ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಗುಜರಾತ್‌ನ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿ 59 ಮಂದಿಯನ್ನು ದಹನ ಮಾಡಿದ ಹತ್ಯಾಕಾಂಡದ ನಂತರ 2002ರಲ್ಲಿ ನಡೆದ ಸರಣಿ ಕೋಮುಗಲಭೆಗಳಲ್ಲಿ ಒಂದಾದ ಸರ್ದಾರ್‌ಪುರ ಗಲಭೆಗೆ ಸಂಬಂಧಿಸಿ ಜಿಲ್ಲಾ ಮುಖ್ಯ ಮತ್ತು ಸೆಷನ್ಸ್ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ಗೋಧ್ರಾ ಘಟನೆಯ ಮರುದಿನ ಫೆಬ್ರುವರಿ 28ರಂದು ಗುಜರಾತ್‌ನ ಹಲವು ಕಡೆಗಳಲ್ಲಿ ಸರಣಿ ಹತ್ಯಾಕಾಂಡ ನಡೆದು ಇಡೀ ದೇಶವೇ ತಲ್ಲಣಗೊಂಡಿತ್ತು. ಅಂದು ಮೆಹಸಾನಾ ಜಿಲ್ಲೆಯ ಅಲ್ಪಸಂಖ್ಯಾತ ಕೋಮಿನ ಮನೆಗಳಿಗೆ ಬೆಂಕಿ ಹಚ್ಚಿ 22 ಮಂದಿ ಮಹಿಳೆಯರು ಸೇರಿದಂತೆ 33 ಮಂದಿಯನ್ನು ಅಮಾನುಷವಾಗಿ ದಹನ ಮಾಡಲಾಗಿತ್ತು. ಈ ನರಮೇಧದಲ್ಲಿ ಭಾಗಿಯಾಗಿದ್ದ 73 ಮಂದಿ ಆರೋಪಿಗಳ ಪೈಕಿ 31 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸುವ ಮೂಲಕ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಿದೆ. ಉಳಿದ 42 ಮಂದಿ ಆರೋಪಿಗಳ ಪೈಕಿ 11 ಮಂದಿ ಆರೋಪಗಳ ಸಾಬೀತಿಗೆ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದಾರೆ. ಒಮ್ಮೆಯೇ 31 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಅಪರೂಪದ ಪ್ರಕರಣ. ಅಂತೂ 31ಮಂದಿಗಾದರೂ ತಕ್ಕ ಶಿಕ್ಷೆ ಆಯಿತೆಂಬ ಸಮಾಧಾನದ ನಿಟ್ಟುಸಿರು ಒಂಬತ್ತು ವರ್ಷಗಳಿಂದ ನ್ಯಾಯಕ್ಕಾಗಿ ಹಂಬಲಿಸಿದವರದ್ದಾಗಿದೆ. ಗೋಧ್ರಾ ರೈಲು ದುರಂತದ ಈ ಪ್ರಕರಣದಲ್ಲಿ ತಪ್ಪಿತಸ್ಥರಾದವರಲ್ಲಿ 11ಮಂದಿಗೆ ಗಲ್ಲು ಶಿಕ್ಷೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯ ತೀರ್ಪನ್ನು ಕಳೆದ ಮಾರ್ಚ್‌ನಲ್ಲಿಯೇ ನೀಡಲಾಗಿದೆ. ಈ ಘಟನೆ ನಂತರ ಗುಜರಾತ್ ರಾಜ್ಯದಾದ್ಯಂತ ನಡೆದ ಹಲವು ಹಿಂಸಾಚಾರ ಘಟನೆಗಳಲ್ಲಿ ಸುಮಾರು 1200 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಬಹುತೇಕ ಮುಸ್ಲಿಮರು ಎಂದೇ ಹೇಳಲಾಗಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೊದಲ ಆಡಳಿತಾವಧಿಯಲ್ಲಿ ನಡೆದ ಸರಣಿ ಕೋಮುಗಲಭೆಗಳಿಂದ ಅಮಾಯಕರು ಜೀವ ಹಿಡಿದು ದಿನಗಳನ್ನು ಕಳೆಯಬೇಕಾಗಿ ಬಂದುದು ಆಗಿನ ಬಿಜೆಪಿ ಆಡಳಿತಕ್ಕಾದ ಒಂದು ಕಪ್ಪುಚುಕ್ಕೆ ಎಂದೇ ಬಣ್ಣಿಸಲಾಗಿದೆ. ಗೋಧ್ರಾ ದುರಂತದ ನಂತರ ನಡೆದ ಒಂಬತ್ತು ಪ್ರಕರಣಗಳಲ್ಲಿ ಸರ್ದಾರ್‌ಪುರ ಘಟನೆಯ ಬಗೆಗೆ ಮೊದಲ ತೀರ್ಪು ಈಗ ಹೊರಬಿದ್ದಿದೆ. ಎರಡು ವರ್ಷಗಳ ಹಿಂದೆ ಆರಂಭವಾದ ವಿಚಾರಣೆಯನ್ನು ತ್ವರಿತವಾಗಿಯೇ ಇತ್ಯರ್ಥ ಮಾಡಲಾಗಿದೆ. ರಾಜ್ಯ ಪೊಲೀಸರ ತನಿಖೆಯ ಬಗೆಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೇಮಕ ಮಾಡಿದ ವಿಶೇಷ ತನಿಖಾ ತಂಡ ಈ ಘಟನೆಯ ಬಗೆಗೆ ಸಾಕಷ್ಟು ಮಾಹಿತಿಯನ್ನು ಕಲೆಹಾಕಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ಬೇಗನೇ ತೀರ್ಪು ಹೊರಬರುವಲ್ಲಿ ಸಹಕರಿಸಿದೆ. ಉಳಿದ ಎಂಟು ಘಟನೆಗಳ ತೀರ್ಪುಗಳು ಶೀಘ್ರವೇ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆ ಆದರೆ ದ್ವೇಷದಿಂದ ಹಿಂಸಾಚಾರ ನಡೆಸುವ ಕೋಮುವಾದಿಗಳಿಗೆ ಪಾಠ ಕಲಿಸಿದಂತಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.