ವಿದ್ಯುತ್ ತಳಮಳ ರಾಜ್ಯದಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ಜಾರಿಯಾಗಿದೆ. ಲೋಡ್ ಶೆಡ್ಡಿಂಗ್ ಜಾರಿ ಮಾಡುವ ಅಗತ್ಯ ಇಲ್ಲ ಎಂದು ಇಂಧನ ಸಚಿವೆ ರಾಜೀನಾಮೆಗೆ ಮುನ್ನ ಹೇಳಿದ್ದರು. ಆದರೆ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಇದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿ ಕೂಡ. ಸಂಕ್ರಾಂತಿ ಮುಗಿಯುತ್ತಿದ್ದಂತೆಯೇ ಬಿಸಿಲೂ ಏರುತ್ತದೆ. ಪರೀಕ್ಷಾ ಸಮಯ ಸಮೀಪಿಸುತ್ತಿದೆ. ಸಹಜವಾಗಿಯೇ ವಿದ್ಯುತ್ತಿಗೆ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ಬೇಡಿಕೆ ಪ್ರಮಾಣ 185 ದಶಲಕ್ಷ ಯೂನಿಟ್ ಇದೆ. ಪೂರೈಕೆ ಮಾಡುತ್ತಿರುವುದು ಕೇವಲ 175 ದಶಲಕ್ಷ ಯೂನಿಟ್. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 190 ದಶಲಕ್ಷ ಯೂನಿಟ್‌ಗೆ ಏರುವ ನಿರೀಕ್ಷೆಯಿದೆ. ರಾಜ್ಯದಲ್ಲಿನ ವಿದ್ಯುತ್ ಪರಿಸ್ಥಿತಿಯನ್ನು ಊಹಿಸಿಕೊಂಡರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಎಲ್ಲ ಸೂಚನೆಗಳು ಕಂಡುಬರುತ್ತಿವೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಕೊರತೆ ನೀಗಿಸಲು ಅನಿಯಮಿತ ಲೋಡ್‌ಶೆಡ್ಡಿಂಗ್ ಅನಿವಾರ್ಯ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಇದು ಸರ್ಕಾರದ ವೈಫಲ್ಯ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಯೇ ಇಲ್ಲ. ಅನಿಯಮಿತ ವಿದ್ಯುತ್ ಕಡಿತದಿಂದ ಸಾಮಾನ್ಯ ಗ್ರಾಹಕರು, ರೈತರು, ಕೈಗಾರಿಕೆಗಳ ಮೇಲೆ ನೇರ ಪರಿಣಾಮವಾಗುತ್ತದೆ. ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿ ಸರ್ಕಾರ ವಿದ್ಯುತ್ ಯೋಜನೆಗಳ ಬಗ್ಗೆ ಮಾತನಾಡುತ್ತಿದೆಯೇ ಹೊರತು ಕಾರ್ಯಪ್ರವೃತ್ತವಾಗಿಲ್ಲ. ಛತ್ತೀಸ್‌ಗಡ ವಿದ್ಯುತ್ ಯೋಜನೆ ಮರೆತಂತೆಯೇ ಆಗಿದೆ. ವಿದ್ಯುತ್ ಉತ್ಪಾದನಾ ಯೋಜನೆಗಳು ಕಡತದಲ್ಲೆ ಉಳಿದಿವೆ. ಹೊಸ ಯೋಜನೆಗಳ ಮೂಲಕ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗದಿದ್ದರೆ ಲಭ್ಯವಿರುವ ವಿದ್ಯುತ್ತನ್ನಾದರೂ ಜಾಗರೂಕತೆಯಿಂದ ಬಳಸುವ ವಿವೇಕವಿರಬೇಕು. ಒಂದೆಡೆ ವಿದ್ಯುತ್ ಸಾಗಣೆಯಲ್ಲಿನ ನಷ್ಟ, ಇನ್ನೊಂದೆಡೆ ಎಗ್ಗಿಲ್ಲದೆ ನಡೆಯುತ್ತಿರುವ ವಿದ್ಯುತ್ ಕಳ್ಳತನ. ವಿದ್ಯುತ್ ಪೋಲಾಗುತ್ತಿರುವುದೇ ಹೆಚ್ಚು. ಅಭದ್ರತೆಯಿಂದ ನರಳುತ್ತಿರುವ ರಾಜ್ಯ ಸರ್ಕಾರಕ್ಕೆ ವಿದ್ಯುತ್ ಸಮಸ್ಯೆ ಪರಿಹಾರದ ಬಗ್ಗೆ ಇಚ್ಛಾಶಕ್ತಿಯೇ ಇದ್ದಂತಿಲ್ಲ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಅಲ್ಲಿ ಸರಾಸರಿ ನಾಲ್ಕು ಗಂಟೆ ಕಾಲ ತ್ರೀಫೇಸ್ ವಿದ್ಯುತ್ ಪೂರೈಕೆ ಆಗುತ್ತಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್ ಪ್ರಮಾಣಜಾಸ್ತಿಯಾಗಿರುವುದರಿಂದ ಬೇಡಿಕೆ ಸಹಜವಾಗಿಯೇ ಹೆಚ್ಚಾಗಿದೆ. ಈಗ ನಿತ್ಯ 1.280 ವೆುಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಗುಜರಾತಿನಿಂದ ಇನ್ನೂ 200 ಮೆಗಾವಾಟ್ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಕಾರಿಡಾರ್ ಲಭ್ಯವಿಲ್ಲದ ಕಾರಣ ಅದು ಸಾಧ್ಯವಾಗಿಲ್ಲ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎರಡನೇ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ. ಸರ್ಕಾರದ ಬಳಿ ಈಗ ಉಳಿದಿರುವುದು ಅಸಹಾಯಕತೆಯೊಂದೇ.ಸಂಕಷ್ಟದ ಸಂದರ್ಭವನ್ನು ಪದೇಪದೇ ಎದುರಿಸಿರುವ ಸರ್ಕಾರ, ಪರ್ಯಾಯ ಉಪಾಯಗಳನ್ನು ಹುಡುಕುವಲ್ಲಿ ಸೋತಿದೆ. ಸರ್ಕಾರ ನಡೆಸುತ್ತಿರುವವರು ಒಳಜಗಳದಲ್ಲಿದ್ದಾರೆ. ಅಸ್ಥಿರತೆಯ ನಡುವೆ ಒಂದೊಂದು ದಿನ ಕಳೆಯುವುದೇ ಸರ್ಕಾರದ ಪಾಲಿಗೆ ದೊಡ್ಡ ಸಾಧನೆ ಎನ್ನುವಂತಾಗಿದೆ. ಇನ್ನು ವಿದ್ಯುತ್‌ನಂಥ ಗಂಭೀರ ಸಮಸ್ಯೆಯ ಬಗ್ಗೆ ಚಿಂತಿಸಲು ಸರ್ಕಾರಕ್ಕೆ ಸಮಯವಾದರೂ ಎಲ್ಲಿದೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.