ವಾಣಿಜ್ಯ ಬಾಂಧವ್ಯ ವೃದ್ಧಿ ನಿರೀಕ್ಷೆ ಭಾರತಕ್ಕೆ `ಪರಮಾಪ್ತ ರಾಷ್ಟ್ರ~ದ ಸ್ಥಾನವನ್ನು ನೀಡುವ ಇಂಗಿತ ವ್ಯಕ್ತಪಡಿಸುವ ಮೂಲಕ ಪಾಕಿಸ್ತಾನ ಉಭಯ ರಾಷ್ಟ್ರಗಳ ನಡುವಣ ವಾಣಿಜ್ಯ ವಹಿವಾಟಿನ ಹೆಚ್ಚಳದ ಸೂಚನೆ ನೀಡಿದೆ. ಪಾಕಿಸ್ತಾನಕ್ಕೆ `ಪರಮಾಪ್ತ ರಾಷ್ಟ್ರ~ದ ಸ್ಥಾನವನ್ನು ಭಾರತ 1996ರಷ್ಟು ಹಿಂದೆಯೇ ನೀಡಿದ್ದರೂ, ಅದಕ್ಕೆ ಪಾಕಿಸ್ತಾನದ ಭಾರತ ವಿರೋಧಿ ಧೋರಣೆಯಿಂದ ಅನುಕೂಲಕರ ಪ್ರತಿಸ್ಪಂದನ ವ್ಯಕ್ತವಾಗಿರಲಿಲ್ಲ. ಪಾಕಿಸ್ತಾನ ಸರ್ಕಾರದ ನಿರ್ಧಾರವನ್ನು ನಿಯಂತ್ರಿಸುವ ಸೇನೆ ಮತ್ತು ಮೂಲಭೂತವಾದಿ ಸಂಘಟನೆಗಳು ಭಾರತದೊಂದಿಗೆ ವಾಣಿಜ್ಯ ಬಾಂಧವ್ಯ ಸುಧಾರಣೆಗೆ ಅಡ್ಡಿಯಾಗಿದ್ದುದು ರಹಸ್ಯವೇನಲ್ಲ. ಪಾಕಿಸ್ತಾನ ಸರ್ಕಾರದ ಮೇಲೆ ಸೇನೆ ಮತ್ತು ಮೂಲಭೂತವಾದಿ ಸಂಘಟನೆಗಳ ಹಿಡಿತ ಈಗೇನೂ ಸಡಿಲವಾಗಿಲ್ಲ. ಆದರೂ, ಅಮೆರಿಕದ ಜೊತೆ ಹದಗೆಡುತ್ತಿರುವ ಬಾಂಧವ್ಯ ಮತ್ತು ಭಾರತ-ಆಫ್ಘಾನಿಸ್ತಾನಗಳ ಮಧ್ಯೆ ಹೆಚ್ಚುತ್ತಿರುವ ಸಹಕಾರದ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತವನ್ನು `ಪರಮಾಪ್ತ ರಾಷ್ಟ್ರ~ವನ್ನಾಗಿ ಪರಿಗಣಿಸಬೇಕಾದ ಸ್ಥಿತಿಗೆ ಬಂದಿದೆ. ಇಲ್ಲದಿದ್ದರೆ ಅದು ಏಕಾಂಗಿಯಾಗುವ ಸಾಧ್ಯತೆ ಇದೆ. ನೆರೆಹೊರೆಯ ದೇಶಗಳಾಗಿ, ಹೆಚ್ಚು ಕಡಿಮೆ ಒಂದೇ ರೀತಿಯ ನಾಗರಿಕ ಜೀವನಶೈಲಿಯನ್ನು ಅನುಸರಿಸುತ್ತಿದ್ದರೂ ಮುಕ್ತ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹಾಕಿಕೊಂಡ ಪರಿಣಾಮ ಅವಶ್ಯಕ ವಸ್ತುಗಳನ್ನು ದುಬಾರಿ ಬೆಲೆಗೆ ಮೂರನೇ ರಾಷ್ಟ್ರಗಳಿಂದ ಕೊಳ್ಳಬೇಕಾದ ಅನಿವಾರ್ಯತೆ ಪಾಕಿಸ್ತಾನದಲ್ಲಿ ಸೃಷ್ಟಿಯಾಗಿತ್ತು. ಈಗ ಎರಡೂ ರಾಷ್ಟ್ರಗಳು ಪರಸ್ಪರ `ಪರಮಾಪ್ತ ರಾಷ್ಟ್ರ~ದ ಸ್ಥಾನ ನೀಡಲಿರುವುದರಿಂದ ಉಭಯ ದೇಶಗಳ ಮಧ್ಯೆ ವ್ಯಾಪಾರ ವಹಿವಾಟು ಈಗಿರುವುದಕ್ಕಿಂತ ಮೂರುಪಟ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದನ್ನು ವಾಣಿಜ್ಯ ಸಂಘಟನೆಗಳು ಸ್ವಾಗತಿಸಿವೆ. ಇದು ಎರಡೂ ದೇಶಗಳ ಮಧ್ಯೆ ಶಾಂತಿಯುತ ಸಹಬಾಳ್ವೆಯ ದೃಷ್ಟಿಯಿಂದ ಗಮನಾರ್ಹ ಬೆಳವಣಿಗೆ. ಎರಡೂ ದೇಶಗಳ ಮಧ್ಯೆ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸುವುದರಿಂದ ಭಾರತ ಮತ್ತು ಪಾಕಿಸ್ತಾನದ ಕೃಷಿ ಉತ್ಪನ್ನಗಳಿಗೆ ವಿಫುಲ ಬೇಡಿಕೆ ಸೃಷ್ಟಿಯಾಗುತ್ತದೆ. ಸಕ್ಕರೆ, ಚಹ, ಹತ್ತಿಯ ಬಟ್ಟೆ, ಈರುಳ್ಳಿ, ಸಿಮೆಂಟು, ಚರ್ಮದ ವಸ್ತುಗಳು, ದ್ವಿಚಕ್ರವಾಹನಗಳು, ಔಷಧ ಸಾಮಗ್ರಿ, ಅಕ್ಕಿ, ಅಡಿಕೆ ಮೊದಲಾದ ಅವಶ್ಯಕ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯೂ ಏರ್ಪಡುತ್ತದೆ. ತೆರಿಗೆಯಲ್ಲಿ ವಿನಾಯಿತಿ ಮತ್ತು ಸಾಗಣೆ ವೆಚ್ಚದಲ್ಲಿ ಕಡಿತ ಎರಡೂ ಕಡೆಯ ಬಳಕೆದಾರರಿಗೆ ತಕ್ಷಣಕ್ಕೆ ಒದಗುವ ಲಾಭ. ಜನರ ಮಧ್ಯೆ ಹೆಚ್ಚಿನ ಸಂಪರ್ಕಕ್ಕೆ ಅವಕಾಶ ಕಲ್ಪಿಸುವ ಈ ನಿರ್ಧಾರ ಬೇಗನೆ ಕಾರ್ಯರೂಪಕ್ಕೆ ಬರುವುದಕ್ಕೆ ಅವಶ್ಯಕವಾದ ರಾಜತಾಂತ್ರಿಕ ವಿಧಿಗಳನ್ನು ಮುಗಿಸಿಕೊಳ್ಳುವುದಕ್ಕೆ ಎರಡೂ ದೇಶಗಳು ಇನ್ನು ಕಾರ್ಯೋನ್ಮುಖವಾಗಬೇಕು. `ಪರಮಾಪ್ತ ರಾಷ್ಟ್ರ~ದ ಸ್ಥಾನವನ್ನು ಭಾರತಕ್ಕೆ ನೀಡುವಾಗ ಕಾಶ್ಮೀರ ಕುರಿತಾದ ತನ್ನ ನಿಲುವಿನಲ್ಲಿ ಸಡಿಲಿಕೆ ಇಲ್ಲವೆಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನೀಡುವವರಿಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕೆಂಬ ಹಾಗೂ ಮುಂಬೈ ದಾಳಿಯ ರೂವಾರಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂಬ ಭಾರತದ ಆಗ್ರಹದಲ್ಲಿಯೂ ಸಡಿಲಿಕೆ ಇಲ್ಲವೆಂಬುದು ಸ್ಪಷ್ಟ. ಆದರೆ, ವಾಣಿಜ್ಯ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುವ ನೆಪದಲ್ಲಿ ಭಯೋತ್ಪಾದನೆ ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸುವ ಯತ್ನಗಳನ್ನು ಪಾಕಿಸ್ತಾನ ಮುಂದುವರಿಸಿದರೆ, ಅದು ಈಗ ವಿಸ್ತರಿಸಿದ ಸ್ನೇಹಹಸ್ತ ಧೃತರಾಷ್ಟ್ರ ಆಲಿಂಗನದಂತೆ ಅಪಾಯಕಾರಿ ಎಂಬುದನ್ನು ಭಾರತ ಮರೆಯಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.