ನದಿ ನೀರನ್ನು ರಕ್ಷಿಸಿ ಪರಿಸರ ಮಾಲಿನ್ಯದಿಂದ ಕಾವೇರಿ ಮತ್ತು ಅದರ ಉಪನದಿಗಳ ನೀರು ಕಲುಷಿತವಾಗುತ್ತಿದೆ ಎಂಬ ಆತಂಕಕಾರಿ ಸಂಗತಿ ಕೇಂದ್ರ ಜಲ ಆಯೋಗದ ಇತ್ತೀಚಿನ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ. ಬೆಂಗಳೂರು ಸೇರಿದಂತೆ ಕಾವೇರಿ ಮತ್ತು ಅದರ ಉಪನದಿಗಳ ನೀರನ್ನು ಕುಡಿಯುತ್ತಿರುವ ಲಕ್ಷಾಂತರ ಜನರಿಗೆ ಇದು ಆತಂಕ ಹುಟ್ಟಿಸುವ ವಿಚಾರ. ನದಿಗಳ ನೀರು ಕಲುಷಿತಗೊಳ್ಳುವುದರಲ್ಲಿ ನಗರಗಳ ಪಾಲು ದೊಡ್ಡದು. ನದಿಗಳ ಜಲಾನಯನ ಪ್ರದೇಶದಲ್ಲಿರುವ ನಗರ, ಪಟ್ಟಣ ಪ್ರದೇಶಗಳ ದ್ರವ ತ್ಯಾಜ್ಯಗಳು ದೊಡ್ಡ ಪ್ರಮಾಣದಲ್ಲಿ ಮಳೆ ನೀರಿನೊಂದಿಗೆ ನದಿಗಳನ್ನು ಸೇರುತ್ತಿರುವುದು ಗೊತ್ತಿರುವ ಸಂಗತಿ. ಆದರೆ ಈ ದ್ರವ ತ್ಯಾಜ್ಯಗಳು ನದಿಗಳ ನೀರನ್ನು ಕುಡಿಯಲೂ ಆಗದಷ್ಟು ಕಲುಷಿತಗೊಳಿಸಿವೆ ಎಂಬುದು ಭಯ ಹುಟ್ಟಿಸುತ್ತದೆ. ನಗರ ಪ್ರದೇಶಗಳಲ್ಲಿರುವ ಅನೇಕ ಬಗೆಯ ಬೃಹತ್ ಉದ್ದಿಮೆಗಳು, ದೊಡ್ಡ ಆಸ್ಪತ್ರೆಗಳು ಹಾಗೂ ವಸತಿ ಪ್ರದೇಶಗಳಿಂದ ಹೊರಬರುವ ದ್ರವ ತ್ಯಾಜ್ಯಗಳಲ್ಲಿ ಅನೇಕ ರಾಸಾಯನಿಕ ಹಾಗೂ ವಿಷಕಾರಿ ಅಂಶಗಳಿರುತ್ತವೆ. ದ್ರವ ತ್ಯಾಜ್ಯಗಳನ್ನು ಸಂಸ್ಕರಿಸಿದ ನಂತರವೇ ಹೊರಬಿಡಬೇಕು ಎಂಬ ನಿಯಮ ಇದ್ದರೂ ಅದು ಸರಿಯಾಗಿ ಪಾಲನೆ ಆಗುತ್ತಿಲ್ಲ. ಕಾರ್ಖಾನೆಗಳ ದ್ರವ ತ್ಯಾಜ್ಯಗಳನ್ನು ನದಿಗೆ ಬಿಡಲು ಅವಕಾಶ ಕೊಡಬಾರದು ಎಂದು ಹಲವು ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿವೆ. ಆದರೂ ಅದನ್ನು ತಡೆಯುವ ಕೆಲಸ ನಡೆಯುತ್ತಿಲ್ಲ. ಕಾವೇರಿ ಕೊಳ್ಳದ ನದಿಗಳು ಮಾತ್ರವಲ್ಲ ರಾಜ್ಯದ ಪ್ರಮುಖ ನದಿಗಳೆಲ್ಲ ಕಲುಷಿತವಾಗಿವೆ. ಹೇಮಾವತಿ, ಅರ್ಕಾವತಿ, ವೃಷಭಾವತಿ, ಶಿಂಷಾ, ಕಪಿಲಾ ಮತ್ತಿತರ ನದಿಗಳ ನೀರು ಕೆಲವೆಡೆ ಬಳಸಲೂ ಆಗದಷ್ಟು ಮಲಿನವಾಗಿದೆ ಎಂಬುದು ದುರದೃಷ್ಟಕರ ಸಂಗತಿ. ರಾಜ್ಯ ಸರ್ಕಾರ ಪರಿಸರದ ಮಾಲಿನ್ಯ ನಿಯಂತ್ರಣದ ಉಸ್ತುವಾರಿಗೆ ಮಂಡಳಿಯೊಂದನ್ನು ರಚಿಸಿದೆ. ಪರಿಸರ ಮಾಲಿನ್ಯ ನಿಯಂತ್ರಣದ ಮೇಲ್ವಿಚಾರಣೆಗೆ ಒಬ್ಬ ಸಚಿವರೂ ಇದ್ದಾರೆ. ಮಂಡಳಿ ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ನದಿಗಳು ಕಲುಷಿತವಾಗುವ ಸಂದರ್ಭ ಬರುತ್ತಿರಲಿಲ್ಲ. ಉದ್ದಿಮೆಗಳ ದ್ರವ ತ್ಯಾಜ್ಯಗಳನ್ನು ಸಂಸ್ಕರಿಸಿದ ನಂತರ ಹೊರಕ್ಕೆ ಬಿಡಬೇಕು ಎಂಬ ನಿಯಮವೂ ಪಾಲನೆ ಆಗುತ್ತಿಲ್ಲ. ಹೊಸದಾಗಿ ಆರಂಭವಾದ ಕಾರ್ಖಾನೆಗಳಲ್ಲಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದ್ದರೂ ಅವು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಅನುಮಾನಗಳಿವೆ. ತ್ಯಾಜ್ಯ ಸಂಸ್ಕರಣೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸುವ ಹೊಣೆ ಮಂಡಳಿಯದು. ಇದು ಮಂಡಳಿಯ ಕೆಲಸವೇ ಅದರೂ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಕಾವೇರಿ ಕೊಳ್ಳದ ಸ್ಥಳೀಯ ಸಂಸ್ಥೆಗಳು ದ್ರವ ತ್ಯಾಜ್ಯಗಳನ್ನು ನದಿಗಳಿಗೆ ಬಿಡುವವರ ಮೇಲೆ ಕಣ್ಣಿಡಬೇಕು. ನಿಯಮ ಉಲ್ಲಂಘಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಜಲ ಆಯೋಗದ ಅಧ್ಯಯನ ವರದಿಯನ್ನು ಸರ್ಕಾರ ಎಚ್ಚರಿಕೆಯ ಗಂಟೆ ಎಂದೇ ಭಾವಿಸಬೇಕು. ಕಲುಷಿತಗೊಂಡಿರುವ ರಾಜ್ಯದ ಪ್ರಮುಖ ನದಿಗಳನ್ನು ಶುದ್ಧೀಕರಿಸುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾಲಮಿತಿಯ ಯೋಜನೆ ಹಾಕಿಕೊಳ್ಳಬೇಕು. ನದಿಗಳ ನೀರು ಕಲುಷಿತವಾದರೆ ಅದರ ಕೆಟ್ಟ ಪರಿಣಾಮ ಜನಸಾಮಾನ್ಯರ ಮೇಲೆ ಆಗುತ್ತದೆ ಎಂಬ ಎಚ್ಚರ ಸರ್ಕಾರಕ್ಕೆ ಇರಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.