ಕನ್ನಡಿಗರ ಬದುಕು ಕಟ್ಟುವ ಕೆಲಸ ರಾಜ್ಯೋತ್ಸವವನ್ನು ಕನ್ನಡಿಗರು ಮತ್ತೊಮ್ಮೆ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಕರ್ನಾಟಕ, ಕನ್ನಡದ ವಿಚಾರವಾಗಿ ಅಧಿಕಾರರೂಢರು ಎಂದಿನಂತೆ ಭರವಸೆಗಳ ಸುರಿಮಳೆಯನ್ನೆ ಹರಿಸುತ್ತಿದ್ದಾರೆ. ಕರ್ನಾಟಕದ ಜನರಿಗೆ ಇದು ಹೊಸದೇನಲ್ಲ. ಕನ್ನಡದ ವಿಚಾರದಲ್ಲಿ ಏನು ತುರ್ತಾಗಿ ಆಗಬೇಕಿದೆಯೋ ಅದು ಆಗುತ್ತಲೇ ಇಲ್ಲ. ಕನ್ನಡಕ್ಕೆ ಬಂದಿರುವ ದುರ್ಗತಿ ಬಹುಶಃ ದೇಶದಲ್ಲಿ ಮತ್ತಾವುದೇ ಭಾಷೆಗೆ ಬಂದಿರಲಾರದು. ಮುಖ್ಯವಾಗಿ ರಾಜ್ಯದ ಆಡಳಿತ ಕನ್ನಡದಲ್ಲಿಯೇ ನಡೆಯುತ್ತಿಲ್ಲ. ಆಡಳಿತದ ಮುಖ್ಯ ಕೇಂದ್ರವಾದ ವಿಧಾನಸೌಧ ಬ್ರಿಟಿಷ್ ವಸಾಹತುಶಾಹಿ ತೆಕ್ಕೆಯಿಂದ ಇನ್ನೂ ಹೊರಬಂದಿಲ್ಲ. ಅಷ್ಟರ ಮಟ್ಟಿಗೆ ಆಡಳಿತ ಸಾಮಾನ್ಯ ಜನರಿಂದ ದೂರ ಉಳಿದಿದೆ. ಜನರ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಾದ ಶಿಕ್ಷಣ, ಭಾಷಾ ಮಾಧ್ಯಮದ ಗೊಂದಲದಿಂದಾಗಿ ಚೈತನ್ಯವನ್ನು ಕಳೆದುಕೊಳ್ಳುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿಯೇ ಇಂಗ್ಲಿಷ್ ಮಾಧ್ಯಮ ಆಯ್ಕೆ ಮಾಡಿಕೊಳ್ಳುವ ಗೀಳು ಶಿಕ್ಷಣದ ಮೂಲ ಉದ್ದೆೀಶಕ್ಕೇ ಭಂಗ ತರುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವುದರಿಂದ ಜ್ಞಾನ ಬೆಳೆಯುತ್ತದೆ, ಉದ್ಯೋಗ ಸುಲಭವಾಗಿ ಸಿಗುತ್ತದೆ ಎನ್ನುವ ಭ್ರಮೆಯನ್ನು ಆಸಕ್ತ ಹಿತಗಳು ಜನರಲ್ಲಿ, ಆಡಳಿತಗಾರರಲ್ಲಿ ಬಿತ್ತುವಲ್ಲಿ ಸಫಲವಾಗಿವೆ. ಒಂದು ಭಾಷೆಯಾಗಿ ಇಂಗ್ಲಿಷ್ ಕಲಿಯುವುದರಲ್ಲಿ ತಪ್ಪೇನೂ ಇಲ್ಲ. ಅದು ಪ್ರಾಥಮಿಕ ಶಿಕ್ಷಣದ ಮಾಧ್ಯಮವಾಗಬಾರದು ಅಷ್ಟೆ. ಮಕ್ಕಳ ಕಲಿಕೆಗೆ ಮಾತೃಭಾಷೆಯೇ ಅತ್ಯುತ್ತಮ ಮಾಧ್ಯಮ ಎಂಬುದು ಸಂಶಯಾತೀತವಾಗಿ ಸಾಬೀತಾಗಿರುವ ವಿಚಾರ. ಜ್ಞಾನದ ಸುವರ್ಣ ಹಾದಿ ಇದೇ ಆಗಿದೆ. ಈ ಸತ್ಯವನ್ನು ಆಡಳಿತಗಾರರು ಮನವರಿಕೆ ಮಾಡಿಕೊಳ್ಳದೆ ಇರುವುದರಿಂದ ರಾಜ್ಯದಲ್ಲಿ ಕನ್ನಡ ಶಾಲೆಗಳು ಸೊರಗುತ್ತಿವೆ. ಕನ್ನಡ ಶಾಲೆಗಳನ್ನು ಬಲಗೊಳಿಸಿದಂತೆಲ್ಲಾ ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಉತ್ತಮ ಶಿಕ್ಷಣ ಸಹಜವಾಗಿಯೇ ಸಮಾಜದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಕಾರಣವೊಡ್ಡಿ ಗ್ರಾಮೀಣ ಪ್ರದೇಶದ ನೂರಾರು ಸರ್ಕಾರಿ ಶಾಲೆಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆಲೋಚನೆ ಪ್ರತಿಗಾಮಿಯಾದುದು. ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಇಲ್ಲಿನ ಜನರ ಬದುಕು ಶ್ರೀಮಂತಗೊಳ್ಳಬೇಕು.ಅವರು ಬದುಕುವ ಪರಿಸರ, ನೆಲ, ಜಲ, ಭಾಷೆ ಅಭಿವೃದ್ಧಿ ಹೊಂದಿದರೆ ಮಾತ್ರ ಅವರು ಶ್ರಿಮಂತರಾಗಬಲ್ಲರು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ದಿಸೆಯಲ್ಲಿ ರಾಜ್ಯ ಹಿಂದಕ್ಕೆ ಹೆಜ್ಜೆ ಇಡುತ್ತಿದೆ. ಕರ್ನಾಟಕದ ಜನರ ಬದುಕನ್ನು ಶ್ರಿಮಂತಗೊಳಿಸುವ ಉದ್ದೆೀಶದ ಕ್ರಮಗಳನ್ನು ತೆಗೆದುಕೊಳ್ಳಲು ಆಡಳಿತಗಾರರು ಮುಂದಾಗುತ್ತಿಲ್ಲ. ರಾಜ್ಯದ ನೆರವು ಪಡೆದು ಸ್ಥಾಪಿಸಬಯಸುವ ಯಾವುದೇ ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ ಮುಂತಾದ ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಬಹುಪಾಲನ್ನು ರಾಜ್ಯದ ಜನರಿಗೇ ನೀಡಬೇಕೆಂದು ಸರ್ಕಾರಗಳು ಷರತ್ತು ಹಾಕಬೇಕಾದ ಅಗತ್ಯವಿದೆ. ಜಾಗತೀಕರಣ ಮತ್ತು ಮುಕ್ತತೆಯ ಪಾಠ ಹೇಳುವ ಅಮೆರಿಕ ಸೇರಿದಂತೆ ಇತರ ಪಾಶ್ಚಾತ್ಯ ಮತ್ತು ಯೂರೋಪ್ ದೇಶಗಳೇ ಈಗ ಇಂಥ ನೀತಿ ಅನುಸರಿಸುತ್ತಿರುವಾಗ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ಭಾರತದಂಥ ದೇಶಗಳು ಅಂಥ ಷರತ್ತು ವಿಧಿಸುವುದರಲ್ಲಿ ತಪ್ಪೇನೂ ಇಲ್ಲ. ಕರ್ನಾಟಕ ಈ ವಿಚಾರದಲ್ಲಿ ಮುಂದೆ ಹೆಜ್ಜೆ ಇಡಬೇಕು. ಜಗತ್ತಿನ ಅತ್ಯಾಧುನಿಕ ತಾಂತ್ರಿಕ, ವೈಜ್ಞಾನಿಕ ಬೆಳವಣಿಗೆಗಳು, ವಿವಿಧ ಜ್ಞಾನ ಶಾಖೆಗಳೂ ಕನ್ನಡ ಭಾಷೆಯಲ್ಲಿ ಸಿಗುವಂತಾಗಬೇಕು. ಕನ್ನಡ ಓದಿದರೆ ಉದ್ಯೋಗ ಸಿಗುವಂಥ ಪರಿಸ್ಥಿತಿ ನಿರ್ಮಾಣವಾದರೆ ಸಹಜವಾಗಿಯೇ ಕನ್ನಡವೂ ಬೆಳೆಯುತ್ತದೆ. ಅಂಥ ಪರಿಸ್ಥಿತಿ ನಿರ್ಮಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಬೇಕು. ಇದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.