೀಯ ಜಾನುವಾರುಗಳದ್ದೂ ಇದೇ ಪರಿಸ್ಥಿತಿ. ವಾಸ್ತವವಾಗಿ ಇದು ರೈತರ ಸಮಸ್ಯೆ. ಜಾನುವಾರುಗಳ ರಕ್ಷಣೆ ಬಗೆಗೆ ಕಾಳಜಿ ಹೊಂದಿರುವ ಪ್ರಾಣಿ ದಯಾ ಸಂಘಗಳು ರೈತರಿಂದ ಇವುಗಳನ್ನು ಖರೀದಿಸಿ ಸಂರಕ್ಷಿಸುವತ್ತ ಕಾರ್ಯಪ್ರವೃತ್ತವಾಗಬೇಕು. ಹೀಗೆ ಮಾಡಿದ್ದೇ ಆದರೆ ರೈತರಿಗೆ ಬೇಡವಾದ ಬಹುತೇಕ ಜಾನುವಾರುಗಳು ಕಟುಕರ ಕೈಸೇರುವುದು ತಪ್ಪುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.