ಭೂಮಿಗೆ ಭಾರ ಅಲ್ಲ ಜನಸಂಖ್ಯೆಯ ಅಂಕಿ-ಅಂಶ ಪ್ರಕಟವಾದ ಕೂಡಲೇ ಸಾಮಾನ್ಯವಾಗಿ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಈ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚುತ್ತಾ ಹೋದರೆ ಭವಿಷ್ಯದ ಗತಿಯೇನು ಎಂಬ ಗಾಬರಿಯ ಪ್ರಶ್ನೆ ಎಲ್ಲೆಡೆ ಕೇಳತೊಡಗುತ್ತದೆ. ವಿಶ್ವದ ಜನಸಂಖ್ಯೆ 700 ಕೋಟಿಗೆ ತಲುಪಿದೆ ಎನ್ನುವ ಸುದ್ದಿಗೆ ಇಂತಹ ಪ್ರತಿಕ್ರಿಯೆ ಅಲ್ಲಲ್ಲಿ ವ್ಯಕ್ತವಾಗಿದೆ. ವಿಶ್ವದ ಪ್ರತಿ ಏಳು ವ್ಯಕ್ತಿಗಳಲ್ಲಿ ಒಬ್ಬ ಭಾರತೀಯ ಎನ್ನುವುದು ಕೂಡಾ ಈ ಭೀತಿಗೆ ಕಾರಣ. ಇದು ಜನಸಂಖ್ಯೆಯನ್ನು ಒಂದು ಸಮಸ್ಯೆಯಾಗಿಯೇ ನೋಡುತ್ತಾ ಬಂದಿರುವುದರ ಫಲ. ಅಭಿವೃದ್ದಿಯ ಎಲ್ಲ ಲಾಭಗಳನ್ನು ನುಂಗಿಹಾಕುತ್ತಿರುವ ಜನಸಂಖ್ಯೆಯ ಹೆಚ್ಚಳವನ್ನು ನಿಯಂತ್ರಿಸಲೇಬೇಕು. ಇದಕ್ಕಾಗಿ ಜನನ ನಿಯಂತ್ರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಎನ್ನುವುದೂ ನಿಜ. ಆದರೆ ನಿಯಂತ್ರಣ ಎನ್ನುವುದು ಸಮಸ್ಯೆಯ ಪರಿಹಾರಕ್ಕೆ ಇರುವ ಹಲವು ಮಾರ್ಗಗಳಲ್ಲಿ ಒಂದು ಮಾತ್ರ, ಇದು ಹಳೆಯ ಮಾರ್ಗ ಕೂಡಾ ಹೌದು. ಕಾಲ ಬದಲಾಗುತ್ತಿದೆ, ಹುಟ್ಟಿದವರೆಲ್ಲರೂ ಭೂಮಿಗೆ ಭಾರ ಎಂದು ಈಗ ಹೇಳುವ ಹಾಗಿಲ್ಲ. ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾ ದೇಶ ಅಭಿವೃದ್ದಿ ಪಥದಲ್ಲಿ ದಾಪುಗಾಲು ಹಾಕುತ್ತಿರುವುದು ಜನಸಂಖ್ಯೆ ಹೆಚ್ಚಳವನ್ನು ಬೇರೆಯೇ ದೃಷ್ಟಿಯಿಂದ ನೋಡುವುದಕ್ಕೆ ನಮಗೆ ಪ್ರೇರಣೆಯಾಗಬೇಕು. ಗುಣಮಟ್ಟದ ಶಿಕ್ಷಣ, ಪೌಷ್ಟಿಕ ಆಹಾರ ಪೂರೈಕೆ, ಉದ್ಯೋಗ ಸೃಷ್ಟಿ, ಉತ್ತಮ ಆರೋಗ್ಯ ಸೌಲಭ್ಯವನ್ನು ಕಲ್ಪಿಸುವ ಮೂಲಕ ಜನಸಂಖ್ಯೆಯನ್ನು ಜನಶಕ್ತಿಯಾಗಿ ಪರಿವರ್ತಿಸಲು ಸಾಧ್ಯ ಇದೆ. ಈ ರೀತಿ ನಿರ್ಮಾಣವಾಗುವ ಮಾನವ ಸಂಪನ್ಮೂಲ ದೇಶದ ಶಕ್ತಿಯಾಗುತ್ತದೆ, ಹೊರೆಯಾಗುವುದಿಲ್ಲ. ನಮ್ಮಲ್ಲಿ ಇದಕ್ಕೆ ತದ್ವಿರುದ್ಧವಾದ ಕ್ರಮಗಳು ಜಾರಿಯಲ್ಲಿವೆ. ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳನ್ನು ನೀಡಬಾರದೆನ್ನುವವರೆಗೆ ಅತಿರೇಕತನದ ಸಲಹೆಗಳು ಕೇಳಿಬರುತ್ತಿವೆ. ದೇಶದ ಜನಸಂಖ್ಯೆಯ ಶೇಕಡಾ 77ರಷ್ಟು ಜನರ ದಿನದ ಆದಾಯ 20 ರೂಪಾಯಿಗಳಿಗಿಂತಲೂ ಕಡಿಮೆ ಇದೆ ಎಂದು ಸರ್ಕಾರವೇ ರಚಿಸಿದ್ದ ಅರ್ಜುನ್ ಸೇನ್‌ಗುಪ್ತಾ ಸಮಿತಿ ತನ್ನ ವರದಿಯಲ್ಲಿ ತಿಳಿಸಿದೆ. ಇಂತಹ ಸ್ಥಿತಿಯಲ್ಲಿ ಬದುಕುತ್ತಿರುವವರಿಗೆ ಸಿಗುತ್ತಿರುವ ಅಲ್ಪಸ್ವಲ್ಪ ಸರ್ಕಾರಿ ಸೌಲಭ್ಯಗಳನ್ನು ಕೂಡಾ ಜನನ ನಿಯಂತ್ರಣದ ಹೆಸರಲ್ಲಿ ಕಿತ್ತುಕೊಳ್ಳಲು ಹೊರಟರೆ ಭಾರತ ಶಾಶ್ವತವಾಗಿ ಬಡದೇಶವಾಗಿಯೇ ಉಳಿಯಬಹುದು. ಈ ಹಿನ್ನೆಲೆಯಲ್ಲಿ ನಮ್ಮ ಜನನ ನಿಯಂತ್ರಣದ ಕ್ರಮಗಳನ್ನೇ ಪುನರ್‌ಪರಿಶೀಲನೆಗೊಳಪಡಿಸುವ ಅಗತ್ಯ ಇದೆ. ಬಡತನ ನಿವಾರಣೆ, ಸಾಕ್ಷರತೆ, ಆರೋಗ್ಯ ರಕ್ಷಣೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಯೋಜನೆಗಳಲ್ಲಿ ಒತ್ತು ನೀಡುವ ಮೂಲಕ ಜನಸಂಖ್ಯೆಯ ನಿಯಂತ್ರಣ ಸಾಧ್ಯ ಎನ್ನುವುದು ಅಭಿವೃದ್ದಿ ಹೊಂದಿರುವ ಹಲವಾರು ದೇಶಗಳು ಕಂಡುಕೊಂಡಿರುವ ಸತ್ಯ. ಭಾರತ ಈ ನಿಟ್ಟಿನಲ್ಲಿ ಯೋಚನೆ ಮಾಡಲು ಇದು ಸಕಾಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.