ಸಮರ್ಥನಿಯವಲ್ಲದ ವಿರೋಧ ವಿಧಾನಸೌಧದ ಮುಂದಿರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಯ ಸ್ಥಳಾಂತರವನ್ನು ಕೆಲವು ದಲಿತ ಸಂಘಟನೆಗಳು ಅನಗತ್ಯವಾಗಿ ವಿವಾದದ ವಿಷಯವನ್ನಾಗಿ ಮಾಡುತ್ತಿವೆ. `ನಮ್ಮ ಮೆಟ್ರೊ~ ನೆಲದಡಿ ನಿಲ್ದಾಣ ನಿರ್ಮಾಣ ಕಾಮಗಾರಿಯ ಸಮಯದಲ್ಲಿ ಪ್ರತಿಮೆಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಈ ಸ್ಥಳಾಂತರ ಅನಿವಾರ‌್ಯವಾಗಿದೆ. ಅಲ್ಲಿದ್ದ ಜವಾಹರಲಾಲ್ ನೆಹರೂ ಮತ್ತು ಸುಭಾಷ್‌ಚಂದ್ರ ಬೋಸ್ ಅವರ ಪ್ರತಿಮೆಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಆದರೆ ದಲಿತ ಸಂಘಟನೆಗಳ ವಿರೋಧದಿಂದಾಗಿ ಕಳೆದೆರಡು ವರ್ಷಗಳಿಂದ ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಪ್ರತಿಮೆಗೆ ಯಾರೂ ಅಗೌರವ ಸೂಚಿಸಿಲ್ಲ, ಹಾನಿಯನ್ನೂ ಮಾಡಿಲ್ಲ. ಅಂತಹ ದುಷ್ಕೃತ್ಯ ನಡೆದರೆ ದಲಿತರು ಮಾತ್ರವಲ್ಲ ಪ್ರಜ್ಞಾವಂತ ನಾಗರಿಕರೆಲ್ಲರೂ ಖಂಡಿಸಬೇಕಾಗುತ್ತದೆ. ಆದರೆ ಈಗ ನಡೆಯುತ್ತಿರುವುದು ಪ್ರತಿಮೆಯ ತಾತ್ಕಾಲಿಕ ಸ್ಥಳಾಂತರ. ಪ್ರತಿಮೆಯನ್ನು ಮತ್ತೆ ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಲಿಖಿತ ಆಶ್ವಾಸನೆ ನೀಡಿದೆ. ಇದನ್ನು ಒಪ್ಪದ ದಲಿತ ಸಂಘಟನೆಗಳ ಹಠಮಾರಿತನ ಮತ್ತು ಅದಕ್ಕೆ ಕುಮ್ಮಕ್ಕು ನೀಡುತ್ತಿರುವಂತೆ ಮಾತನಾಡುತ್ತಿರುವ ಸಮಾಜ ಕಲ್ಯಾಣ ಸಚಿವರ ವರ್ತನೆ ಖಂಡನೀಯ. ತಮ್ಮ ವಿರೋಧ ಯಾಕೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಇವರಿಗೆ ಸಾಧ್ಯವಾಗದೆ ಇರುವುದರಿಂದ ವಿರೋಧದ ಉದ್ದೇಶವನ್ನೇ ಸಂಶಯದಿಂದ ನೋಡಬೇಕಾಗುತ್ತದೆ. ಎಂಬತ್ತರ ದಶಕದಲ್ಲಿ ಹುಟ್ಟಿಕೊಂಡ ದಲಿತ ಸಂಘಟನೆಗಳು ಅಸ್ಪೃಶ್ಯತೆ, ಅಸಮಾನತೆ ವಿರುದ್ಧ ನಡೆಸಿರುವ ಹೋರಾಟ ಮತ್ತು ದಲಿತ ಸಮುದಾಯದಲ್ಲಿ ಹುಟ್ಟಿಸಿರುವ ಜಾಗೃತಿ ಹೆಮ್ಮೆ ಪಡುವಂತಹದ್ದು. ಆದರೆ ಕಾಲಾನುಕ್ರಮದಲ್ಲಿ ದಲಿತ ಚಳವಳಿ ತನ್ನ ಕಾವು ಕಳೆದುಕೊಂಡಿರುವುದು ಮಾತ್ರವಲ್ಲ, ಹಾದಿ ತಪ್ಪಿರುವ ಆರೋಪವನ್ನೂ ಎದುರಿಸುತ್ತಿವೆ. ಒಂದಾಗಿದ್ದ ಸಂಘಟನೆ ಈಗ ಹತ್ತಾರು ಗುಂಪುಗಳಾಗಿ ಒಡೆದುಹೋಗಿವೆ. ಈ ಎಲ್ಲ ಗುಂಪುಗಳು ದಲಿತರ ಹಿತಾಸಕ್ತಿಯ ರಕ್ಷಣೆಗಾಗಿಯೇ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿವೆ ಎಂದು ಹೇಳಲಾಗದು. ಪ್ರತಿಯೊಂದು ಗುಂಪು ಕೂಡಾ ಮೇಲುಗೈ ಸಾಧಿಸಲು ಪರಸ್ಪರ ಪೈಪೋಟಿಯಲ್ಲಿ ತೊಡಗಿರುವಂತೆ ವರ್ತಿಸುತ್ತಿವೆ. ಇದರಿಂದಾಗಿ ಕೆಲವು ಬಾರಿ ದಲಿತರ ಹಿತಾಸಕ್ತಿಗೆ ಸಂಬಂಧವೇ ಇಲ್ಲದಂತಹ ಪ್ರಕರಣಗಳನ್ನು ಎತ್ತಿಕೊಂಡು ಹೋರಾಟ ನಡೆಸುವುದೂ ಇದೆ. ಅಂಬೇಡ್ಕರ್ ಪ್ರತಿಮೆ ಸ್ಥಳಾಂತರದ ಬಗೆಗಿನ ವಿರೋಧ ಕೂಡಾ ಹಾದಿತಪ್ಪಿದ ಹೋರಾಟದಂತೆಯೇ ಕಾಣಿಸುತ್ತಿದೆ. ಹೀಗಾಗದಂತೆ ದಲಿತ ನಾಯಕರು ಎಚ್ಚರಿಕೆ ವಹಿಸಬೇಕು. ಮೆಟ್ರೊ ರೈಲು ಸಾರ್ವಜನಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳ್ಳುತ್ತಿರುವ ಮೂಲಸೌಕರ್ಯ. ಇದಕ್ಕಾಗಿ ವ್ಯಯವಾಗುತ್ತಿರುವ ಹಣ ಸಾರ್ವಜನಿಕರದ್ದು. ಕಾಮಗಾರಿ ವಿಳಂಬವಾದರೆ ಅಧಿಕಗೊಳ್ಳುವ ನಿರ್ಮಾಣ ವೆಚ್ಚದ ಹೊರೆ ಬೀಳುವುದು ಕೂಡಾ ಸಾರ್ವಜನಿಕರ ತಲೆಮೇಲೆ ಎನ್ನುವುದನ್ನು ಮರೆಯಬಾರದು. ಆದ್ದರಿಂದ ದಲಿತ ಸಂಘಟನೆಗಳು ಅಂಬೇಡ್ಕರ್ ಪ್ರತಿಮೆ ಸ್ಥಳಾಂತರದ ವಿವಾದವನ್ನು ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಳ್ಳಬಾರದು. ಇಂತಹ ವಿರೋಧಗಳಿಗಾಗಿ ವ್ಯಯ ಮಾಡುವ ಶ್ರಮ ಮತ್ತು ಸಮಯವನ್ನು ದಲಿತರ ಹಿತಾಸಕ್ತಿ ರಕ್ಷಣೆಯ ಬೇರೆ ಕೆಲಸಗಳಿಗೆ ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಯೋಚಿಸಬೇಕು. ಈಗ ಆಗಬೇಕಾಗಿರುವುದು ಅಂಬೇಡ್ಕರ್ ಚಿಂತನೆಯ ಅನುಷ್ಠಾನವೇ ಹೊರತು ಅವರ ಪ್ರತಿಮೆಯ ಆರಾಧನೆ ಅಲ್ಲ. ಅಂಬೇಡ್ಕರ್ ಜೀವಂತವಾಗಿದ್ದರೂ ಇದನ್ನೇ ಹೇಳುತ್ತಿದ್ದರೇನೋ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.