ಆಟದ ಗೌರವ ಉಳಿಸಿದ ಶಿಕ್ಷೆ ಕ್ರಿಕೆಟ್ ರಂಗವನ್ನು ತಲ್ಲಣಗೊಳಿಸಿದ್ದ ಮೋಸದಾಟದ ಪ್ರಕರಣಗಳಲ್ಲಿ ಇದೇ ಮೊದಲ ಬಾರಿಗೆ ಸರಿಯಾದ ಶಿಕ್ಷೆಯಾಗಿದೆ. ಪಾಕಿಸ್ತಾನದ ಆಟಗಾರರಾದ ಸಲ್ಮಾನ್ ಬಟ್, ಮಹಮ್ಮದ್ ಆಸಿಫ್, ಮಹಮ್ಮದ್ ಆಮಿರ್ ಮತ್ತು ಇವರನ್ನು ಮೋಸದಾಟಕ್ಕೆ ಪ್ರೇರೇಪಿಸಿದ ಬುಕ್ಕಿ ಮಜರ್ ಮಜೀದ್ ಅವರಿಗೆ ಲಂಡನ್ನಿನ ಸೌತ್‌ವಾಕ್ ಕ್ರೌನ್ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಇಡೀ ಕ್ರಿಕೆಟ್ ಜಗತ್ತು ಇದನ್ನು ಸ್ವಾಗತಿಸಿದೆ. ಯಾವಾಗ ಕ್ರಿಕೆಟ್ ಜಗತ್ತಿನಲ್ಲಿ ಹಣದ ಹೊಳೆ ಹರಿಯತೊಡಗಿತೋ, ಆಗಲೇ ದೊಡ್ಡ ಪ್ರಮಾಣದ ಜೂಜಾಟ ಭಾರತ ಉಪಖಂಡದಲ್ಲಿ ಆರಂಭವಾಯಿತು. ಆಟಗಾರರು ಆಮಿಷಕ್ಕೊಳಗಾದರು. ದಕ್ಷಿಣ ಆಫ್ರಿಕದ ಹ್ಯಾನ್ಸಿ ಕ್ರೊನಿಯೇ, ಭಾರತದ ಮಹಮ್ಮದ್ ಅಜರುದ್ದೀನ್ ಸೇರಿದಂತೆ ಹಲವು ಆಟಗಾರರು ಸಿಕ್ಕಿಬಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಕ್ರೊನಿಯೇ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಅಜರುದ್ದೀನ್ ಹಾಗೂ ಇತರ ಕೆಲವು ಆಟಗಾರರು ನಿಷೇಧಕ್ಕೊಳಗಾದರು. ಆದರೆ ಪ್ರಕರಣ ಆರಂಭವಾಗಿ ಹನ್ನೊಂದು ವರ್ಷಗಳಾದರೂ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಅದೇ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ `ಸ್ಪಾಟ್ ಫಿಕ್ಸಿಂಗ್~ನಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಆಟಗಾರರಿಗೆ ಲಂಡನ್ ನ್ಯಾಯಾಲಯ ಒಂದು ವರ್ಷದಲ್ಲೇ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಆಟಗಾರರು ಮೋಸದಾಟದಲ್ಲಿ ಸಿಲುಕಿದ್ದು ಹೊಸತೇನಲ್ಲ. ಆಟಗಾರರು ಯಾವುದೇ ಶಿಕ್ಷೆಯಾಗುವುದಿಲ್ಲ ಎಂಬ ಭಂಡ ಧೈರ್ಯದಿಂದಲೇ ತಮ್ಮ ಕೈಚಳಕವನ್ನು ಮುಂದುವರಿಸಿದ್ದರು. ಈಗ ಮೂವರು ಆಟಗಾರರು ಜೈಲಿಗೆ ಹೋಗಿರುವುದು ಆಟಗಾರರಿಗೆ ದೊಡ್ಡ ಪಾಠವಾಗಿದೆ. ಅಜರುದ್ದೀನ್ ನಿಷೇಧಕ್ಕೊಳಗಾಗಿ ಆಡುವ ಅವಕಾಶವನ್ನು ಕಳೆದುಕೊಂಡರೇ ಹೊರತು ಬೇರೆ ಯಾವ ಶಿಕ್ಷೆಯೂ ಅವರಿಗಾಗಲಿಲ್ಲ. ಅದೇ ರೀತಿ ಮನೋಜ್ ಪ್ರಭಾಕರ್, ಅಜಯ್ ಜಡೇಜಾ, ಅಜಯ್ ಶರ್ಮ ಕೂಡ ಬರೀ ನಿಷೇಧಕ್ಕೊಳಗಾದರು. ಅಪರಾಧ ಹಾಗೇ ಉಳಿದುಕೊಂಡಿತು. ಕಪಿಲ್ ದೇವ್ ಕಣ್ಣೀರು ಹಾಕಿ ತಾನು ನಿರಪರಾಧಿ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ, ಈ ಎಲ್ಲ ಪ್ರಕರಣಗಳಲ್ಲಿ ಸತ್ಯ ಹೊರಬೀಳಲೇ ಇಲ್ಲ. ದಕ್ಷಿಣ ಆಫ್ರಿಕದ ಹರ್ಷೆಲ್ ಗಿಬ್ಸ್ ಮತ್ತು ನಿಕಿ ಬೊಯೆ ಕೂಡ ಪಾರಾಗಿ ಹೋದರು. ಈ ಹಿಂದೆ ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್‌ನಲ್ಲಿ ಮೋಸದಾಟಕ್ಕೆ ಆಟಗಾರರು ಜೈಲಿಗೆ ಹೋದ ಉದಾಹರಣೆಗಳಿವೆ. ಅಥ್ಲೆಟಿಕ್ಸ್‌ನಲ್ಲಿ ಮೇರಿಯನ್ ಜೋನ್ಸ್ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸುಳ್ಳು ಹೇಳಿದ್ದಕ್ಕೆ, ಬಾಕ್ಸರ್ ಮೈಕ್ ಟೈಸನ್ ಅತ್ಯಾಚಾರಕ್ಕೆ ಹಾಗೂ ಒ.ಜೆ. ಸಿಂಪ್ಸನ್ ಕೊಲೆ ಆರೋಪಕ್ಕೆ ಜೈಲಿಗೆ ಹೋಗಿದ್ದಾರೆ. ಆದರೆ ಕ್ರಿಕೆಟ್‌ನಲ್ಲಿ ಯಾರಿಗೂ ಜೈಲು ಶಿಕ್ಷೆಯಾಗಿರಲಿಲ್ಲ. ಪಾಕಿಸ್ತಾನದ ಆಟಗಾರರು ಈಗ ಜೈಲಿಗೆ ಹೋಗಿದ್ದು ಎಲ್ಲರಿಗೂ ಎಚ್ಚರಿಕೆ ಗಂಟೆ. ಬುಕ್ಕಿಗಳು ಮತ್ತು ಆಟಗಾರರಲ್ಲಿ ರಂಗೋಲಿ ಕೆಳಗೆ ನುಸುಳುವ ಬುದ್ಧಿ ಇದೆಯಾದರೂ ತಾತ್ಕಾಲಿಕವಾಗಿ ಎಲ್ಲರೂ ಎಚ್ಚರದಿಂದ ಇರುವುದಂತೂ ಖಂಡಿತ. ಅದು ಆಟದ ಗೌರವವನ್ನೂ ಉಳಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.