ಕತ್ತು ಹಿಸುಕುವ ಯತ್ನ ಯಾರನ್ನಾದರೂ ಶಿಕ್ಷಿಸುವ ಉದ್ದೇಶ ಇದ್ದರೆ ಮೊದಲು ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ. ಕಾನೂನುಬಲ್ಲ ಭಾರತೀಯ ಪತ್ರಿಕಾ ಮಂಡಳಿಯ ನೂತನ ಅಧ್ಯಕ್ಷ ಮಾರ್ಕಂಡೇಯ ಖಟ್ಜು ಇದೇ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಮೊದಲು ಪತ್ರಕರ್ತರ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. `ಪತ್ರಿಕೆಗಳು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಕಾರ‌್ಯನಿರ್ವಹಿಸುತ್ತಿವೆ.. ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿವೆ.. ಮೂಢನಂಬಿಕೆಗಳನ್ನು ಪೋಷಿಸುತ್ತಿವೆ~ ಎನ್ನುವುದು ಅವರ ಮೊದಲ ಆರೋಪ. `ಪತ್ರಕರ್ತರೆಲ್ಲರೂ ದಡ್ಡರು, ಅವರಿಗೆ ಆರ್ಥಿಕ ಸಿದ್ಧಾಂತ, ರಾಜಕೀಯ ಶಾಸ್ತ್ರ, ಸಾಹಿತ್ಯ ಇಲ್ಲವೇ ತತ್ವಶಾಸ್ತ್ರದ ಜ್ಞಾನವೇ ಇಲ್ಲ~ ಎನ್ನುವುದು ಎರಡನೇ ಆರೋಪ. ಇಷ್ಟು ಹೇಳಿ ಪತ್ರಕರ್ತರನ್ನು ಅಪರಾಧಿಯ ಕಟಕಟೆಯಲ್ಲಿ ನಿಲ್ಲಿಸಿರುವ ಖಟ್ಜು `ಇಂತಹವರನ್ನು ಶಿಕ್ಷಿಸಲು ತಮಗೆ ಸರ್ಕಾರಿ ಜಾಹೀರಾತನ್ನು ನಿಲ್ಲಿಸುವ, ಪತ್ರಿಕೆಗಳ ಪ್ರಕಟಣೆಯ ಪರವಾನಗಿಯನ್ನು ರದ್ದುಪಡಿಸುವ ಮತ್ತು ದಂಡ ಹೇರುವ ಅಧಿಕಾರ ಬೇಕು~ ಎಂದು ಹೇಳಿದ್ದಾರೆ. ಅವರ ಆರೋಪಗಳಲ್ಲಿ ಅಲ್ಪಸ್ವಲ್ಪ ಸತ್ಯಾಂಶ ಇರುವುದು ನಿಜವಾದರೂ ಪತ್ರಕರ್ತರೆಲ್ಲ ಜನವಿರೋಧಿಗಳು, ಮೂಢರು, ಸಮಾಜವಿರೋಧಿಗಳು, ಅಜ್ಞಾನಿಗಳು ಎಂದು ಸಾರಾಸಗಟಾಗಿ ಗುಡಿಸಿಹಾಕುವ ಹೇಳಿಕೆ ಅಧಿಕಪ್ರಸಂಗತನದ್ದು. ಇದು ಮಾಧ್ಯಮ ಕ್ಷೇತ್ರದ ಬಗೆಗಿನ ಅವರ ಅಜ್ಞಾನವನ್ನೇ ಬಹಿರಂಗಪಡಿಸುತ್ತದೆ. ಮಾಧ್ಯಮ ಎನ್ನುವುದು ನಿರ್ದಿಷ್ಟವಾದ ಒಂದು ವಿಷಯಕ್ಕೆ ಸೀಮಿತವಾದ ಕ್ಷೇತ್ರವಲ್ಲ. ಅದಕ್ಕಾಗಿಯೇ ಪತ್ರಕರ್ತರನ್ನು `ಎಲ್ಲ ವಿಷಯವನ್ನೂ ತಿಳಿದುಕೊಂಡಿರುವ, ಆದರೆ, ಯಾವುದರಲ್ಲಿಯೂ ಪರಿಣತರಲ್ಲದವರು~ ಎಂದು ಹೇಳಲಾಗುತ್ತದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರು ಎಲ್ಲ ವಿಷಯಗಳನ್ನೂ ಬಲ್ಲ ಸರ್ವಜ್ಞರಾಗಿರಲು ಸಾಧ್ಯವೂ ಇಲ್ಲ. ಇದು ಮಾಧ್ಯಮ ಕ್ಷೇತ್ರಕ್ಕೆ ಮಾತ್ರವಲ್ಲ, ಖಟ್ಜು ಅವರು ಸೇವೆ ಸಲ್ಲಿಸಿದ್ದ ನ್ಯಾಯಾಂಗವೂ ಸೇರಿದಂತೆ ಉಳಿದ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಪತ್ರಕರ್ತರ ಬಗ್ಗೆ ಕೇಳುವ ಈ ಪ್ರಶ್ನೆಯನ್ನು ಉಳಿದವರ ಬಗ್ಗೆಯೂ ಕೇಳಬಹುದು, ಇದು ಕೊನೆಯಿಲ್ಲದ ವಾಗ್ವಾದ. ಪತ್ರಿಕಾ ಮಂಡಳಿಯ ಅಧ್ಯಕ್ಷರ ಮಾತುಗಳಲ್ಲಿ ಮಾಧ್ಯಮ ಕ್ಷೇತ್ರದ ಸುಧಾರಣೆಯ ಆಶಯಕ್ಕಿಂತಲೂ ಹೆಚ್ಚಾಗಿ ಅದನ್ನು ನಿಯಂತ್ರಿಸುವ ಅಧಿಕಾರದ ಲಾಲಸೆ ಕಾಣುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತುಹಿಸುಕುವ ಇಂತಹ ಪ್ರಯತ್ನವನ್ನು ಸಹಿಸಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಸರ್ವಾಧಿಕಾರಿ ವರ್ತನೆಗೆ ಅವಕಾಶ ಇಲ್ಲ. ಈಗಿನ ಕಾನೂನು ವ್ಯವಸ್ಥೆಯಲ್ಲಿಯೇ ತಪ್ಪು ಮಾಡಿದ ಪತ್ರಿಕೆಗಳ ವಿರುದ್ಧ ಕ್ರಮಕೈಗೊಳ್ಳುವ ಅವಕಾಶಗಳಿವೆ. ಈ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯ ಇದ್ದರೆ ಅದನ್ನು ಮಾಡಲು ಸರ್ಕಾರ ಸ್ವತಂತ್ರವಾಗಿದೆ. ಖಟ್ಜು ಅವರು ಮಾಧ್ಯಮಗಳ ನಿಯಂತ್ರಣಕ್ಕೆ ಇನ್ನಷ್ಟು ಅಧಿಕಾರವನ್ನು ಕೇಳುವ ಬದಲು ಈಗ ಇರುವ ಅಧಿಕಾರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಪ್ರಯತ್ನ ನಡೆಸಲಿ. `ಕಾಸಿಗಾಗಿ ಸುದ್ದಿ~ ಪ್ರಕರಣದ ಬಗ್ಗೆ ತನಿಖೆ ನಡೆಸಲು ಪತ್ರಿಕಾ ಮಂಡಳಿಯೇ ನೇಮಿಸಿರುವ ಉಪಸಮಿತಿಯ ವರದಿ ಮೂಲೆ ಸೇರಿದೆ. ಖಟ್ಜು ಅವರು ನಿಜಕ್ಕೂ ಮಾಧ್ಯಮ ಕ್ಷೇತ್ರದ ಸುಧಾರಣೆಯ ಕಾಳಜಿ ಹೊಂದಿದ್ದರೆ ಆ ವರದಿ ಆಧಾರದಲ್ಲಿ ತಪ್ಪಿತಸ್ಥ ಪತ್ರಿಕೆಗಳ ವಿರುದ್ಧ ಕ್ರಮಕೈಗೊಳ್ಳುವ ದಿಟ್ಟತನವನ್ನು ತೋರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.