ರೇಷ್ಮೆ ಉದ್ಯಮ ರಕ್ಷಿಸಿ ರಾಜ್ಯದ ರೇಷ್ಮೆಗೂಡು ಮಾರಾಟ ಕೇಂದ್ರಗಳಲ್ಲಿ ಕಳೆದ ಭಾನುವಾರ ಮತ್ತು ಸೋಮವಾರ ರೇಷ್ಮೆಗೂಡಿನ ಬೆಲೆ ದಿಢೀರನೆ ಕುಸಿದು ರೇಷ್ಮೆ ಉದ್ಯಮದಲ್ಲಿ ತಳಮಳ ಉಂಟಾದುದು ಅನಿರೀಕ್ಷಿತ ಬೆಳವಣಿಗೆ. ಈ ವರ್ಷ ಕೆ.ಜಿ ಗೂಡಿನ ಬೆಲೆ ಕನಿಷ್ಠ 100ರಿಂದ 400 ರೂಪಾಯಿವರೆಗೆ ಇತ್ತು. ಸಾಮಾನ್ಯವಾಗಿ 150ರಿಂದ 250ರ ಆಸುಪಾಸಿನಲ್ಲೇ ಮಾರಾಟವಾಗುತಿತ್ತು. ಆದರೆ ಈ ದರ 50 ರಿಂದ 70 ರೂಪಾಯಿಗೆ ಕುಸಿತ ಕಂಡು ರೇಷ್ಮೆ ಬೆಳೆಗಾರರನ್ನು ಕಂಗಾಲು ಮಾಡಿದ್ದು ಕಳವಳಕಾರಿ ಬೆಳವಣಿಗೆ. ಬೆಲೆ ಕುಸಿತದ ಆತಂಕಕ್ಕೆ ಒಳಗಾದ ರಾಮನಗರ ಮತ್ತು ಚನ್ನಪಟ್ಟಣದ ರೈತರು ಸರ್ಕಾರದ ಗಮನ ಸೆಳೆಯಲು ಮೈಸೂರು-ಬೆಂಗಳೂರು ರಸ್ತೆಯಲ್ಲಿ ಧರಣಿ ಕುಳಿತು ಆರುಗಂಟೆ ಕಾಲ ಸಾರಿಗೆ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡಿ ಅಮಾಯಕ ಜನರು ವಿನಾಕಾರಣ ತೊಂದರೆ ಅನುಭವಿಸುವಂತೆ ಮಾಡಿದ್ದು ಅತಿರೇಕ. ರೇಷ್ಮೆ ಗೂಡಿನ ಬೆಲೆ ಕುಸಿತ ಕಾಣುತ್ತಿರುವುದು ಇದೇನು ಹೊಸದಲ್ಲ. ಕಳೆದ ಮಾರ್ಚ್‌ನಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿತ್ತು. ಆಗ ಚೀನಾ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇಕಡ 30 ರಿಂದ ಶೇ 5ಕ್ಕೆ ಇಳಿಸಿದ ಕೇಂದ್ರ ಸರ್ಕಾರದ ಕ್ರಮವೂ ಕಾರಣವಾಗಿತ್ತೆನ್ನುವುದು ನಿಜ. ಆದರೆ ಈಗಿನ ರೇಷ್ಮೆ ಗೂಡಿನ ಬೆಲೆ ಕುಸಿತಕ್ಕೆ ಬಹುತೇಕ ಸ್ಥಳೀಯ ಕಾರಣಗಳೇ ಹೆಚ್ಚಿವೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರೇಷ್ಮೆ ನೂಲು ತೆಗೆಯುವ ಉದ್ಯಮ ಹೆಚ್ಚು ಕಡಿಮೆ ಬಂದ್ ಆಗಿದ್ದವು. ಹಾಗಾಗಿ ರೇಷ್ಮೆ ಕೊಳ್ಳುವವರಿಲ್ಲದೆ ಮಾರುಕಟ್ಟೆಯಲ್ಲಿ ದಿಢೀರನೆ ದರ ಕುಸಿತಕ್ಕೆ ಕಾರಣ ಎನ್ನುವುದು ಬಹುತೇಕ ಮಟ್ಟಿಗೆ ನಿಜ. ಇದೆಲ್ಲದರ ಜೊತೆಗೆ ರೇಷ್ಮೆ ಬೆಳೆಗಾರರ ಸಂಖ್ಯೆಯೂ ಹೆಚ್ಚಿದ್ದು, ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣವೂ ದುಪ್ಪಟ್ಟಾಗಿದೆ. ಚಳಿಗಾಲ ಬಂತೆಂದರೆ ರೇಷ್ಮೆ ಗೂಡಿನ ಗುಣಮಟ್ಟವೂ ಕಡಿಮೆ ಎನ್ನುವ ದೂರುಗಳಿವೆ. ಈ ಮಧ್ಯೆ ಸರ್ಕಾರ ತಾತ್ಕಾಲಿಕವಾಗಿ ಕೆ.ಜಿ. ಗೂಡಿಗೆ 30 ರೂಪಾಯಿ ಬೆಂಬಲ ಬೆಲೆಯನ್ನು ಚಳಿಗಾಲದ ಮೂರು ತಿಂಗಳವರೆಗೆ ಘೋಷಿಸುವ ಮೂಲಕ ರೈತರ ನೆರವಿಗೆ ಬಂದಿದೆ. ಆದರೆ ಇದು ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸುವ ತೇಪೆ ಕೆಲಸ. ಇದರಿಂದ ರೇಷ್ಮೆ ಕೃಷಿಯನ್ನು ಅಭಿವೃದ್ಧಿ ಮಾಡುವುದು ಕಷ್ಟ. ವಾಸ್ತವವಾಗಿ ರೇಷ್ಮೆ ಉದ್ಯಮವನ್ನು ಪೋಷಿಸಲು ಕೇಂದ್ರ ಸರ್ಕಾರ ಚೀನಾ ರೇಷ್ಮೆ ಆಮದಿನ ಮೇಲಿನ ಸುಂಕವನ್ನು ಮತ್ತೆ ಹೆಚ್ಚಿಸಬೇಕು. ಗಡಿ ದಾಟಿ ಬರುವ ಚೀನಾ ರೇಷ್ಮೆಯ ಕಳ್ಳದಾರಿಗಳನ್ನು ಬಂದ್ ಮಾಡಬೇಕು. ದೇಶದಲ್ಲಿನ ರೇಷ್ಮೆ ಗೂಡಿನ ಗುಣಮಟ್ಟವನ್ನು ಹೆಚ್ಚಿಸಲು ನಡೆಯುತ್ತಿರುವ ಸಂಶೋಧನೆ ರೈತರಿಗೆ ತಲುಪಿ ಅದರ ಫಲ ಯಶಸ್ವಿಯಾಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ರೇಷ್ಮೆ ಕೃಷಿ ಮತ್ತು ಉದ್ಯಮಕ್ಕೆ ಎರಡು ದಶಕಗಳ ಹಿಂದೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹ ಮತ್ತು ಆಸಕ್ತಿ ಈಗೀಗ ಇಲ್ಲವಾಗಿರುವುದು ವಿಪರ್ಯಾಸ. ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಶೇ 70ರಷ್ಟು ಕರ್ನಾಟಕದಲ್ಲಿಯೇ ಆಗುತ್ತಿರುವುದರಿಂದ ರಾಜ್ಯ ಸರ್ಕಾರ ಉದ್ಯಮವನ್ನು ನಿರ್ಲಕ್ಷಿಸಬಾರದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.