ಆಡಳಿತಕ್ಕೆ ಕಾಯಕಲ್ಪ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದು ಮೂರೂವರೆ ವರ್ಷವಾದ ಬಳಿಕ ಆಡಳಿತಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವುದು ಮೆಚ್ಚುಗೆಯ ವಿಷಯ. `ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಮಸೂದೆ- 2011~ಅನ್ನು (ನಾಗರಿಕ ಸನ್ನದು) ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಆಡಳಿತವನ್ನು ಚುರುಕುಗೊಳಿಸುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಂಡಂತಿದೆ. ಇಂತಹ ಶಾಸನ ಈಗಾಗಲೇ ಬಿಹಾರವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಅಲ್ಲಿನ ಕೆಲವು ಉತ್ತಮ ಅಂಶಗಳನ್ನು ರಾಜ್ಯ ಸರ್ಕಾರ ಆಯ್ದುಕೊಂಡಿದೆ. ಉದ್ದೇಶಿತ ಈ ಸುಗ್ರೀವಾಜ್ಞೆಯಂತೆ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಜನರಿಗೆ ಆಗಬೇಕಾದ ಕೆಲಸಗಳನ್ನು ಸಂಬಂಧಿಸಿದ ಇಲಾಖೆಗಳು ಕಡ್ಡಾಯವಾಗಿ ಮಾಡಿಕೊಡಲೇಬೇಕು. ಜನರಿಗೆ ಮಾಹಿತಿ ಹಕ್ಕು ಒದಗಿಸಿರುವ ಹಕ್ಕಿನ ಮಾದರಿಯಲ್ಲೇ ಈ ಶಾಸನವೂ ನಾಗರಿಕರಿಗೆ ಸೇವೆಯನ್ನು ಒದಗಿಸುವುದೆಂಬ ವಿಶ್ವಾಸ ಸರ್ಕಾರದ್ದು. ಹತ್ತು ಇಲಾಖೆಗಳಲ್ಲಿನ 90 ಸೇವೆಗಳನ್ನು ಈ ಶಾಸನದ ವ್ಯಾಪ್ತಿಗೆ ತರುತ್ತಿರುವುದು ನಿಜಕ್ಕೂ ಒಳ್ಳೆಯ ಕೆಲಸ. ಈ ಕ್ರಮದ ಅನ್ವಯ ನಿಗದಿತ ಸಮಯದಲ್ಲಿ ಜನರಿಗೆ ಮಾಡಿಕೊಡಬೇಕಾದ ಕೆಲಸದಲ್ಲಿ ವಿಳಂಬ ಮಾಡುವುದಕ್ಕೆ ಅವಕಾಶವಿಲ್ಲ. ಮತ್ತು ಕೆಲಸ ಮಾಡಲು ನಿರಾಕರಿಸಿದರೆ ಸಂಬಂಧಿಸಿದ ಸಿಬ್ಬಂದಿಗೆ ದಂಡ ಹಾಕುವ ಕ್ರಮದಿಂದ ಭ್ರಷ್ಟಾಚಾರ ನಿಯಂತ್ರಣವನ್ನು ನಿರೀಕ್ಷಿಸಲು ಸಾಧ್ಯ. ಈ ದಿಶೆಯಲ್ಲಿ ಸರ್ಕಾರದ ಈ ಕ್ರಮ ನಿಜಕ್ಕೂ ಜನಪರವಾದುದು. ಆದರೆ ಇದು ಯಶಸ್ವಿಯಾಗಬೇಕಷ್ಟೇ. ಹಲವು ವರ್ಷಗಳಿಂದ ಸಾರಿಗೆ, ಕಂದಾಯ ಮತ್ತಿತರೆ ಇಲಾಖೆಗಳಲ್ಲಿ ಕೆಲವು ಸೇವೆಗಳನ್ನು ನಿರ್ದಿಷ್ಟ ಅವಧಿಯಲ್ಲಿ ಪೂರೈಸುವುದಾಗಿ ಆಯಾ ಇಲಾಖೆಯ ಕಚೇರಿಯ ಗೋಡೆಗಳಲ್ಲಿ ಫಲಕಗಳನ್ನು ಹಾಕಲಾಗಿದೆ. ಆದರೆ ಅದೆಲ್ಲವೂ ಕೇವಲ ಬರಹದಲ್ಲಿಯೇ ಹೊರತು ಕಾರ್ಯರೂಪದಲ್ಲಿಲ್ಲ ಎನ್ನುವುದು ಈ ಕಚೇರಿಗಳಿಗೆ ಹೋಗುವವರಿಗೆ ಆಗಿರುವ ಅನುಭವ. ಜನಸಂಪರ್ಕ ಇರುವ ಕಂದಾಯ ಇಲಾಖೆಯಿಂದ ಜಮೀನಿಗೆ ಸಂಬಂಧಿಸಿದಂತೆ ಅವಶ್ಯ ಪತ್ರಗಳನ್ನು ಪಡೆಯಲು, ಹಾಗೆಯೇ ಸಾರಿಗೆ ಇಲಾಖೆಯಲ್ಲಿ ವಾಹನ ಚಾಲನಾ ಪರವಾನಗಿ ಇತ್ಯಾದಿ ಸರ್ಟಿಫಿಕೆಟ್‌ಗಳನ್ನು ತೆಗೆದುಕೊಳ್ಳಲು ಕಾಲಮಿತಿಯನ್ನು ಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ಆದರೆ ಇದನ್ನು ನಂಬಿ ಕಾನೂನು ಮಾರ್ಗವಾಗಿ ಹೋಗುವ ಜನರಿಗೆ ಆಗುವ ತೊಂದರೆ, ವಿಳಂಬ ಹೇಳತೀರದು. ಈ ಕೆಲಸಗಳಿಗಾಗಿಯೇ ಆ ಕಚೇರಿಗಳಲ್ಲಿಯೇ ಸುಳಿದಾಡುವ ಏಜೆಂಟರ ಮೂಲಕ ಹೋದರೆ ಎಲ್ಲ ಕೆಲಸವೂ ಸುಲಲಿತವಾಗಿ ನೆರವೇರುತ್ತವೆ. ಅಂದರೆ ಅಡ್ಡದಾರಿಯಲ್ಲೇ ಬಂದರೆ ಕೆಲಸ ಸುಲಭವಾಗಿ ಆಗುತ್ತದೆ ಎನ್ನುವ ಮಟ್ಟಿಗೆ ಈ ಕಚೇರಿಗಳ ಕಾರ್ಯ ನಡೆದಿದೆ. ಇದೆಲ್ಲವೂ ಸರ್ಕಾರ ನಡೆಸುವವರಿಗೆ ತಿಳಿಯದ ವಿಚಾರವೇನಲ್ಲ. ಅಷ್ಟರಮಟ್ಟಿಗೆ ನಮ್ಮ ಅಧಿಕಾರಶಾಹಿ ಹಣಕ್ಕಾಗಿ ರಾಜಮಾರ್ಗವನ್ನೂ ಕಳ್ಳಮಾರ್ಗವನ್ನಾಗಿ ಪರಿವರ್ತಿಸಿದೆ. ಇದೇ ಗತಿ ಈಗ ತರಲು ಹೊರಟಿರುವ ಸುಗ್ರೀವಾಜ್ಞೆಗೂ ಆಗಬಾರದು. ವಿಳಂಬಕ್ಕೆ ಎಡೆ ಇಲ್ಲದಂತೆ ಆಡಳಿತ ವ್ಯವಸ್ಥೆಯನ್ನು ಸರಿ ಮಾಡುವ ಇಚ್ಛಾಶಕ್ತಿ ಸರ್ಕಾರ ನಡೆಸುವವರಿಗೆ ಇರಬೇಕಾಗುತ್ತದೆ. ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡುವ ಅಧಿಕಾರಸ್ಥರು ಸರ್ಕಾರ ಜನರಿಗೆ ಸ್ಪಂದಿಸುವಂತೆ ಮಾಡಲು ತಮ್ಮ ತಮ್ಮ ಇಲಾಖೆಯ ಕಾರ್ಯ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.